Darshan Thoogudeepa: ಪವಿತ್ರಾ ಗೌಡಗೆ ಜಾಮೀನು ಮಂಜೂರು
ಬೆಂಗಳೂರು, ಡಿಸೆಂಬರ್ 13: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಪವಿತ್ರಾ ಗೌಡಗೆ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ ಬಂಧನವಾಗಿದ್ದ ನಟ ದರ್ಶನ್ ತೂಗುದೀಪ್, ಪವಿತ್ರಾ ಗೌಡ ಸೇರಿದಂತೆ ಎಲ್ಲಾ ಆರೋಪಿಗಳಿಗೂ ಜಾಮೀನು ಮಂಜೂರಾಗಿದೆ. ಬೆಂಗಳೂರಿನ ಪರಪ್ಪನ ಅಗ್ರಗಾರ ಜೈಲಿನಲ್ಲಿ ಆರು ತಿಂಗಳು ಕಳೆದಿರುವ ಪವಿತ್ರ ಗೌಡಗೆ ಇಂದು ಹೈಕೋರ್ಟ್ ಜಾಮೀನು ನೀಡಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಎನ್ನುವಾತನ ಕೊಲೆ ಪ್ರಕರಣ ಆರೋಪದ ಮೇಲೆ ನಟ ದರ್ಶನ್ ಜೊತೆಗೆ ಪವಿತ್ರಾ ಗೌಡರನ್ನು ಪೊಲೀಸರು ಬಂಧಿಸಿದ್ದರು. ಕಳೆದ ಜೂನ್ ತಿಂಗಳಲ್ಲಿ ಪವಿತ್ರಾ ಗೌಡ ಅವರನ್ನು ಬಂಧಿಸಲಾಗಿತ್ತು. ಪವಿತ್ರ ಗೌಡ ಈ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿದ್ದ ಕಾರಣ ಜಾಮೀನು ಸಿಗುವುದು ವಿಳಂಬವಾಗಿದ್ದು, ಇಂದು ಅಂದರೆ ಡಿಸೆಂಬರ್ 13ರಂದು ಪವಿತ್ರಾ ಗೌಡಗೆ ಜಾಮೀನು ಮಂಜೂರಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿದ್ದ ದರ್ಶನ್, ಪವಿತ್ರಾ ಗೌಡ ಮಾತ್ರವಲ್ಲದೇ ದರ್ಶನ್ ಸಹಚರರಾದ ಪ್ರದೋಶ್, ನಾಗರಾಜ್, ಜಗದೀಶ್, ಅನುಕುಮಾರ್, ಹಾಗೂ ಲಕ್ಷ್ಮಣ್‌ಗೂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇನ್ನು ನಟ ದರ್ಶನ್ ಈ ಹಿಂದೆಯೇ ಅನಾರೋಗ್ಯದ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು ಪಡೆದಿದ್ದರು. ಅಲ್ಲದೇ ಈ ಹಿಂದೆ ಕೂಡ ಪ್ರಕರಣ ಸಂಬಂಧ ಬಂಧನವಾಗಿದ್ದ ಕೆಲವು ಆರೋಪಿಗಳು ಜಾಮೀನು ಪಡೆದು ಹೊರಬಂದಿದ್ದು, ಇದೀಗ ಈ ಕೊಲೆ ಪ್ರಕರಣದಲ್ಲಿ ಸಿಲುಕಿದ್ದ ಎಲ್ಲಾ ಆರೋಪಿಗಳಿಗೂ ಜಾಮೀನು ಸಿಕ್ಕಂತಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಪಾತ್ರವೇನು?
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎನ್ನುವಾತ ನಟಿ ಪವಿತ್ರಾ ಗೌಡಗೆ ಸಾಮಾಜಿಕ ಜಾಲತಾಣದಲ್ಲಿ ಮೆಸೇಜ್ ಮಾಡಿ ತೊಂದರೆ ಕೊಟ್ಟಿದ್ದಲ್ಲದೇ, ಖಾಸಗಿ ಫೋಟೋಗಳನ್ನು ಪವಿತ್ರಾಗೆ ಕಳುಹಿಸಿದ್ದ ಎನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದ ಪವಿತ್ರಾ ಗೌಡ ಈ ವಿಚಾರವನ್ನು ಆಪ್ತರಿಗೆ ತಿಳಿಸಿದ್ದು, ವಿಚಾರ ನಟ ದರ್ಶನ್ ವರೆಗೂ ತಲುಪಿತ್ತು. ಈ ಹಿನ್ನೆಲೆಯಲ್ಲಿ ರೇಣುಕಾಸ್ವಾಮಿಯನ್ನು ಅಪಹರಣ ಮಾಡಿಕೊಂಡು ಬಂದು ಬೆಂಗಳೂರಿನಲ್ಲಿ ಚಿತ್ರಹಿಂಸೆ ನೀಡಲಾಗಿತ್ತು. ಆರೋಪಿಗಳು ನೀಡಿದ ಚಿತ್ರಹಿಂಸೆಗೆ ರೇಣುಕಾಸ್ವಾಮಿ ಸಾವನ್ನಪ್ಪಿದ್ದು, ಬಳಿಕ ಆತನ ಶವವನ್ನು ರಾಜಕಾಲುವೆಗೆ ಎಸೆಯಲಾಗಿತ್ತು.
ಈ ಪ್ರಕರಣದ ಬೆನ್ನು ಹತ್ತಿದ ಪೊಲೀಸರು ನಟ ದರ್ಶನ್ ಸೇರಿದಂತೆ ಒಟ್ಟು ಹದಿನಾಲ್ಕು ಆರೋಪಿಗಳನ್ನು ಬಂಧಿಸಿದ್ದರು. ಪ್ರಕರಣದಲ್ಲಿ ಪವಿತ್ರಾ ಗೌಡ ಎ-೧ ಆರೋಪಿಯನ್ನಾಗಿ ಮಾಡಲಾಗಿತ್ತು. ಹತ್ತು ದಿನಗಳು ಪೊಲೀಸ್ ಕಸ್ಟಡಿಯಲ್ಲಿದ್ದ ಪವಿತ್ರಾ ಗೌಡ, ಬಳಿಕ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದು, ವಿಚಾರಣಾಧೀನ (UTP) ಕೈದಿ ನಂಬರ್- 6024 ನೀಡಲಾಗಿತ್ತು. ಆರು ತಿಂಗಳಿನಿಂದ ಜೈಲಿನ ಕತ್ತಲೆಯಲಿದ್ದ ಪವಿತ್ರಾ ಗೌಡ ಬಿಡುಗಡೆಗೆ ಕುಟುಂಬಸ್ಥರು ಹರಸಾಹಸ ಪಟ್ಟಿದ್ದರು. ಕೊನೆಗೂ ಇಂದು ಜಾಮೀನು ಮಂಜೂರಾಗಿದ್ದು, ಕಾನೂನು ಪ್ರಕ್ರಿಯೆ ಮುಗಿದ ಬಳಿಕ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿ ಮನೆಗೆ ತೆರಳಲಿದ್ದಾರೆ.












Click it and Unblock the Notifications