B-Khata: ಬಿ-ಖಾತಾದಿಂದ ಎ-ಖಾತಾ ಪರಿವರ್ತನೆಗೆ ಗ್ರಹಣ: ಸಕಾಲಕ್ಕೆ ದಾಖಲೆ ಸಿಗದೇ ನಾಗರಿಕರ ಪರದಾಟ
ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರ ಇ-ಖಾತಾಗಳ ವಿತರಣೆ ಜೊತೆಗೆ ಬಿ-ಖಾತಾ ಹೊಂದಿರುವ ಆಸ್ತಿಗಳನ್ನು ಎ-ಖಾತಾಗೆ ಪರಿವರ್ತಿಸಿ ವಿತರಿಸುವುದಾಗಿ ಘೋಷಿಸಿತ್ತು. ಕಳೆದ ನವೆಂಬರ್ 1 ರಿಂದ ಬೆಂಗಳೂರಿನಲ್ಲಿ ಬಿ-ಖಾತಾ ಪರಿವರ್ತನೆಗೆ ಅರ್ಜಿಗಳನ್ನು ಆಹ್ವಾನಿಸಿತ್ತು. ಅರ್ಜಿ ಸಲ್ಲಿಸಿದ ಅರ್ಹರ ಖಾತೆಗಳು ಪರಿವರ್ತನೆಗೊಂಡಿವೆಯಾ?, ಯೋಜನೆ ಎಷ್ಟರ ಮಟ್ಟಿಗೆ ಸಾಕಾರವಾಗಿದೆ? ಹೊಸ ನಿವೇಶನಗಳಿಗೆ ಎ-ಖಾತಾ ನೀಡಲಾಗುತ್ತಿದೆ?. ಯಾವುದೇ ಯೋಜನೆ ಘೋಷಿಸಿದರೆ ಸಾಲದು ಅದರ ಪರಿಣಾಮಕಾರಿ ಅನುಷ್ಠಾನವು ಮುಖ್ಯವಾಗಿರುತ್ತದೆ. ಅಂದಾಗಲೇ ಜನರಿಗೆ ಅದರ ಪ್ರಯೋಜನ ದಕ್ಕುತ್ತದೆ.
ಈ ಮಾತು ಹೇಳಲು ಕಾರಣವಿದೆ, ಬೆಂಗಳೂರು ಸೇರಿ ರಾಜ್ಯಾದ್ಯಂತ ಇ-ಖಾತಾ ಮತ್ತು ಬಿ-ಖಾತಾಗಳ ಪರಿವರ್ತನೆ ಸೌಲಭ್ಯವನ್ನು ವಿಸ್ತರಿಸಲಾಗಿದೆ. ಬೆಂಗಳೂರಿನಲ್ಲಿ ನಿಯಮಗಳಡಿ ಬಿ-ಖಾತಾ ಅಸ್ತಿ ಮಾಲೀಕರು ಎ-ಖಾತಾ ಪರಿವರ್ತನೆಗೊಳ್ಳಲು ಹಾಗೂ ಹೊಸ ನಿವೇಶನಗಳಿಗೆ ನೇರವಾಗಿ ಇ-ಖಾತಾ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಆದರೆ 45 ದಿನ ಕಳೆದರೂ ಯಾವುದೇ ಪ್ರಯೋಜನವಾಗಿಲ್ಲ. ವಿವಿಧೆಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರ್ಜಿದಾರರಿಗೆ ನಿಗದಿತ ಅವಧಿಯಲ್ಲಿ ಬಿ-ಖಾತಾಗಳು ಪರಿವರ್ತನೆ ಆಗಿ ಆಸ್ತಿದಾರರ ಕೈ ಸೇರುತ್ತಿಲ್ಲ. ಇದರಿಂದ ದಾಖಲೆ ಕೊರತೆ ಎದುರಾಗಿ ಯಾವುದೇ ಆಸ್ತಿ ಕೆಲಸಗಳು ಆಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಜಿಬಿಎ ವ್ಯಾಪ್ತಿಗೂ ಒಳಪಡುವ ಹೆಮ್ಮಿಗೆಪುರ ಗ್ರಾಮ ಪಂಚಾಯಿತಿ ನಿವಾಸಿಗಳಲ್ಲಿ ಹಲವರು ಇಂಥಹ ಸಮಸ್ಯೆ ಎದುರಿಸುತ್ತಿದ್ದಾರೆ.

ರಾಜ್ಯ ಸರ್ಕಾರ ಹೇಳಿದ್ದೇನು? ಆಗುತ್ತಿರುವುದೇನು?
ನವೆಂಬರ್ 1 ರಿಂದ ಫೆಬ್ರವರಿ ವರೆಗೆ ಬೆಂಗಳೂರಿನಲ್ಲಿ ಬಿ-ಖಾತಾವನ್ನು ಎ-ಖಾತಾಗೆ ಪರಿವರ್ತಿಸಲು ಸರ್ಕಾರ ವಿಶೇಷ 100 ದಿನಗಳ ಅಭಿಯಾನ ಆರಂಭಿಸಿತ್ತು. ಅಭಿಯಾನದಡಿ ನಾಗರಿಕರು ಪಾಲಿಕೆಯ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಇ-ಕೆವೈಸಿ ದೃಢೀಕರಿಸಿ, ಕಟ್ಟಡ ರೇಖಾಚಿತ್ರ ಮತ್ತು ಇತರ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು. ಕಡಿಮೆ ಶುಲ್ಕದಲ್ಲಿ ತಮ್ಮ ನಿವೇಶನದ ಎ-ಖಾತಾ ಪಡೆದುಕೊಳ್ಳುವಂತೆ ಸೂಚಿಸಿತ್ತು. ಖುದ್ದು ಡಿಸಿಎಂ ಡಿಕೆ ಶಿವಕುಮಾರ್ ಅವರೇ ಈ ಮಾಹಿತಿ ನೀಡಿದ್ದರು.
ಎ-ಖಾತಾ ಕಡ್ಡಾಯ, ಆದರೂ ಸಿಗುತ್ತಿಲ್ಲ!
ಆಸ್ತಿ ಮಾರಾಟ, ನೋಂದಣಿ, ಮನೆ ಕಟ್ಟಲು, ಪಾಲಿಕೆ ನಕ್ಷೆ ಮಂಜೂರಾತಿಗೆ, ಬೆಸ್ಕಾಂ ಮತ್ತು ಜಲಮಂಡಳಿ ಸಂಪರ್ಕ ಸೌಲಭ್ಯ ಪಡೆಯಲು ಹೀಗೆ ಎಲ್ಲದ್ದಕ್ಕೂ ಎ-ಖಾತಾ ಕಡ್ಡಾಯವಾಗಿದೆ. ಆದರೆ ಬಿ-ಖಾತಾಗಳ ಪರಿವರ್ತನೆಗೆ ಅರ್ಜಿ ಸಲ್ಲಿಸಿದವರಿಗೆ ಎ-ಖಾತಾ ಸಿಗುತ್ತಿಲ್ಲ. ಹೊಸದಾಗಿ ಖರೀದಿಸಿದ ನಿವೇಶನಗಳಿಗೆ ಇ-ಖಾತಾ ನೀಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ನಿಗದಿತ ಸಮಯ ಮೀರಿದರೂ ಕನಿಷ್ಠ ಪಕ್ಷ ಸಲ್ಲಿಕೆ ಆಗಿರುವ ಅರ್ಜಿಗಳ ಸ್ಟೇಟಸ್ ಬದಲಾಗಿಲ್ಲ. ತಿಂಗಳುಗಳು ಕಳೆದರು ಅರ್ಜಿಗಳ ಸ್ಥಿತಿ ಹಾಗೆಯೇ ಇದೆ ಎಂದು ಹೆಸರು ಹೇಳಲಿಚ್ಚಿಸದ ಹೆಮ್ಮಿಗೆಪುರ ಖಾಸಗಿ ಕಂಪನಿ ಉದ್ಯೋಗಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
'ನಾನು ಹೆಮ್ಮಿಗೆಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೊಸ ಲೇಔಟ್‌ನಲ್ಲಿ ಲಕ್ಷಾಂತರ ರೂಪಾಯಿ ಕೊಟ್ಟು ಒಂದು ನಿವೇಶನ ಖರೀಸಿದ್ದೇನೆ. ಅರ್ಧದಷ್ಟು ಹಣ ಈಗಾಗಲೇ ನೀಡಿದ್ದೇನೆ. ಬಾಕಿ ಹಣಕ್ಕಾಗಿ ಬ್ಯಾಂಕ್ ಲೋನ್ ಪಡೆಯಲು ಮುಂದಾಗಿದ್ದೆ. ಎರಡು ಬಾರಿಯು ಅಗತ್ಯ ಹಣ ನೀಡಲು ಬ್ಯಾಂಕ್ ಒಪ್ಪಿತ್ತು. ಸ್ವತಂತ್ರ ನಿವೇಶನಗಳಿಗೆ ಇ-ಖಾತಾ ಇಲ್ಲದೇ ನೋಂದಣಿಗೆ ಅವಕಾಶ ಇಲ್ಲ. ಹೊಸ ಇ-ಖಾತಾಗಾಗಿ ಅರ್ಜಿ ಹಾಕಿ ಹಲವು ತಿಂಗಳಾಗಿವೆ. ಆದರೆ ಸರ್ಕಾರ ಈವರೆಗೆ ಇ-ಖಾತಾ ನೀಡಿಲ್ಲ.
ಎರಡು ಬಾರಿ ಬ್ಯಾಂಕ್ ಒಪ್ಪಿದರೂ ಲೋನ್ ಕೈತಪ್ಪಿದೆ. ಲೋನ್ ಪ್ರಕ್ರಿಯೆಯ ಶುಲ್ಕ ಪಾವತಿಸಿದ್ದೇನೆ. ದಾಖಲೆಗಳು ಸರಿ ಇದ್ದರೆ ಲೋನ್ ಹಣ ನೇರವಾಗಿ ನಾವು ಕೊಡಬೇಕಾದವರ ಖಾತೆಗೆ ಜಮೆ ಆಗುತ್ತದೆ. ಈ ಪ್ರಕ್ರಿಯೆಗೆ ಇಂತಿಷ್ಟು ಸಮಯದ ಗಡುವು ಇರುತ್ತದೆ. ಅಷ್ಟರೊಳಗೆ ಅಗತ್ಯ ದಾಖಲೆ ನೀಡಿ, ರಿಜಿಸ್ಟ್ರೇಷನ್ (ನೋಂದಣಿ) ಮಾಡಬೇಕು. ದಾಖಲೆ ಇಲ್ಲದ್ದಕ್ಕೆ ನೋಂದಣಿ ಸಹ ಆಗುತ್ತಿಲ್ಲ', ಸಾಲದ ಹಣ ಆಸ್ತಿದಾರರಿಗೆ ಜಮೆ ಆಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಎ-ಖಾತಾ ಸಹ ಸಿಗದೇ ಪರದಾಟ
'ಸದ್ಯ ನಾನಿರುವ ಮನೆ ಬಾಪೂಜಿ ನಗರದಲ್ಲಿದೆ. ಕಾಲ ಕಾಲಕ್ಕೆ ಬಾಕಿ ಉಳಿಸಿಕೊಳ್ಳದೇ ಆಸ್ತಿ (ಮನೆ) ತೆರಿಗೆ ಪಾವತಿಸಿದ್ದೇನೆ. ಮನೆ ಇರುವ ನಿವೇಶನಕ್ಕೆ ಬಿ-ಖಾತಾ ಇದೆ. ಅದನ್ನು ಎ-ಖಾತಾಗೆ ಪರಿವರ್ತಿಸಲು ಅರ್ಜಿ ಸಲ್ಲಿಸಿದರೂ ಅಹಿತ ಖಾತಾ ಪರಿವರ್ತನೆ ಆಗಿಲ್ಲ ಎಂದು ತಿಳಿಸಿದರು.
ನಾಗರಿಕರಾದ ಶ್ರೀನಿವಾಸ ಮಠ ಅವರು ಸಹ ಸರ್ಕಾರ ನಡೆಯನ್ನು ಖಂಡಿಸಿದ್ದಾರೆ. ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ ಆಗಬೇಕಾದರೆ ಆಸ್ತಿ ಮೌಲ್ಯದ ಶೇ 5ರಷ್ಟು ಹಣ ಶುಲ್ಕವಾಗಿ ಪಾವತಿಸಬೇಕು. ಇಷ್ಟು ದೊಡ್ಡ ಮೊತ್ತದ ಹಣ ಕಟ್ಟಲು ಅನೇಕರು ಹಿಂದೇಟು ಹಾಕುತ್ತಿದ್ದಾರೆ. ಮತ್ತೊಂದೆಡೆ ಈಗಾಗಲೇ ಎ-ಖಾತಾ ಪರಿವರ್ತನೆಗೆ ಅರ್ಜಿ ಸಲ್ಲಿಸಿದವರಿಗೆ ಹೊಸ ಖಾತಾ ನೀಡುತ್ತಿಲ್ಲ. ಯೋಜನೆ ಘೋಷಣೆ ಹಂತದಲ್ಲಿದ್ದು, ಕಾರ್ಯರೂಪಕ್ಕೆ ಬಂದಿಲ್ಲ ಎಂದು ದೂರಿದರು.
ಇದೆಲ್ಲದರ ಬಗ್ಗೆ ಹೆಮ್ಮಿಗೆಪುರ ಗ್ರಾಮ ಪಂಚಾಯಿತಿ ಸಿಬ್ಬಂದಿ ಪ್ರಶ್ನಿಸಿದರೆ ಅವರಿಗೆ ಈ ಬಗ್ಗೆ ತರಬೇತಿ ನೀಡಿಲ್ಲ ಎಂಬುದು ಗೊತ್ತಾಗಿದೆ. ಜೊತೆಗೆ ಶೇ.5ರಷ್ಟು ಶುಲ್ಕ ಪಾವತಿ ಕಡ್ಡಾಯವಾಗಿದ್ದರಿಂದ ಜನ ಖಾತಾ ಪರಿವರ್ತನೆಗೆ ಮುಂದಾಗಿಲ್ಲ. ಅದನ್ನು ಕಡಿಮೆ ಮಾಡಲು ಸರ್ಕಾರ ನಿರ್ಧಾರ ಕೈಗೊಳ್ಳಲಿದೆ' ಎಂದು ಅಲ್ಲಿನ ಸಿಬ್ಬಂದಿ ತಿಳಿಸಿದ್ದಾರೆಂದು ಮಾಹಿತಿ ನೀಡಿದರು.
ಅರ್ಜಿ ಸಲ್ಲಿಸಿದ 45ದಿನದಲ್ಲಿ ಎ-ಖಾತಾ ನೀಡಲಾಗುವುದೆಂದು ಸರ್ಕಾರ ಭರವಸೆ ನೀಡಿದೆ. ಅವರ ಮಾತು ಕೇಳಿ ಅರ್ಜಿ ಸಲ್ಲಿಸಿದರೂ ಖಾತಾ ವಿತರಣೆ ಆಗಿಲ್ಲ. ಈ ಬಗ್ಗೆ ಸರಿಯಾದ ಅಪ್ಡೇಟ್ ನಾಗರಿಕರಿಗೆ ಸಿಗುತ್ತಿಲ್ಲ. ಖಾತಾ ಪರಿವರ್ತನೆ, ವಿತರಣೆ ಬಗ್ಗೆ ಸರ್ಕಾರದ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡುವುದು ಅಗತ್ಯವಿದೆ ಎಂದರು.
ರಿಯಲ್ ಎಸ್ಟೇಟ್ ಮೇಲೂ ಪರಿಣಾಮ
ಜಿಬಿಎ ಅಧಿಕಾರಿಗಳು ಬಿ-ಖಾತಾ ಪತಿವರ್ತನೆಗಾಗಿ ನಿವೇಶನದ ದಾಖಲೆ, ಫೋಟೋ ಪಡೆದಿದ್ದಾರೆ. ಆದರೆ ಈವರೆಗೂ ಒಂದೇ ಒಂದು ಬಿ ಖಾತಾ ನೀಡಿಲ್ಲ. ಡಿಕೆ ಶಿವಕುಮಾರ್ ಅವರ 100 ದಿನದಲ್ಲಿ ಖಾತಾ ವಿತರಣೆ ಭರವಸೆ ಕೇವಲ ಭರವಸೆ ಆಗಿಯೇ ಉಳಿದಿದೆ. ರಾಜ್ಯದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಖಾತಾಗಳನ್ನು ಕನ್ವರ್ಟ್ (ವಸತಿ ಯೋಗ್ಯವೆಂದು) ಮಾಡಿಕೊಡಲು ಸರ್ಕಾರ ಅಧಿಕೃತ ಜಾಲತಾಣ ನಿರ್ಮಿಸಿದ್ದು, ಅದರಿಂದ ಪ್ರಯೋಜನವಾಗಬೇಕಿದೆ.
ಸರ್ಕಾರ ಹೊಸ ಲೇಔಟ್‌ಗಳಿಗೂ ಅಗತ್ಯ ಖಾತಾ ನೀಡುವುದಾಗಿ ಹೇಳಿತ್ತು. ಅದು ಸಹ ಆಗಿಲ್ಲ. ಇದರಿಂದ ಆಸ್ತಿ ನೋಂದಣಿಗೆ ತೊಂದರೆ ಆಗುತ್ತಿದೆ. ಖರೀದಿ ಹಾಗೂ ಮಾರಾಟಕ್ಕೆ ಪ್ರಕ್ರಿಯೆಯಲ್ಲಿ ಜನರು ತೊಂದರೆ ಅನುಭವಿಸುವಂತಾಗಿದೆ. ರಿಯಲ್ ಎಸ್ಟೇಟ್ ಮೇಲೂ ಇದರ ನೇರ ಪರಿಣಾಮ ಉಂಟಾಗುತ್ತಿದೆ. ಇದೆಲ್ಲ ಅರ್ಥ ಮಾಡಿಕೊಂಡು ಸರ್ಕಾರ ಕೂಡಲೇ ಸಮಸ್ಯೆ ಬಗೆಹರಿಸುವ, ನಾಗರಿಕರಿಗೆ ಸ್ಪಂದಿಸಬೇಕೆಂದು ಅವರು ಆಗ್ರಹಿಸಿದರು.












Click it and Unblock the Notifications