Auto Strike : ಬೆಂಗಳೂರಿನಲ್ಲಿ ಆಟೋ ಚಾಲಕರನ್ನು ಬಂಧಿಸಿದ ಪೊಲೀಸರು, ಇಲ್ಲಿದೆ ವಿವರ
ಸೋಮವಾರ ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಸೇವೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಆಟೋರಿಕ್ಷಾ ಚಾಲಕರನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು, ಮಾರ್ಚ್ 20: ರ‍್ಯಾಪಿಡೋ ಮಾದರಿಯ ಅಗ್ರಿಗೇಟರ್ ಬೈಕ್ ಸೇವೆ ವಿರೋಧಿಸಿ ಬೆಂಗಳೂರಿನಲ್ಲಿ ಆಟೋ ಚಾಲಕರ ಸಂಘದಿಂದ ಪ್ರತಿಭಟನೆ ಮಾಡುತ್ತಿದ್ದ ಆಟೋ ಚಾಲಕರನ್ನು ಪೊಲೀಸರು ಬಂಧಿಸಿದ್ದಾರೆ.
ಸೋಮವಾರ ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಸೇವೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಆಟೋರಿಕ್ಷಾ ಚಾಲಕರನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ. ರಾಪಿಡೊ ಬೈಕ್ ಟ್ಯಾಕ್ಸಿಗಳು ಮತ್ತು ಇತರ ಇ-ಬೈಕ್ ಸೇವೆಗಳ ವಿರುದ್ಧ ಬೆಂಗಳೂರು ಆಟೋ ಚಾಲಕರ ಒಕ್ಕೂಟಗಳ ಒಕ್ಕೂಟವು ಈ ಸೇವೆಗಳು ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿವೆ. ನಗರದಲ್ಲಿ ಇವುಗಳ ಸೇವೆಯಿಂದ ಆಟೋ ಚಾಲಕರ ಜೀವನೋಪಾಯಕ್ಕೆ ತೊಂದರೆಯಾಗುತ್ತಿದೆ ಎಂದು ಪ್ರತಿಭಟನೆ ನಡೆಸಲಾಗುತ್ತಿದೆ.

ಕರ್ನಾಟಕದಲ್ಲಿ ರಾಪಿಡೋ ಬೈಕ್ ಚಾಲಕರು ಮತ್ತು ರಿಕ್ಷಾ ಚಾಲಕರ ನಡುವಿನ ಘರ್ಷಣೆ ಇತ್ತೀಚೆಗೆ ಹೆಚ್ಚುತ್ತಿದೆ. ಇಂದಿರಾನಗರದ ಮೆಟ್ರೋ ನಿಲ್ದಾಣದ ಬಳಿ ಆಟೋರಿಕ್ಷಾ ಚಾಲಕನೊಬ್ಬ ರ‍್ಯಾಪಿಡೋ ಬೈಕ್ ಸವಾರನಿಗೆ ಕಿರುಕುಳ ನೀಡಿದ ವೀಡಿಯೊ ವೈರಲ್ ಆದ ಪರಿಣಾಮ ಮಾರ್ಚ್ ಮೊದಲ ವಾರದಲ್ಲಿ ಚಾಲಕನನ್ನು ಬಂಧಿಸಲಾಗಿತ್ತು.
ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಬೈಕ್ ಟ್ಯಾಕ್ಸಿ ಸೇವೆ ನಿಷೇಧಿಸಬೇಕು ಹಾಗೂ ದ್ವಿಚಕ್ರ ವಾಹನಗಳನ್ನು ಬೈಕ್ ಟ್ಯಾಕ್ಸಿಯಾಗಿ ಬಳಸುವುದನ್ನು ನಿಷೇಧಿಸಬೇಕು ಎಂದು ಒಕ್ಕೂಟಗಳು ಒತ್ತಾಯಿಸಿ ಪ್ರತಿಭಟನೆಯನ್ನು ಸೋಮವಾರ ಆಟೋ ಸೇವೆಯನ್ನು ಬಂದ್ ಮಾಡಲಾಗಿತ್ತು. ಬೆಂಗಳೂರಿನಲ್ಲಿ 21 ಆಟೋ ಚಾಲಕರ ಸಂಘಟನೆಗಳಿದ್ದು, 2.10 ಲಕ್ಷಕ್ಕೂ ಹೆಚ್ಚು ಆಟೋಗಳು ಸೇವೆ ನೀಡುತ್ತಾ ಬಂದಿವೆ.
ಕೋವಿಡ್ ಸಮಯದಲ್ಲಿ ಆಟೋ ಚಾಲಕರು ಹೊಟ್ಟೆಗೂ ಕಷ್ಟಪಡುವ ಸ್ಥಿತಿಯನ್ನು ಅನುಭವಿಸಿದ್ದು, ಈಗ ಸರ್ಕಾರ ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡಿರುವ ಕಾರಣ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂಬ ಅಸಮಾಧಾನ ಅಟೋ ಚಾಲಕರು ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಹಲವರು ತಮ್ಮ ವೈಯಕ್ತಿಕ ದ್ವಿಚಕ್ರ ವಾಹನಗಳನ್ನು ಬೈಕ್ ಟ್ಯಾಕ್ಸಿಯಾಗಿ ಬಳಸುತ್ತಿದ್ದು, ಆಟೋ ಚಾಲಕರ ಅದಾಯಕ್ಕೆ ಮತ್ತಷ್ಟು ಹೊಡೆತ ನೀಡಿದೆ.

ದೇಶದ ದೆಹಲಿ, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳಲ್ಲಿ ಬೈಕ್ ಟ್ಯಾಕ್ಸಿ ನಿಷೇಧ ಮಾಡಲಾಗಿದೆ. ಈಗ ಕರ್ನಾಟಕ ರಾಜ್ಯದಲ್ಲಿಯೂ ಬೈಕ್ ಟ್ಯಾಕ್ಸಿ ಸೇವೆ ನಿಷೇಧಿಸಬೇಕು ಎಂದು ಆಟೋ ಚಾಲಕರು ಆಗ್ರಹಿಸಿದ್ದಾರೆ. ಇನ್ನೇನು ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕ ಘೊಷಣೆಯಾಗಲಿದೆ. ಈ ಸಮಯದೊಳಗೆ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬೆಂಗಳೂರು ಆಟೋ ರಿಕ್ಷಾ ಚಾಲಕರ ಸಂಘಟನೆಗಳ ಒಕ್ಕೂಟ ಸೋಮವಾರ ಪ್ರತಿಭಟನೆ ನಡೆಸುತ್ತಿದೆ.
ಬೆಂಗಳೂರಿನಲ್ಲಿ ಆಟೋ ಚಾಲಕರು ನಡೆಸುತ್ತಿರುವ ಮುಷ್ಕರಕ್ಕೆ ಓಲಾ ಆಟೋ ಮತ್ತು ಟ್ಯಾಕ್ಸಿ ಚಾಲಕರ ಅಸೋಸಿಯೇಷನ್ ಕೂಡ ಬೆಂಬಲ ನೀಡಿದ್ದು, ಸ್ವಯಂಪ್ರೇರಿತವಾಗಿ ಬಂದ್‌ಗೆ ಬೆಂಬಲ ನೀಡಲು ಮುಂದಾಗಿದೆ. ಈ ಬಗ್ಗೆ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಹೇಳಿಕೆ ನೀಡಿದ್ದು, ಪ್ರತಿಭಟನೆಗೆ ನಮ್ಮ ಸಂಘಟನೆಯ ಬೆಂಬಲ ಕೂಡ ಇದೆ. ಆದರೆ, ಯಾವ ಚಾಲಕರಿಗೂ ಒತ್ತಾಯ ಮಾಡಲಾಗಿಲ್ಲ. ಸ್ವಯಂ ಪ್ರೇರಿತವಾಗಿ ಬಂದ್‌ಗೆ ಬೆಂಬಲ ನೀಡಲು ತಿಳಿಸಿದ್ದೇವೆ. ಸರ್ಕಾರ ಅನಧಿಕೃತ ಬೈಕ್ ಟ್ಯಾಕ್ಸಿ ಸೇವೆಯನ್ನು ನಿಲ್ಲಿಸಬೇಕು. ಇಲ್ಲದಿದ್ದರೇ ಲಕ್ಷಾಂತರ ಆಟೋ ಚಾಲಕರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಸೋಮವಾರ ಆಟೋ ಚಾಲಕರು ಸೇವೆಯನ್ನು ಬಂದ್ ಮಾಡಿರುವ ಕಾರಣ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಹೆಚ್ಚುವರಿ ಬಸ್‌ಗಳನ್ನು ಬಿಟ್ಟಿದೆ. ನಗರದ ಪ್ರಮುಖ ಸ್ಥಳಗಳಿಗೆ ತೆರಳುವ ಪ್ರಯಾಣಿಕರಿಗೆ ತೊಂದರೆಯಾಗಬಾರದು ಎಂದು ಶಿವಾಜಿನಗರ, ಮೆಜೆಸ್ಟಿಕ್, ಕೆ.ಆರ್.ಮಾರುಕಟ್ಟೆ , ಶಾಂತಿನಗರ, ಯಶವಂತಪುರ ನಿಲ್ದಾಣಗಳಿಂದ ಹೆಚ್ಚುವರಿಯಾಗಿ ಬಸ್‌ಗಳನ್ನು ಹಲವು ಭಾಗಗಳಿಗೆ ನಿಗದಿ ಮಾಡಲಾಗಿದೆ.












Click it and Unblock the Notifications