Bengaluru: ಆಟೋ ಪ್ರಯಾಣಿಕರಿಗೆ ದರ ಏರಿಕೆ ಬಿಸಿ: ಕನಿಷ್ಠ ದರ 50 ರೂ.ಗೆ ಏರಿಸಲು ಚಾಲಕರ ಪಟ್ಟು
ಬೆಂಗಳೂರು: ಬೆಂಗಳೂರಿನಲ್ಲಿ ವಾಸಿಸುತ್ತಿರುವ ಎಲ್ಲರಿಗೂ ಈಗ ಮತ್ತೊಂದು ಬೆಲೆ ಏರಿಕೆಯ ಭೀತಿ ಎದುರಾಗಿದೆ. ಕೇಂದ್ರ ಸರ್ಕಾರವು ಆಟೋ ಎಲ್.ಪಿ.ಜಿ ದರವನ್ನು ಪ್ರತಿ ಲೀಟರ್‌ಗೆ ಬರೋಬ್ಬರಿ 5.73 ರೂಪಾಯಿಗಳಷ್ಟು ದಿಢೀರ್ ಏರಿಕೆ ಮಾಡಿದೆ. ಸರ್ಕಾರದ ಈ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿರುವ ಆಟೋ ಚಾಲಕರು, ಆಟೋ ಪ್ರಯಾಣ ದರವನ್ನು ಹೆಚ್ಚಿಸುವಂತೆ ರಾಜ್ಯ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಲಾರಂಭಿಸಿದ್ದಾರೆ. ಇದರಿಂದಾಗಿ ದಿನನಿತ್ಯ ಆಟೋಗಳಲ್ಲಿ ಸಂಚರಿಸುವ ಬೆಂಗಳೂರಿನ ಲಕ್ಷಾಂತರ ಪ್ರಯಾಣಿಕರಿಗೆ ಆಟೋ ಚಾರ್ಜ್ ಏರಿಕೆಯ ಬಿಸಿ ಮುಟ್ಟುವ ಸಾಧ್ಯತೆ ದಟ್ಟವಾಗಿದೆ.
ಬೆಲೆ ಏರಿಕೆ ಮತ್ತು ಗ್ಯಾಸ್ ಕೊರತೆಯ ಡಬಲ್ ಶಾಕ್
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ನೇರ ಪರಿಣಾಮವಾಗಿ ಕಳೆದ ಕೆಲವು ದಿನಗಳಿಂದ ರಾಜಧಾನಿಯಲ್ಲಿ ಎಲ್.ಪಿ.ಜಿ ಕೊರತೆ ತೀವ್ರವಾಗಿ ಎದುರಾಗಿತ್ತು. ಗ್ಯಾಸ್ ತುಂಬಿಸಿಕೊಳ್ಳಲು ಚಾಲಕರು ಬಂಕ್‌ಗಳ ಮುಂದೆ ಗಂಟೆಗಟ್ಟಲೆ ಕ್ಯೂ ನಿಂತು ಕಂಗಾಲಾಗಿದ್ದರು. ತಮ್ಮ ದಿನದ ಸಂಪಾದನೆಯ ಸಮಯವನ್ನು ಕೇವಲ ಗ್ಯಾಸ್‌ಗಾಗಿ ಸರತಿ ಸಾಲಿನಲ್ಲಿ ಕಳೆಯುವಂತಾಗಿತ್ತು.

ಈ ಸಂಕಷ್ಟದಿಂದ ಆಟೋ ಚಾಲಕರು ಇನ್ನೂ ಹೊರಬಂದಿಲ್ಲ, ಇದರ ಬೆನ್ನಲ್ಲೇ ಸರ್ಕಾರಿ ಸ್ವಾಮ್ಯದ ಬಂಕ್‌ಗಳಲ್ಲಿ ಎಲ್‌ಪಿಜಿ ಬೆಲೆ ಏರಿಕೆ ಮಾಡಿರುವುದು ಚಾಲಕರ ಆಕ್ರೋಶದ ಕಟ್ಟೆಯೊಡೆಯುವಂತೆ ಮಾಡಿದೆ. ಸರ್ಕಾರಿ ಬಂಕ್‌ಗಳೇ ಬೆಲೆ ಏರಿಕೆ ಮಾಡಿದಾಗ, ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಗ್ಯಾಸ್ ಬಂಕ್‌ಗಳ ಮಾಲೀಕರು ಕೂಡ ದರವನ್ನು ದುಪ್ಪಟ್ಟುಗೊಳಿಸಿ ಹಗಲು ದರೋಡೆಗೆ ಇಳಿದಿದ್ದಾರೆ. ಇದರಿಂದ ಆಟೋ ಚಾಲಕರು ಕೆಂಡಾಮಂಡಲಾಗಿದ್ದಾರೆ.
ಆಟೋ ಚಾಲಕರ ಪ್ರಮುಖ ಬೇಡಿಕೆಗಳೇನು?
ಸದ್ಯ ಬೆಂಗಳೂರಿನಲ್ಲಿ ಆಟೋ ಕನಿಷ್ಠ ದರ (ಮೊದಲ 2 ಕಿಲೋಮೀಟರ್‌ಗೆ) 36 ರೂ. ನಿಗದಿಪಡಿಸಲಾಗಿದೆ. ಆ ನಂತರದ ಪ್ರತಿ ಕಿಲೋಮೀಟರ್‌ಗೆ 18 ರೂ. ಇದೆ. ಆದರೆ, ಈಗ ಗ್ಯಾಸ್ ಬೆಲೆ ವಿಪರೀತವಾಗಿ ಏರಿಕೆಯಾಗಿರುವುದರಿಂದ ಈ ದರದಲ್ಲಿ ಆಟೋ ಓಡಿಸಿದರೆ ನಮಗೆ ಯಾವುದೇ ಲಾಭವಿಲ್ಲ. ಹೀಗಾಗಿ ಕನಿಷ್ಠ ದರವನ್ನು 50 ರೂ.ಗಳಿಗೆ ಹಾಗೂ ನಂತರದ ಪ್ರತಿ ಕಿಲೋಮೀಟರ್‌ಗೆ 25 ರೂ.ಗಳಿಗೆ ಏರಿಸಬೇಕು ಎಂದು ವಿವಿಧ ಆಟೋ ಚಾಲಕರ ಸಂಘಟನೆಗಳು ಒತ್ತಾಯಿಸಿವೆ.
ಈ ಕುರಿತು ಮಾತನಾಡಿರುವ ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ರಾಜ್ಯಾಧ್ಯಕ್ಷರಾದ ಸಂತೋಷ್ ಅವರು, "ದಿನೇ ದಿನೇ ಗ್ಯಾಸ್ ಬೆಲೆ ಏರಿಕೆಯಾಗುತ್ತಿದ್ದು, ನಮಗೆ ಜೀವನ ನಿರ್ವಹಣೆ ಮಾಡುವುದೇ ಕಷ್ಟಕರವಾಗಿದೆ. ಬೆಲೆ ಏರಿಕೆಗೆ ತಕ್ಕಂತೆ ಮೀಟರ್ ದರವನ್ನು ಪರಿಷ್ಕರಿಸಬೇಕು. ರಾಜ್ಯ ಸಾರಿಗೆ ಸಚಿವರು ಕೂಡಲೇ ನಮ್ಮ ಸಂಘಟನೆಗಳ ಜೊತೆ ಸಭೆ ನಡೆಸಿ ನಮ್ಮ ಕಷ್ಟಗಳನ್ನು ಆಲಿಸಬೇಕು" ಎಂದು ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ, ಚುನಾವಣೆ ಮುಗಿದ ಬೆನ್ನಲ್ಲೇ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಈ ಬೆಲೆ ಏರಿಕೆ ನಿರ್ಧಾರವು ಆಟೋ ಚಾಲಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಗ್ಯಾಸ್ ಬೆಲೆ ಏರಿಕೆ ನೆಪದಲ್ಲಿ ಆಟೋ ಚಾಲಕರು ಪ್ರಯಾಣ ದರ ಏರಿಸಲು ಪಟ್ಟು ಹಿಡಿದಿರುವುದು, ಪ್ರತಿದಿನ ಕೆಲಸ-ಕಾರ್ಯಗಳಿಗೆ ಆಟೋ ನೆಚ್ಚಿಕೊಂಡಿರುವ ಸಾಮಾನ್ಯ ಜನರಿಗೂ ಆರ್ಥಿಕ ಹೊರೆಯಾಗುವುದು ನಿಶ್ಚಿತವಾಗಿದೆ. ಸಾರಿಗೆ ಇಲಾಖೆ ಈ ಸಮಸ್ಯೆಯನ್ನು ಹೇಗೆ ಬಗೆಹರಿಸಲಿದೆ ಕಾದು ನೋಡಬೇಕಿದೆ.












Click it and Unblock the Notifications