Auto Rickshaw Permit: ಪರ್ಮಿಟ್ ನೀಡದೇ ದಂಡ ಹೇರಿಕೆ ಎಷ್ಟು ಸರಿ?: 3 ತಿಂಗಳು ಸಮಯ ಕೊಡಿ..
ಬೆಂಗಳೂರು, ಜುಲೈ 07: ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಆಟೋ ಚಾಲಕರು ಹೆಚ್ಚಿನ ದರ ವಸೂಲಿ ಮಾಡುತ್ತಿದ್ದಾರೆ ಎಂಬ ದೂರು ಕೇಳಿ ಬಂದಿದ್ದೇ ತಡ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಯಿತು. ಸಾರ್ವಜನಿಕರಿಂದ ದುಪ್ಪಟ್ಟು ದರ ವಸೂಲಿ ಮಾಡುತ್ತಿರುವ ಹಾಗೂ ಕಾನೂನು ಬಾಹೀರ ಆಟೋಗಳಿಗೆ ದಂಡ ವಿಧಿಸಲಾಗುತ್ತಿದೆ. ಈ ಮಧ್ಯ ಸರ್ಕಾರ ಸಾವಿರಾರು BS6 ಆಟೋಗಳಿಗೆ ಪರ್ಮಿಟ್ ನೀಡಿಲ್ಲ. ಹೀಗಿದ್ದರು ದಂಡ ಏಕೆ ವಿಧಿಸುತ್ತಿದೆ ಎಂಬ ಪ್ರಶ್ನೆ ಉದ್ಭವವಾಗಿದೆ.
ಹೌದು, ರಾಜ್ಯದಲ್ಲಿ ರಾಪಿಡೋ, ಓಲಾ ಊಬರ್ ಬ್ಯಾನ್ ಬೆನ್ನಲ್ಲೆ ಆಟೋ ಚಾಲಕರ ಹಾವಳಿ ಹೆಚ್ಚಾಯಿತು ಎಂದೂ ದೂರಲಾಗಿದೆ. ಅದರ ಬೆನ್ನಲ್ಲೆ ರಾಜ್ಯ ಸಾರಿಗೆ ಇಲಾಖೆ ಮನವಿ ಮೇರೆಗೆ ಪ್ರಾದೇಶಿಕ ಕಚೇರಿ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಕೇವಲ ಕಾನೂನುಬಾಹಿರ ಆಟೋಗಳನ್ನು ಮಾತ್ರವಲ್ಲದೇ ಸರಿಯಾದ ದಾಖಲೆಗಳು, ಇನ್ಶುರೆನ್ಸ್, ಎಮಿಷನ್ ಪರೀಕ್ಷೆ, ಲೈಸೆನ್ಸ್ ಹೀಗೆ ಎಲ್ಲವನ್ನು ಪರಿಶೀಲಿಸಿ ದಂಡ ವಿಧಿಸಲಾಗುತ್ತಿದೆ. ಸಾಲು ಸಾಲು ಆಟೋಗಳು ಸಾರಿಗೆ ಇಲಾಖೆ ಅಧಿಕಾರಿಗಳ ಮುಂದೆ ನಿಂತಿವೆ.

ಆಟೋ ಚಾಲಕರ ಸಂಕಷ್ಟಕ್ಕೆ ಇದೇ ಕಾರಣ..!
ಇದೇ ವಿಚಾರವಾಗಿ ಆಮ್ ಆದ್ಮಿ ಪಕ್ಷದ ಸಾರಿಗೆ ಇಲಾಖೆ ಸಭೆಯಲ್ಲಿ ಎಎಪಿ ರಾಜ್ಯ ಆಟೋ ಘಟಕದ ಅಧ್ಯಕ್ಷ ಆಯೂಬ್ ಖಾನ್ ಅವರು ಸಾರಿಗೆ ಸಚಿವರ ರಾಮಲಿಂಗಾ ರೆಡ್ಡಿ ಅವರನ್ನು ಪ್ರಶ್ನಿಸಿದ್ದಾರೆ. ಮನವಿ ಪತ್ರ ಸಲ್ಲಿಸಿದ್ದಾರೆ. ಕೊರೋನಾ ಸಂದರ್ಭದಲ್ಲಿ ಪ್ರಪಂಚದಾದ್ಯಂತ ಲಕ್ಷಾಂತರ ಸಾವು ನೋವುಗಳಾದವು. ಈ ವೇಳೆ ಸಂಚಾರಕ್ಕೆ ಬಿಡುಗಡೆಯಾದ ಸಾವಿರಾರು ಬಿಎಸ್ 6 (BS 6) ಆಟೋಗಳಿಗೆ ರಾಜ್ಯ ಸಾರಿಗೆ ಇಲಾಖೆಯವರು ಇದುವರೆವಿಗೂ ಪರ್ಮಿಟ್ ಗಳನ್ನು ನೀಡಿಲ್ಲ. ಆದರೆ ಈಗ ಏಕಾಏಕಿ ಆಟೋಗಳಿಗೆ ಎಲ್ಲೆಂದರಲ್ಲಿ ದಂಡವನ್ನು ವಿಧಿಸಿ ಜಪ್ತಿ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಕೇಳಿದರು.
ಏಕಾಏಕಿ ಬಿಎಸ್ 7 (BS 7) ಆಟೋಗಳನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಲು ಅವಕಾಶ ನೀಡಿದ್ದೆ ಆಟೋ ಚಾಲಕರ ಸಂಕಷ್ಟಕ್ಕೆ, ಇಂದಿನ ಸಮಸ್ಯೆಗಳಿಗೆ ಪ್ರಮುಖ ಕಾರಣವಾಗಿದೆ. ಕೊರೋನಾ ಸಂದರ್ಭದಲ್ಲಿ ಯಾವುದೇ ಸಾಲ ಸೌಲಭ್ಯಗಳು ಸಿಗದಿದ್ದ ದುಸ್ಥಿತಿಯ ಕಾಲದಲ್ಲಿ ತಮ್ಮ ಜೀವನವನ್ನು ನಡೆಸಲು ಬಿಎಸ್ 6 ಆಟೋಗಳನ್ನು ಖರೀದಿಸಿದ್ದರು. ಬೆಂಗಳೂರಿನ ಸಾವಿರಾರು ಆಟೋ ಚಾಲಕರುಗಳು ಸಾರಿಗೆ ಇಲಾಖೆಯಿಂದ ಕೇವಲ ನೊಂದಣಿ ಮಾತ್ರ ಮಾಡಿಕೊಂಡು ಪರ್ಮಿಟ್ ಭಾಗ್ಯವಿಲ್ಲದೆ ಇದುವರೆಗೂ ಸಾರಿಗೆ ಕಚೇರಿಗಳಿಗೆ ಅಲೆಯುತ್ತಿದ್ದಾರೆ ಎಂದು ಅವರು ಆಟೋ ಚಾಲಕ ಸಂಕಷ್ಟಗಳನ್ನು ವಿವರಿಸಿದರು.

ಭಾರೀ ದಂಡ ವಿಧಿಸುತ್ತಿರುವ ಅಧಿಕಾರಿಗಳು
ಈಗ ಏಕಾಏಕಿ ತಮ್ಮ ಸಾರಿಗೆ ಇಲಾಖೆಯ ಅಧಿಕಾರಿಗಳು ರಸ್ತೆಗಳಲ್ಲಿ ಅಲ್ಲಲ್ಲಿ ಪರ್ಮಿಟ್ ಇಲ್ಲದ ಕಾರಣ ಬಿಎಸ್ 6 ಆಟೋಗಳನ್ನು ಜಪ್ತಿ ಮಾಡಿ ದುಬಾರಿ ದಂಡಗಳನ್ನು ವಿಧಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ?. ಈ ಕೂಡಲೇ ಬಿಎಸ್ 6 ಆಟೋಗಳಿಗೆ ಪರ್ಮಿಟ್ ಭಾಗ್ಯವನ್ನು ನೀಡಿ ಜಪ್ತಿ ಹಾಗೂ ಇನ್ನಿತರ ಕಾನೂನು ಕ್ರಮಗಳಿಂದ ಮುಕ್ತಗೊಳಿಸಬೇಕು.
ಬಡ ಆಟೋ ಚಾಲಕರುಗಳು ತಮ್ಮ ಯೂನಿಫಾರಂ, ಎಮಿಷನ್ ಸರ್ಟಿಫಿಕೇಟ್, ಇನ್ಶೂರೆನ್ಸ್ ಗಳನ್ನು ಮಾಡಿಸಿಕೊಳ್ಳಲು ವಾರಗಟ್ಟಲೆ ಕಂಪನಿಗಳ ಮುಂದೆ ಸರಣಿ ಸಾಲಿನಲ್ಲಿ ನಿಲ್ಲುವ ದುಸ್ಥಿತಿ ಬಂದಿದೆ. ಕಾರಣವನ್ನು ಕೇಳಿದರೆ ಸರ್ವರ್ ಡೌನ್ ಎಂದು ಹೇಳುತ್ತಿದ್ದಾರೆ. ಮೀಟರ್ ತಯಾರಿ ಮಾಡಿಕೊಳ್ಳಲು ಅಂಗಡಿಗಳ ಮುಂದೆ ಕನಿಷ್ಠ 5 ದಿವಸಗಳ ಕಾಲ ಕಾಯಬೇಕಾದ ಸ್ಥಿತಿ ಇದೆ. ಈ ಸಮಸ್ಯೆ ನಿವಾರಿಸಬೇಕು.
ಮೂರು ತಿಂಗಳು ಕಾಲಾವಕಾಶ ನೀಡಿ
ಆಟೋ ಚಾಲಕರುಗಳು ತಮ್ಮ ಮಕ್ಕಳ ಶಾಲಾ ಶುಲ್ಕಗಳು, ಆರೋಗ್ಯ ವೆಚ್ಚಗಳು ಹಾಗೂ ಹಬ್ಬ ಹರಿದಿನಗಳ ಸಲುವಾಗಿ ತಮ್ಮಲ್ಲಿದ್ದ ಹಣವನ್ನು ಖರ್ಚು ಮಾಡಿಕೊಂಡು ಈಗ ಸಾಲಗಾರರ ಸುಳಿಗೆ ಸಿಲುಕುವಂತಹ ಪರಿಸ್ಥಿತಿಗೆ ತಳ್ಳಲ್ಪಟ್ಟಿದ್ದಾರೆ. ಆಟೋ ಚಾಲಕರುಗಳಿಗೆ ಪರ್ಮಿಟ್ ಸೇರಿದಂತೆ ಎಲ್ಲ ತಮ್ಮಲ್ಲಿನ ದಾಖಲಾತಿಗಳನ್ನು ಸರಿಪಡಿಸಿಕೊಳ್ಳಲು ಮೂರು ತಿಂಗಳುಗಳ ಕಾಲಾವಕಾಶವನ್ನು ನೀಡಿ ಬಡ ಆಟೋ ಚಾಲಕರ ಕುಟುಂಬ ನಿರ್ವಹಣೆಗೆ ಸರ್ಕಾರ ಈ ಮೂಲಕ ನೆರವಾಗಬೇಕು ಎಂದು ಅವರುಆಗ್ರಹಿಸಿದರು.












Click it and Unblock the Notifications