ಕಾರು ಅಪಘಾತದಲ್ಲಿ ಡಿಎಂಕೆ ಶಾಸಕನ ಪುತ್ರನ ಪ್ರಿಯತಮೆ ದುರಂತ ಅಂತ್ಯ
ಬೆಂಗಳೂರು, ಆ. 31 : ಕೋರಮಂಗಲದ ಬಳಿ ಮಂಗಳವಾರ ಬೆಳಗಿನ ಜಾವ ನಡೆದ ಅಪಘಾತ ಪ್ರಕರಣದಲ್ಲಿ ಹೊಸೂರು ಶಾಸಕ ವೈ. ಪ್ರಕಾಶ್ ಅವರ ಪುತ್ರ ಕರುಣಾ ಸಾಗರ್ ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದಾರೆ. ಒಬ್ಬೊಬ್ಬೊರದ್ದು ಒಂದೊಂದು ದುರಂತ ಕಥೆ. ಅದರಲ್ಲಿ ಶಾಸಕರ ಪುತ್ರ ಕರುಣಾ ಸಾಗರ್ ಮತ್ತು ಆತ ಮದುವೆಯಾಗಲು ನಿಶ್ಚಿಯಿಸಿದ್ದ ಗೆಳತಿಯ ಪ್ರೀತಿ ಕೂಡ ಅಪಘಾತದಲ್ಲಿ ಕಮರಿ ಹೋಗಿದೆ.
Recommended Video
ಇಂಗ್ಲೆಂಡ್‌ನಲ್ಲಿ ವ್ಯಾಸಂಗ ಮಾಡಿದ್ದ ಕರುಣಾ ಸಾಗರ್ ಐದು ವರ್ಷದ ಹಿಂದೆ ಮರಳಿ ಭಾರತಕ್ಕೆ ಬಂದಿದ್ದ. ಇಲ್ಲಿ ಪ್ಯಾಕೇಜಿಂಗ್ ಇಂಡಸ್ಟ್ರಿ ಮಾಡಿಕೊಟ್ಟಿದ್ದರು. ಹೊಸೂರು ಸಮೀಪದ ಬ್ಯಾಳಗೊಂಡನಹಳ್ಳಿಯಲ್ಲಿ ಕರುಣಾ ಸಾಗರ್ ಕಂಪನಿ ನಡೆಸುತ್ತಿದ್ದ. ಹೊಸೂರು ಕ್ಷೇತ್ರದ ಶಾಸಕ ಪ್ರಕಾಶ್ ಅವರ ಪುತ್ರ ಕರುಣಾ ಸಾಗರ್ ಬಿಂದು ಎಂಬುವರನ್ನು ಪ್ರೀತಿ ಮಾಡುತ್ತಿದ್ದ. ಈ ವಿಚಾರವನ್ನು ಮನೆಯಲ್ಲಿ ತಿಳಿಸಿದ್ದ. ಇಬ್ಬರ ಮದುವೆ ಮಾಡಲು ಕುಟುಂಬಸ್ಥರು ನಿಶ್ಚಯಿಸಿದ್ದರು.
ಕಟ್ಟಡ ಸಾಮಾಗ್ರಿ ಖರೀದಿಸುವ ಸಲುವಾಗಿ ಬೆಂಗಳೂರಿಗೆ ಬಂದಿದ್ದ ಕರುಣಾ ಸಾಗರ್ ತನ್ನ ಗೆಳತಿ ವಾಸವಾಗಿದ್ದ ಪಿಜಿಗೆ ಹೋಗಿ ಆಕೆಯನ್ನು ಕರೆದುಕೊಂಡು ಹೋಗಿದ್ದಾನೆ. ತನ್ನ ಸ್ನೇಹಿತೆಯರ ಜತೆ ಬಿಂದು ಕೂಡ ಬಂದಿದ್ದಾರೆ. ಸ್ನೇಹಿತರ ಜತೆಗೂಡಿ ರಾತ್ರಿ ಹೊರ ಹೋಗಿದ್ದಾರೆ. ಪಾರ್ಟಿ ಮಾಡಿದ ಬಳಿಕ ವಾಪಸು ಕೋರಮಂಗಲಕ್ಕೆ ಬರುವಾಗ ಈ ಅವಘಡ ಸಂಭವಿಸಿದೆ. ಕರುಣಾಸಾಗರ್ ಮತ್ತು ಬಿಂದು ಸಪ್ತ ಪದಿ ತುಳಿಯುವ ಮೊದಲೇ ಸಾವನ್ನಪ್ಪಿದ್ದಾರೆ.

ಒಂದೇ ವರ್ಷದಲ್ಲಿ ಮೂರು ಅವಘಡ
ಹೊಸೂರು ಶಾಸಕ ವೈ ಪ್ರಕಾಶ್ ಅವರು ಒಂದೇ ವರ್ಷದಲ್ಲಿ ಎಲ್ಲವನ್ನು ಕಳೆದುಕೊಂಡಿದ್ದಾರೆ. ಕಳೆದ ವರ್ಷ ತಂದೆ ಯಲ್ಲಪ್ಪ ತೀರಿಕೊಂಡಿದ್ದರು. ಕಳೆದ ಏಪ್ರಿಲ್‌ನಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ ಪತ್ನಿ ಶಿವಮ್ಮ ಸಾವನ್ನಪ್ಪಿದ್ದರು. ಇದೀಗ ಇದ್ದ ಏಕೈಕ ಮಗ ಕೂಡ ಅಪಘಾತದಲ್ಲಿ ಸಾವಿಗೀಡಾಗಿದ್ದಾನೆ. ವೈ. ಪ್ರಕಾಶ್ ಅವರಿಗೆ ಸೇರಿದ ಅಡಿ ಕಾರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಿದ್ದ ಕರುಣಾ ಸಾಗರ್ ತನ್ನ ಸ್ನೇಹಿತರೊಂದಿಗೆ ಜೀವವನ್ನೇ ಕಳೆದುಕೊಂಡಿದ್ದಾನೆ.

ಅಡುಗೋಡಿ ಸಂಚಾರ ಠಾಣೆಯಲ್ಲಿ ಕೇಸು
ಏಳು ಮಂದಿಯನ್ನು ಬಲಿ ಪಡೆದ ಪ್ರಕರಣ ಸಂಬಂಧ ಆಡುಗೋಡಿ ಸಂಚಾರ ಪೊಲೀಸರು 304A ಮತ್ತು 279 ಅಡಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಹೊಸೂರು ಡಿಎಂಕೆ ಶಾಸಕ ಪ್ರಕಾಶ ಅವರ ಪುತ್ರ ಕರುಣಾ ಸಾಗರ್ ಕಟ್ಟಡ ನಿರ್ಮಾಣ ಉಪಕರಣ ಖರೀದಿಗೆ ಬೆಂಗಳೂರಿಗೆ ಬಂದಿದ್ದ ಎನ್ನಲಾಗಿದೆ. ಮಂಗಳವಾರ ಬೆಳಗಿನ ಜಾವ 1.30 ರಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿರುವ ಬಿಂಧು ಹಾಗೂ ಕರುಣಾ ಸಾಗರ್ ಮದುವೆಯಾಗಲು ನಿಶ್ಚಯಿಸಿದ್ದರು. ಕೋರಮಂಗಲ ಪೊಲೀಸ್ ಠಾಣೆ ಸಮೀಪದ ಪಿಜಿಯಲ್ಲಿ ಬಿಂಧು ಸೇರಿ ಐವರು ತಂಗಿದ್ದರು. ಪಿಜಿ ಮಾಲೀಕರಿಗೆ ಎಲ್ಲಿ ಕೆಲಸ ಮಾಡುತ್ತಿದ್ದೀವಿ ಎಂಬುದರ ವಿವರಗಳನ್ನು ನೀಡಿರಲಿಲ್ಲ. ಪಿಜಿ ಮಾಲೀಕರನ್ನು ಸಂಪರ್ಕಿಸಿದ ಪೊಲೀಸರು ಮೃತ ಮೂವರು ಯುವತಿಯರು ನೀಡಿರುವ ಪೋನ್ ನಂಬರ್ ಪಡೆದು ಪೋಷಕರ ಪತ್ತೆಗೆ ಮುಂದಾಗಿದ್ದಾರೆ.

ಚಾಲಕನ ನಿರ್ಲಕ್ಷ್ಯದಿಂದ ಅಪಘಾತ
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ, ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದೆ. ಮೃತರ ವಿಳಾಸ ಪತ್ತೆ ಮಾಡುವ ಕಾರ್ಯ ಮಾಡಲಾಗುತ್ತಿದೆ. ಚಾಲಕನ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ. ಕಾರು ಚಾಲಕ ಸೀಟು ಬೆಲ್ಟ್ ಹಾಕಿರಲಿಲ್ಲ. ಕಾರಿನಲ್ಲಿದ್ದವರು ಯಾರೂ ಸೀಟ್ ಬೆಲ್ಟ್ ಹಾಕಿರಲಿಲ್ಲ. ಅಪಘಾತದ ವೇಳೆ ಏರ್ ಬ್ಯಾಗ್ ಓಪನ್ ಆಗಿಲ್ಲ. ಆರು ಮಂದಿ ಸ್ಥಳದಲ್ಲಿ ಸಾವನ್ನಪ್ಪಿದ್ದು, ಉಳಿದ ಒಬ್ಬ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮಧ್ಯ ರಾತ್ರಿ ಇವರು ಎಲ್ಲಿಗೆ ಹೋಗಿ ಬರುತ್ತಿದ್ದರು ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಏರ್ ಬ್ಯಾಗ್ ಓಪನ್ ಆಗಿಲ್ಲ
ಸಾಮಾನ್ಯವಾಗಿ ಯಾವುದೇ ಕಾರು ಚಾಲನೆ ಮಾಡುವಾಗ ಸೀಟ್ ಬೆಲ್ಟ್ ಧರಿಸದಿದ್ದರೆ ಅವಘಡ ಸಂದರ್ಭದಲ್ಲಿ ಏರ್ ಬ್ಯಾಗ್ ಓಪನ್ ಆಗುವುದಿಲ್ಲ. ಅಡಿ ಕಾರು ಅಪಘಾತದ ವೇಳೆ ಯಾರೂ ಸೀಟ್ ಬೆಲ್ಟ್ ಧರಿಸಿರಲಿಲ್ಲ. ಹೀಗಾಗಿ ಏರ್ ಬ್ಯಾಗ್ ಓಪನ್ ಆಗದೇ ಎಲ್ಲರೂ ದುರಂತಕ್ಕೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಹೊಸೂರು ಕ್ಷೇತ್ರದ ಡಿಎಂಕೆ ಶಾಸಕ ಪ್ರಕಾಶ್ ಅವರ ಪುತ್ರ ಕರಣಾ ಸಾಗರ್. ಬೆಂಗಳೂರಿನ ಬ್ಲೂ ಮೆಟಲ್ ಹೆಸರಿನ ಎಂ ಸ್ಯಾಂಡ್ ಕಂಪನಿಯಲ್ಲಿ ಪ್ರಕಾಶ್ ಪಾಲುದಾರಿಕೆ ಹೊಂದಿದ್ದಾರೆ ಎನ್ನಲಾಗಿದೆ. ಅಪಘಾತಕ್ಕೀಡಾಗಿರುವ ಆಡಿ ಕಾರು ಸಂಖ್ಯೆ ಬ್ಲೂ ಮೆಟಲ್ ಕಂಪನಿ ಹೆಸರಿನಲ್ಲಿಯೇ ಇದೆ ಎನ್ನಲಾಗಿದೆ.












Click it and Unblock the Notifications