Breaking; ಪ್ರಶ್ನೆ ಪತ್ರಿಕೆ ಲೀಕ್; ಪ್ರೊಫೆಸರ್ ಬಂಧಿಸಿದ ಪೊಲೀಸರು
ಬೆಂಗಳೂರು, ಏಪ್ರಿಲ್ 27; ಅಸಿಸ್ಟೆಂಟ್ ಪ್ರೊಫೆಸರ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬರ ಬಂಧನವಾಗಿದೆ. ಈಗಾಗಲೇ ಈ ಪ್ರಕರಣದಲ್ಲಿ ಸೌಮ್ಯಾ ಬಂಧಿಸಲಾಗಿದ್ದು, ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರದ ಪೊಲೀಸರು ಜಿಯಾಗ್ರಫಿ ಪ್ರೊಫೆಸರ್ ನಾಗರಾಜ್ ಬಂಧಿಸಿದ್ದಾರೆ. ಪ್ರಕರಣದಲ್ಲಿ ನಿರ್ಲಕ್ಷ್ಯ ಹಿನ್ನಲೆಯಲ್ಲಿ ಬಂಧಿಸಲಾಗಿದೆ. ಧಾರರವಾಡದ ಕರ್ನಾಟಕ ಯೂನಿವರ್ಸಿಟಿಯ ಮೌಲ್ಯ ಮಾಪನ ರಿಜಿಸ್ಟ್ರಾರ್ ಆಗಿದ್ದಾರೆ.
ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಾಜ್ ತಂಗಿ ಮಗಳು ಕುಸುಮಾ ಎಂಬುವವರನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಪ್ರಶ್ನೆ ಪತ್ರಿಕೆ ತಯಾರಿ ವೇಳೆ ಪೋಟೋ ತೆಗೆದು ಸೌಮ್ಯಾಗೆ ಕಳಿಸಲಾಗಿತ್ತು ಎಂಬುದು ಆರೋಪ.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, "ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೀಡಿದ ದೂರಿನ ಅನ್ವಯ ತನಿಖೆ ನಡೆಸಲಾಗುತ್ತಿದೆ" ಎಂದು ಹೇಳಿದ್ದಾರೆ.
"ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಮಾರ್ಚ್‌ನಲ್ಲಿ ಪರೀಕ್ಷೆಗಳನ್ನು ನಡೆಸಲಾಗಿತ್ತು. ಆ ವೇಳೆ ಕೆಲವು ಅಭ್ಯರ್ಥಿಗಳಿಗೆ ಪ್ರಶ್ನೆಗಳು ಸಿಕ್ಕಿದ್ದವು. ಪರೀಕ್ಷಾ ಪ್ರಾಧಿಕಾರ ಈ ಕುರಿತು ದೂರು ನೀಡಿದ್ದು, ಎಸಿಪಿ ನೇತೃತ್ವದಲ್ಲಿ ತನಿಖೆ ಮಾಡಲಾಗುತ್ತಿದೆ" ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.
ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಯ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಮೈಸೂರು ಮೂಲದ ಅತಿಥಿ ಉಪನ್ಯಾಸಕಿ ಸೌಮ್ಯ ಬಂಧಿಸಲಾಗಿದೆ. ಮೈಸೂರಿನ ಸಿದ್ದಾರ್ಥನಗರದ ನಿವಾಸಿಯಾದ ಈಕೆ ಮೈಸೂರು ವಿವಿಯಲ್ಲಿ ಭೂಗೋಳಶಾಸ್ತ್ರ ವಿಭಾಗದಲ್ಲಿ ನಾಲ್ಕು ತಿಂಗಳು ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ್ದರು.
ಐಸಿಎಸ್‌ಎಸ್‌ಆರ್‌ನಿಂದ ಪೋಸ್ಟಲ್ ಡಾಕ್ಟರೇಟ್ ಫೆಲೋಶಿಪ್ ಬಂದ ನಂತರ ಕೆಲಸ ಬಿಟ್ಟಿದ್ದರು. ಈಗ ಪಿಡಿಎ ಆಗಿ ಡಾ. ನಾಗರಾಜ್ ಬಳಿ ಕೆಲಸ ಮಾಡುತ್ತಿದ್ದಾರೆ. 2015ರಲ್ಲಿ ಪಿಎಚ್‌ಡಿ ಪ್ರವೇಶ ಪಡೆದಿದ್ದ ಸೌಮ್ಯ 2021ರಲ್ಲಿ ಮುಗಿಸಿದ್ದರು.












Click it and Unblock the Notifications