ಮನೆಗಳ್ಳನನ್ನು ಹಿಡಿಯಲು ಹೋಗಿದ್ದ ಕಾನ್ ಸ್ಟೆಬಲ್ ಮೇಲೆ ಭೀಕರ ಹಲ್ಲೆ
ಬೆಂಗಳೂರು, ಜನವರಿ 06: ಮನೆಗಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲು ತೆರಳಿದ್ದ ಸಂದರ್ಭ ಕಾನ್ ಸ್ಟೆಬಲ್ ಮೇಲೆ ಆರೋಪಿ ಹಾಗೂ ಆತನ ಮನೆಯವರು ಚಾಕುವಿನಿಂದ ಇರಿದು ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮನೆಗಳ್ಳತನದಲ್ಲಿ ಆರೋಪಿಯಾಗಿದ್ದ ನವೀನ್ ಎಂಬಾತನನ್ನು ಹಿಡಿಯಲು ಮಂಗಳವಾರ ರಾತ್ರಿ 9.30ರ ಸುಮಾರಿಗೆ ಕಾನ್ ಸ್ಟೆಬಲ್ ಮಂಜುನಾಥ್ ಹಾಗೂ ಮತ್ತೊಬ್ಬರು ಕಾನ್ ಸ್ಟೆಬಲ್ ಆರೋಪಿ ಮನೆಗೆ ತೆರಳಿದ್ದರು. ಈ ಸಂದರ್ಭ ನವೀನ್, ಆತನ ತಾಯಿ ಹಾಗೂ ಸಹೋದರ ಕಾನ್ ಸ್ಟೆಬಲ್ ಗೆ ಥಳಿಸಿದ್ದಾರೆ. ಹಲ್ಲೆ ನಡೆಸಿದ್ದಲ್ಲದೇ ಚಾಕುವಿನಿಂದ ಇರಿದಿದ್ದಾರೆ.
ನೀರು ಕೊಡಲಿಲ್ಲ ಎಂಬ ಕಾರಣಕ್ಕೆ ಅಟ್ಟಾಡಿಸಿ ಹಲ್ಲೆ ಮಾಡಿದ ಪುಂಡರು !
ಹಲ್ಲೆ ನಡೆಸಿದ ನಂತರ ನವೀನ್ ಪರಾರಿಯಾಗಿದ್ದಾನೆ. ಆತನ ಸಹೋದರ ಮುರುಗೇಶ್ ಹಾಗೂ ತಾಯಿ ನರಸಮ್ಮ ಅವರನ್ನು ಬಂಧಿಸಲಾಗಿದೆ.
ಇರಿತದಿಂದಾಗಿ ಗಾಯಗೊಂಡಿರುವ ಮಂಜುನಾಥ್ ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕುತ್ತಿಗೆ, ಕಿವಿ, ತಲೆ ಭಾಗದಲ್ಲಿ ಚಾಕು ಇರಿದಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಸುಧಾರಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಆಸ್ಪತ್ರೆಗೆ ತೆರಳಿ ಮಂಜುನಾಥ್ ಅವರ ಆರೋಗ್ಯ ವಿಚಾರಿಸಿದ್ದಾರೆ.