ಬೆಂಗಳೂರು: ಆಧುನಿಕ ಸೌಲಭ್ಯದ 'ಪ್ರಾಥಮಿಕ ಆರೋಗ್ಯ ಕೇಂದ್ರ' ಉದ್ಘಾಟಿಸಿದ ಅಶ್ವಿನಿ ವೈಷ್ಣವ್
ಬೆಂಗಳೂರು, ಡಿಸೆಂಬರ್ 18: ಬೆಂಗಳೂರು ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮತ್ತೀಕೆರೆಯ ನೇತಾಜಿ ವೃತ್ತದಲ್ಲಿ ಸ್ಥಾಪಿಸಿರುವ ಅತ್ಯಾಧುನಿಕ ಸೌಲಭ್ಯಗಳ 'ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ'ವನ್ನು ಭಾನುವಾರ ಕೇಂದ್ರ ರೈಲ್ವೆ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರೂ ಆದ ಐಟಿ ಬಿಟಿ ಸಚಿವ ಡಾ.ಸಿ ಎನ್ ಅಶ್ವಥ್ ನಾರಾಯಣ, ಈ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿದ್ದಾರೆ. ಒಟ್ಟು 220 ಲ್ಯಾಬ್ ಟೆಸ್ಟ್ ಇಲ್ಲಿ ಉಚಿತವಾಗಿ ಮಾಡಲಾಗುವುದು. ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲು ಎಲ್ಲ ಅತ್ಯಾಧುನಿಕ ಡಿಜಿಟಲ್ ಉಪಕರಣಗಳು ಇಲ್ಲವೆ ಎಂದು ಎಂದರು.

ಬೆಂಗಳೂರು ವಿಜ್ಞಾನ-ತಂತ್ರಜ್ಞಾನಗಳ ರಾಜಧಾನಿಯಾಗಿದೆ. ಇದರ ಲಾಭವು ಜನಸಾಮಾನ್ಯರಿಗೆ ಸಿಗಬೇಕೆಂಬ ಉದ್ದೇಶದಿಂದ ಈ ಆರೋಗ್ಯ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇಲ್ಲಿ ಹೊರರೋಗಿಗಳ ವಿಭಾಗದಿಂದ ಹಿಡಿದು ವರ್ಚುಯಲ್ ಸ್ಮಾರ್ಟ್ ಕ್ಲಿನಿಕ್, ಕಣ್ಣಿನ ಪರೀಕ್ಷೆ, ಫಿಸಿಯೋಥೆರಪಿ, ದಂತ ತಪಾಸಣೆ, ಎಕ್ಸ್‌ರೇ, ಉಚಿತ ಔಷಧಾಲಯ, ಪ್ರಧಾನಮಂತ್ರಿ ಜನೌಷಧ ಕೇಂದ್ರ, ಇ-ಆಸ್ಪತ್ರೆ, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ವ್ಯಾಪ್ತಿಯಲ್ಲಿರುವ ಸೇವೆ ಮುಂತಾದ ಸೌಲಭ್ಯಗಳಿವೆ ಎಂದು ಅವರು ವಿವರಿಸಿದರು.
ಇನ್ನೊಂದು ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭ ಶೀಘ್ರ
ಈ ಆಸ್ಪತ್ರೆ ನೋಡಿದ ಕೇಂದ್ರ ಸಚಿವ ಅಶ್ವಿನ್ ವೈಷ್ಣವ್ ಅವರು ತಾವು ಪ್ರತಿನಿಧಿಸುವ ರಾಜ್ಯಸಭಾ ಕ್ಷೇತ್ರ ಒಡಿಶಾದಲ್ಲಿ ಇಂತಹ ಆಸ್ಪತ್ರೆ ಸ್ಥಾಪನೆಗೆ ಚಿಂತನೆ ನಡೆಸಿದ್ದಾರೆ. ಜನವರಿಯಲ್ಲಿ ಮತ್ತೀಕೆರೆಯ ಎ.ಕೆ.ಕಾಲೋನಿಯಲ್ಲಿ 'ನಮ್ಮ ಕ್ಲಿನಿಕ್'ಗೆ ಕೂಡ ಚಾಲನೆ ನೀಡಲಾಗುವುದು. ಜತೆಗೆ ಮಲ್ಲೇಶ್ವರಂನ ಸ್ಯಾಂಕಿ ಕೆರೆಯ ಆವರಣದಲ್ಲಿ ಕೂಡ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸದ್ಯದಲ್ಲೇ ಆರಂಭಿಸಲಾಗುವುದು ಎಂದು ಹೇಳಿದರು.

ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಧುಮೇಹ, ರಕ್ತದ ಒತ್ತಡ, ಚರ್ಮದ ಕಾಯಿಲೆ, ಬೆನ್ನುನೋವು ಮುಂತಾದ ಕಾಯಿಲೆಗಳಿಗೆ ಸಮರ್ಪಕ ಚಿಕಿತ್ಸೆ ದೊರೆಯಲಿದೆ. ಇಲ್ಲಿ ಚಿಕಿತ್ಸೆ ದೊರೆಯದೆ ಇರುವಂತಹ ಕಾಯಿಲೆಗಳ ಮಾಹಿತಿಯನ್ನು ಕಮಾಂಡೋ ಸೆಂಟರ್ ಮೂಲಕ ನಮ್ಮೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಮಿಂಟೋ ಕಣ್ಣಾಸ್ಪತ್ರೆ ಮುಂತಾದ ಕಡೆಗಳಿಗೆ ಕ್ಷಿಪ್ರ ಗತಿಯಲ್ಲಿ ರವಾನಿಸಿ, ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು.
ಸಪ್ತಗಿರಿ ವೈದ್ಯಕೀಯ ಕಾಲೇಜಿನ ಐವರು ವೈದ್ಯರು ಕೂಡ ಈ ಕೇಂದ್ರದಲ್ಲಿ ಸೇವೆ ಒದಗಿಸಲಿದ್ದಾರೆ. ಸ್ಥಳೀಯರು ಚಿಕಿತ್ಸೆಗಾಗಿ ಯಾವುದೇ ದುಬಾರಿ ಖಾಸಗಿ ಆಸ್ಪತ್ರೆಗಳನ್ನು ಹುಡುಕಿಕೊಂಡು ಹೋಗಬೇಕಾಗಿಲ್ಲ ಎಂದರು.
ಈ ವೇಳೆ ಬಿಬಿಎಂಪಿ ಪಶ್ಚಿಮ ವಲಯದ ಆಯುಕ್ತ ಡಾ.ದೀಪಕ್, ಡಾ.ಗಿರೀಶ್, ಡಾ.ಪ್ರಕಾಶ್, ಡಾ.ಸುಚೇತಾ, ಸ್ಟಾರ್ಟಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಡಾ.ಮಂಜುನಾಥ್, ಮುಖಂಡರಾದ ರಾಜು, ಸಮೀವುಲ್ಲಾ, ಜಯಪ್ರಕಾಶ್, ಜೈಪಾಲ್ ಮುಂತಾದವರು ಉಪಸ್ಥಿತರಿದ್ದರು.












Click it and Unblock the Notifications