ಚೈತ್ರಾ ಕುಂದಾಪುರ ವಿರುದ್ಧ ಮತ್ತೊಂದು ಎಫ್‌ಐಆರ್: ಬರೋಬ್ಬರಿ 5 ಲಕ್ಷ ರೂ ವಂಚನೆ
ಉಡುಪಿ, ಸೆಪ್ಟೆಂಬರ್ 19: ಉದ್ಯಮಿಯೊಬ್ಬರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚಿಸಿ ಜೈಲು ಪಾಲಾಗಿರುವ ಚೈತ್ರಾ ಕುಂದಾಪುರ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟ ಎಂಬಲ್ಲಿ ಬಟ್ಟೆ ಅಂಗಡಿಯನ್ನು ತೆರೆದುಕೊಂಡುವುದಾಗಿ ನಂಬಿಸಿ ಐದು ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬಿಜೆಪಿ ಕಾರ್ಯಕರ್ತ ಸುದೀನ ಎಂಬುವರು ವಂಚನೆಗೊಳಗಾದ ವ್ಯಕ್ತಿಯಾಗಿದ್ದಾರೆ. 2015ರಲ್ಲಿ ಸುದೀನ ಅವರಿಗೆ ಚೈತ್ರಾ ಕುಂದಾಪುರ ಪರಿಚಯವಾಗಿದ್ದಾರೆ. ತಮ್ಮ ಮಾತುಗಳಿಂದಲೇ ಉದ್ಯಮಿಯನ್ನು ನಂಬಿಸಿದ್ದ ಚೈತ್ರಾ, ತನಗೆ ಬಿಜೆಪಿ ಪಕ್ಷದಲ್ಲಿ ಉನ್ನತ ಸ್ಥಾನದಲ್ಲಿರುವ ಸಚಿವರು, ಮಂತ್ರಿಗಳ, ಶಾಸಕರ ನಿಕಟ ಸಂಪರ್ಕವಿದೆ ಎಂದು ನಂಬಿಸಿದ್ದಾಳೆ. ಅಲ್ಲದೇ ಸುದೀನ ಅವರಿಗೆ ಕೋಟ ಎಂಬಲ್ಲಿ ಬಟ್ಟೆ ಅಂಗಡಿಯನ್ನು ತೆರೆದು ಕೊಡುವುದಾಗಿ ನಂಬಿಸಿ ಲಕ್ಷ ಲಕ್ಷ ಪಡೆದಿದ್ದಾರೆ ಎನ್ನಲಾಗಿದೆ.

2018-2023 ರ ಅವಧಿಯಲ್ಲಿ ಅಂಗಡಿ ನಿರ್ಮಾಣಕ್ಕೆ ಐದು ಲಕ್ಷ ಹಣವನ್ನು ಹಂತ ಹಂತವಾಗಿ ಪಡೆದಿದ್ದು, ಸುದೀನ ಮೂರು ಲಕ್ಷವನ್ನ ಚೈತ್ರಾ ಖಾತೆಗೆ ವರ್ಗಾಯಿಸಿ ಎರಡು ಲಕ್ಷ ಹಣವನ್ನ ನಗದು ರೂಪದಲ್ಲಿ ನೀಡಿದ್ದರು ಎನ್ನಲಾಗಿದೆ.
ಬಟ್ಟೆ ಅಂಗಡಿ ಬಗ್ಗೆ ಕೇಳಿದ ಸಂದರ್ಭದಲ್ಲಿ ಕೊನೆಗೆ ಹಂತದಲ್ಲಿದೆ ಎಂದು ಸುಳ್ಳು ಹೇಳುತ್ತಿದ್ದ ಚೈತ್ರಾ, ಚುನಾವಣಾ ಪ್ರಚಾರ, ಭಾಷಣ, ಕಾರ್ಯಕಾರಣಿ ಸಭೆ, ಪಕ್ಷದ ಮುಖಂಡರ ಭೇಟಿ ನೆಪ ಹೇಳಿ ತಪ್ಪಿಸಿಕೊಂಡಿದ್ದಾರೆ. ಬಳಿಕ ಅನುಮಾನಗೊಂಡ ಸುದೀನ ಕೂಡಲೇ ಬಟ್ಟೆ ಅಂಗಡಿ ತೆರೆಯುವಂತೆ ಒತ್ತಾಯಿಸಿದ್ದಾರೆ.ಈ ವೇಳೆ ಚೈತ್ರಾ ಕುಂದಾಪುರ ಸುಳ್ಳು ಅತ್ಯಾಚಾರ ಪ್ರಕರಣ ಕೊಡುತ್ತೇನೆ, ಬಾಡಿಗೆ ಗೂಂಡಾಗಳಿಂದ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನುವುದನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಉದ್ಯಮಿ ಗೋವಿಂದಬಾಬು ಪೂಜಾರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ ಜೈಲು ಪಾಲಾಗಿರುವ ಚೈತ್ರಾ ಕುಂದಾಪುರ ವಿರುದ್ಧ ಬ್ರಹ್ಮಾವರ ವೃತ್ತ ವ್ಯಾಪ್ತಿಯ ಕೋಟ ಪೊಲೀಸ್ ಠಾಣೆಯಲ್ಲ 506, 417, 420 ಐಪಿಸಿ ಸೆಕ್ಷನ್ ಅಡಿ ಎಫ್ಐಆರ್ ದಾಖಲಾಗಿದೆ.












Click it and Unblock the Notifications