ಮೋದಿಯನ್ನು ಮತ್ತೆ ಟೀಕಿಸಿದ ಅನಂತಮೂರ್ತಿ
ಬೆಂಗಳೂರು, ಮೇ 17 : "ನರೇಂದ್ರ ಮೋದಿ ಒಬ್ಬ ಸಾಧಾರಣದಲ್ಲಿ ಸಾಧಾರಣ ವ್ಯಕ್ತಿ. ಅಂಥವರ ಪರವಾದ ಅಲೆ ಏಳುವುದಕ್ಕೆ ಹಗಲುರಾತ್ರಿ ಸುದ್ದಿ ಪ್ರಸಾರ ಮಾಡುವ ಸುದ್ದಿವಾಹಿನಿಗಳೇ ಕಾರಣ. ಅವರನ್ನು ವೈಟ್ ವಾಶ್ ಮಾಡಿ ಆಕರ್ಷಕವಾಗಿ ಕಾಣುವಂತೆ ಮಾಡಿವೆ" ಎಂದು ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ. ಯು.ಆರ್. ಅನಂತಮೂರ್ತಿ ಅವರು ವ್ಯಂಗ್ಯವಾಡಿದ್ದಾರೆ.
ನರೇಂದ್ರ ಮೋದಿ ಅವರನ್ನು ಟೀಕಿಸಲು ಸಿಗುವ ಅವಕಾಶವನ್ನು ಎಂದೂ ವ್ಯರ್ಥ ಮಾಡದ ಅನಂತಮೂರ್ತಿಯವರು, ಈ ಯಶಸ್ಸಿನ ಶ್ರೇಯಸ್ಸು ಅತ್ಯಂತ ಆಧುನಿಕ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ಜಾಹೀರಾತುಗಳಿಗೆ ಸಲ್ಲಬೇಕೆಯೇ ಹೊರತು ಮೋದಿ ಅವರಿಗಲ್ಲ ಎಂದು ಮಾತಿನ ಚಾಟಿ ಬೀಸುವುದನ್ನು ಮುಂದುವರಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅತ್ಯದ್ಭುತ ವಿಜಯವನ್ನು ದಾಖಲಿಸಿದ ನಂತರ ಪ್ರತಿಕ್ರಿಯೆ ನೀಡುತ್ತಿದ್ದ ಅವರು, ಬಿಜೆಪಿ ಅತ್ಯಂತ ಮಧ್ಯಕಾಲೀನ ಮೌಲ್ಯಗಳುಳ್ಳ ಪಕ್ಷವಾಗಿದ್ದು, ಅತ್ಯಾಧುನಿಕ ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಹೇಗೆ ಸಫಲವಾಯಿತು ಎಂದು ಅನಂತಮೂರ್ತಿ ಅವರು ಕುಹಕವಾಡಿದ್ದಾರೆ. [ಮೋದಿ ಬೆಂಬಲಿಸಿದ ಭೈರಪ್ಪ]

ಆದರೆ, ಇಂಥ ತಂತ್ರಜ್ಞಾನವನ್ನು ಬಳಸಿಕೊಂಡು ತಾವೇ ಆರಂಭಿಸಿದ ಅನ್ನ ಭಾಗ್ಯದಂಥ ಯೋಜನೆಯನ್ನು ಹೈಲೈಟ್ ಮಾಡಲು ಕಾಂಗ್ರೆಸ್ ವಿಫಲವಾಯಿತು ಎಂದು ಅವರು ಕಾಂಗ್ರೆಸ್ಸನ್ನು ತಿವಿದರು. ಕೇಂದ್ರದಲ್ಲಿ ಕಾಂಗ್ರೆಸ್ ಮಾಡಿದಂಥ ಸಾಧನೆಯನ್ನು ಮಾಡಲು ಬಿಜೆಪಿಗೆ ಸಾಧ್ಯವೇ ಇಲ್ಲ. ಅಷ್ಟೇ ಅಲ್ಲ ಬಡವರು ಕೂಡ ನಿರ್ಲಕ್ಷ್ಯಕ್ಕೆ ಒಳಗಾಗಲಿದ್ದಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಇಂಥ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಮಾತ್ರ ದೇಶದ ಆಶಾಕಿರಣವಾಗಿದ್ದಾರೆ. ಬಿಜೆಪಿಯ ಮಾಧ್ಯಮವನ್ನು ಒಲಿಸುವ, ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುವ ಬದಲಾಗಿ ಅರವಿಂದ್ ಕೇಜ್ರಿವಾಲ್ ಅವರು ಕಾಶಿಯಲ್ಲಿ ಸ್ವತಃ ಕಾಲ್ನಡಿಗೆಯಲ್ಲಿ ಅಡ್ಡಾಡಿ ಜನರನ್ನು ತಲುಪಲು ಯತ್ನಿಸಿದ್ದರು ಎಂದು ಮೂರ್ತಿಗಳು ವಿಶ್ಲೇಷಿಸಿದ್ದಾರೆ. [ದೇಶ ತೊರೆದ ಗಾಯಕ]
ಮೋದಿ ಪ್ರಧಾನಿಯಾದರೆ ನಾನು ದೇಶವನ್ನೇ ಬಿಟ್ಟು ಹೋಗುತ್ತೇನೆ ಎಂದು ಭಾವುಕರಾಗಿ ಅವರು ಹಿಂದೆ ನುಡಿದಿದ್ದಕ್ಕೆ ಪ್ರತಿಯಾಗಿ ಮಂಗಳೂರಿನ ನಮೋ ಬ್ರಿಗೇಡ್ ಅವರಿಗೆ ಮುಂಗಡವಾಗಿ ಕರಾಚಿ ತಲುಪಲು ವಿಮಾನ ಟಿಕೆಟ್ಟನ್ನು ರವಾನಿಸಿತ್ತು. ಅನಂತಮೂರ್ತಿಯವರು ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿದ್ದರೆ ಮೇ 17ರ ಬೆಳಿಗ್ಗೆಯೇ ಶ್ರೀಲಂಕಾ ಮೂಲಕ ಪಾಕಿಸ್ತಾನಕ್ಕೆ ಹೋಗಬೇಕಾಗಿತ್ತು.
ಮೋದಿ ಪ್ರಧಾನಿಯಾದರೆ ದೇಶವನ್ನೇ ಬಿಟ್ಟು ಹೋಗುತ್ತೇನೆ ಎಂದು ಹೇಳಿದವರಲ್ಲಿ 80 ವರ್ಷದ ಅನಂತಮೂರ್ತಿಯವರು ಒಬ್ಬಂಟಿಗರಲ್ಲ. ಅವರಷ್ಟೇ ವಯಸ್ಸಿನ ಹಾಸನದ ಸಂಸದ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಕೂಡ, ಈ ಜನ್ಮದಲ್ಲಿ ಮೋದಿ ಪ್ರಧಾನಿಯಾಗುವುದಿಲ್ಲ, ಮೋದಿ ಪ್ರಧಾನಿಯಾದರೆ ಕರ್ನಾಟಕ ಬಿಟ್ಟು ತೊಲಗುತ್ತೇನೆ ಎಂದು ಹೇಳಿಕೆ ನೀಡಿದ್ದರು.
ದೇವೇಗೌಡರ ಹೇಳಿಕೆಗೆ ತೀಕ್ಷ್ಣ ಉತ್ತರ ನೀಡಿದ್ದ ಮೋದಿಯವರು, ಗೌಡರು ಬೇಕಿದ್ದರೆ ಗುಜರಾತ್ ಗೆ ಬಂದು ನೆಲೆಸಲಿ. ಅವರ ಮಗನಂತೆ ನಾನು ಅವರನ್ನು ನೋಡಿಕೊಳ್ಳುತ್ತೇನೆ ಎಂದಿದ್ದರು. ಮಾತುಮಾತುಗಳೇನೇ ಇರಲಿ ಅನುಭವಿಗಳಾದ, ಜ್ಞಾನಮತಿಗಳಾದ, ಹಿರಿಯರಾದ ಇವರಿಬ್ಬರೂ ಕರ್ನಾಟಕ ಬಿಟ್ಟು ತೊಲಗುವುದು ಬೇಡ. ಇಲ್ಲೇ ನಮ್ಮ ಜೊತೆಯಲ್ಲೇ ಇರಲಿ.
ಅಂದ ಹಾಗೆ, ಮೇ 18 ದೇವೇಗೌಡ ಅವರ ಹ್ಯಾಪಿ ಬರ್ತಡೇ. ಅವರು ಭಾನುವಾರ 81 ವರ್ಷದವರಾಗಲಿದ್ದಾರೆ. ಸದ್ಯಕ್ಕೆ ಕರ್ನಾಟಕದಲ್ಲಿ ಅವರೇ ಅತ್ಯಂತ ಹಿರಿಯ ಸಂಸದರಾಗಿದ್ದು, ಹುಟ್ಟುಹಬ್ಬದ ಸಂದರ್ಭದಲ್ಲಾದರೂ ಕರ್ನಾಟಕ ಬಿಟ್ಟು ಹೋಗುವ ಮಾತನಾಡದಿರಲಿ. ದೇವರು ಅವರಿಗೆ ಇನ್ನಷ್ಟು ವರ್ಷ ಆಯುಷ್ಯವನ್ನು ದಯಪಾಲಿಸಲಿ. ಅವರಿಗೆ ಹುಟ್ಟುಹಬ್ಬದ ಮುಂಗಡ ಶುಭಾಶಯಗಳು.












Click it and Unblock the Notifications