ರಮೇಶ್ ಕುಮಾರ್ ಹೇಳಿಕೆ ಆಧರಿಸಿ ತನಿಖೆ ನಡೆಯಲಿ: ಡಾ.ಕೆ.ಸುಧಾಕರ್ ಆಗ್ರಹ
ಬೆಂಗಳೂರು, ಜುಲೈ 22: ತಮ್ಮ ಹೇಳಿಕೆಗಳ ಮೂಲಕ ಪೇಚಿಗೆ ಸಿಲುಕುವುದು ಕಾಂಗ್ರೆಸ್ ನಾಯಕರಿಗೆ ಹೊಸದೇನಲ್ಲ. ಈಗ ಇಂತಹದ್ದೇ ಹೇಳಿಕೆ ನೀಡುವ ಮೂಲಕ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರೋಧಿಗಳ ಕೈಗೆ ಅಸ್ತ್ರ ನೀಡಿದ್ದಾರೆ. ಕಾಂಗ್ರೆಸ್ ನಾಯಕರು ಮೂರು-ನಾಲ್ಕು ತಲೆಮಾರುಗಳಿಗೆ ಆಗುವಷ್ಟು ಸಂಪಾದನೆ ಮಾಡಿಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದು, ಬಿಜೆಪಿ ಮುಖಂಡರು ಕಾಂಗ್ರೆಸ್ ಮೇಲೆ ಮುಗಿಬಿದ್ದಿದ್ದಾರೆ.
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸಚಿವ ಡಾ.ಕೆ.ಸುಧಾಕರ್ ರಮೇಶ್ ಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, "ಕಾಂಗ್ರೆಸ್ ನಾಯಕರು ಮೂರು-ನಾಲ್ಕು ತಲೆಮಾರುಗಳಿಗಾಗುವಷ್ಟು ಸಂಪಾದನೆ ಮಾಡಿಕೊಂಡಿದ್ದಾರೆ ಎಂದು ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಅವರೇ ಜಗಜ್ಜಾಹೀರು ಮಾಡಿದ್ದಾರೆ. ಈ ಮೂಲಕ ರಮೇಶ್ ಕುಮಾರ್ ಅವರೇ ಕಾಂಗ್ರೆಸ್‌ನ ವ್ಯರ್ಥ ಹೋರಾಟಕ್ಕೆ ತಿಲಾಂಜಲಿ ನೀಡಿದ್ದಾರೆ. ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು" ಎಂದು ಒತ್ತಾಯಿಸಿದ್ದಾರೆ.
ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರ ನೀಡಿದ ಸಚಿವ ಸುಧಾಕರ್, ಕಾಂಗ್ರೆಸ್ ನಾಯಕರು ಹಗರಣ, ಭ್ರಷ್ಟಾಚಾರ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಈ ಮೂಲಕ ಮಾಡಿದ ತಪ್ಪಿನಲ್ಲಿ ತಮ್ಮ ಪಾಲು ಇದೆ ಎಂಬುದನ್ನು ಹೇಳಿದ್ದಾರೆ. ಅನೇಕ ನಾಯಕರು ಗಾಂಧಿ ಕುಟುಂಬದ ಹೆಸರಲ್ಲಿ, ವಂಶಾಡಳಿತದಿಂದ ಸಾಕಷ್ಟು ಹಣ ಮಾಡಿದ್ದಾರೆ ಎಂದು ಹೇಳಿಕೆ ನೀಡುವ ಸತ್ಯವನ್ನು ಜಗತ್ತಿಗೆ ತಿಳಿಸಿದ್ದಾರೆ ಎಂದು ಹೇಳಿದರು.

ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಬೇಕು
ರಮೇಶ್ ಕುಮಾರ್ ಹಿರಿಯ ನಾಯಕರು, ಸ್ಪೀಕರ್ ಆಗಿ ಅವರು ಹೇಗೆ ನಾಟಕವಾಡಿದರು, ಆದೇಶವನ್ನು ಮಾಧ್ಯಮಗಳ ಮುಂದೆ ಹೇಗೆ ಉಲ್ಲೇಖ ಮಾಡಿದ್ದಾರೆ ಎಂಬುದನ್ನು ಈಗಾಗಲೇ ತಿಳಿಸಿದ್ದೇನೆ. ದೇಶದಲ್ಲಿ ಯಾವ ಸ್ಪೀಕರ್ ಕೂಡ ಮಾಡದ ಕೆಲಸವನ್ನು ಅವರು ಮಾಡಿದ್ದಾರೆ. ಅವರಿಗೆ ಯಾವುದೇ ನೈತಿಕತೆ ಇಲ್ಲ ಎಂದರು.
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರನ್ನು ತನಿಖೆ ಮಾಡಬಾರದು ಎಂದು ಕಾಂಗ್ರೆಸ್ ನಾಯಕರು ಪ್ರತಿಭಟನೆ ಮಾಡುತ್ತಿದ್ದಾರೆ. ಈಗ ರಮೇಶ್ ಕುಮಾರ್ ಹೇಳಿಕೆಯಿಂದ ಹಗರಣ ನಡೆದಿರುವುದು ಸ್ಪಷ್ಟವಾಗಿದೆ. ಆದ್ದರಿಂದ ತನಿಖಾ ಏಜೆನ್ಸಿಗಳು ಅವರ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಬೇಕು. ರಮೇಶ್‌ಕುಮಾರ್ ಮೇಲೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು. ಹಗರಣದಲ್ಲಿ ಯಾರು ಶಾಮೀಲಾಗಿದ್ದರೆ ಎಂಬುದು ಹೊರ ಬರಬೇಕು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಸಚಿವ ಸುಧಾಕರ್ ಆಗ್ರಹಿಸಿದರು.

ವಿರೋಧಿಸುವುದೇ ಕಾಂಗ್ರೆಸ್ ಕೆಲಸ
ಪೊಲೀಸ್ ಅಧಿಕಾರಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಸಿ ಕೆ.ಜೆ.ಜಾರ್ಜ್ ಅವರನ್ನು ಆರೋಪ ಮುಕ್ತಗೊಳಿಸಲಾಗಿತ್ತು. ಈಶ್ವರಪ್ಪ ಅವರ ತನಿಖೆ ಮಾಡಿದ ಸಂಸ್ಥೆಯೇ ಜಾರ್ಜ್ ಅವರ ತನಿಖೆಯನ್ನೂ ಮಾಡಿತ್ತು. ಇದನ್ನೂ ಕೂಡ ಕಾಂಗ್ರೆಸ್ ಪ್ರಶ್ನಿಸಬೇಕು. ಬಿಜೆಪಿ ಸರ್ಕಾರ ಏನೇ ಮಾಡಿದರೂ ಕಾಂಗ್ರೆಸ್ ವಿರೋಧಿಸುತ್ತದೆ ಎಂದರು.
ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಈಶ್ವರಪ್ಪ ಅವರಿಗೆ ಕ್ಲೀನ್‌ಚಿಟ್ ನೀಡಿರುವ ಬಗ್ಗೆ ಕಾಂಗ್ರೆಸ್ ಮಾಡಿದ್ದ ಟೀಕೆಗೆ ಸಚಿವ ಕೆ.ಸುಧಾಕರ್ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದಾರೆ.

ಒಕ್ಕಲಿಗರು ಬಿಜೆಪಿಗೆ ಬೆಂಬಲ ನೀಡಲಿದ್ದಾರೆ
ಜೆಡಿಎಸ್ ಹಾಗೂ ಕಾಂಗ್ರೆಸ್ ಒಕ್ಕಲಿಗರ ವಿಶ್ವಾಸ ಕಳೆದುಕೊಂಡಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಒಕ್ಕಲಿಗರು ಬಿಜೆಪಿಗೆ ಬೆಂಬಲ ನೀಡಲಿದ್ದಾರೆ. ಬಿಜೆಪಿ ಜಾತಿ ಆಧಾರಿತ ಪಕ್ಷವಲ್ಲ. ಸಮಾಜದ ಎಲ್ಲಾ ಜನವರ್ಗಗಳ ಕಲ್ಯಾಣವನ್ನು ಬಿಜೆಪಿ ಬಯಸುತ್ತದೆ. ಪರಿಶಿಷ್ಟ ಜಾತಿ ಹಾಗೂ ಪಂಗಡ, ಒಕ್ಕಲಿಗ, ಲಿಂಗಾಯಿತ, ಹಿಂದುಳಿದ ವರ್ಗ ಸೇರಿದಂತೆ ಎಲ್ಲರ ಅಭಿವೃದ್ಧಿಗಾಗಿ ಬಿಜೆಪಿ ಶ್ರಮಿಸುತ್ತದೆ ಎಂದರು.

ಪಡಿತರ ಅಕ್ಕಿ ಮಾರುವವರಿಗೆ ಸಚಿವರ ಎಚ್ಚರಿಕೆ
ಕೋವಿಡ್ ಸಾಂಕ್ರಾಮಿಕ ಬಂದ ಸಮಯದಲ್ಲಿ ಕೇಂದ್ರ ಸರ್ಕಾರ ಬಡವರಿಗೆ ಉಚಿತವಾಗಿ ಅಕ್ಕಿ ನೀಡಲು ಆರಂಭಿಸಿದೆ. ಯೋಜನೆ ಜನಪರವಾಗಿರಬೇಕು ಹಾಗೂ ಬಡವರಿಗೆ ತಲುಪಬೇಕು. ಹೆಚ್ಚು ಅಕ್ಕಿ ಬಂದಾಗ ಅದನ್ನು ಕೆಲವರು ಮಾರಾಟ ಮಾಡಿರುವುದು ಕಂಡುಬಂದಿದೆ. ಬಡವರಿಗೆ ಕೊಡುವ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಎಚ್ಚರಿಕೆ ನೀಡಿದರು.












Click it and Unblock the Notifications