'ಅಜ್ಜಿ'ಯ ನೆನೆಯಲು ಹೋಗಿ 'ಅಮ್ಮ'ನನ್ನು ನೆನೆದ ರಾಹುಲ್!
ಇಂದಿರಾ ಕ್ಯಾಂಟೀನ್ ಉದ್ಘಾಟನೆ ವೇಳೆ ರಾಹುಲ್ ಅಚಾತುರ್ಯ. ಇಂದಿರಾ ಕ್ಯಾಂಟೀನ್ ಎನ್ನಲು ಹೋಗಿ ಅಮ್ಮಾ ಕ್ಯಾಂಟೀನ್ ಎಂದು ಹೇಳಿದ ರಾಹುಲ್.
ಬೆಂಗಳೂರು, ಆಗಸ್ಟ್ 16: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ ಉದ್ಘಾಟನೆಗಾಗಿ ಬೆಂಗಳೂರಿಗೆ ಬುಧವಾರ ಆಗಮಿಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಉದ್ಘಾಟನಾ ಸಮಾರಂಭದಲ್ಲಿ ಭಾಷಣ ಮಾಡುವಾಗ ಇಂದಿರಾ ಕ್ಯಾಂಟೀನ್ ಎಂದು ಉಚ್ಚರಿಸುವ ಬದಲು ಅಮ್ಮಾ ಕ್ಯಾಂಟೀನ್ ಎಂದು ಉಚ್ಛರಿಸಿದ ಪ್ರಸಂಗ ನಡೆಯಿತು.
ದೀಪ ಬೆಳಗಿಸುವ ಮೂಲಕ ಕ್ಯಾಂಟೀನ್ ಉದ್ಘಾಟನೆ ನೆರವೇರಿಸಿದ ರಾಹುಲ್ ಗಾಂಧಿ ಆನಂತರ ಮಾತಿಗೆ ನಿಂತರು. ರಾಜ್ಯ ಸರ್ಕಾರದ ಈ ಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತಲೇ ತಮ್ಮ ಮಾತನ್ನು ಆರಂಭಿಸಿದ ಅವರು, ''ಇನ್ನು ಕೆಲವೇ ತಿಂಗಳುಗಳಲ್ಲಿ ರಾಜ್ಯದ ಎಲ್ಲಾ ಬಡವರೂ ಹೊಟ್ಟೆ ತುಂಬ ಊಟ ಮಾಡುವಂಥ ಸುಯೋಗ ಒದಗಲಿದೆ. ರಾಜ್ಯದ ಎಲ್ಲಾ ನಗರಗಳಲ್ಲಿ ತಲೆ ಎತ್ತಲಿರುವ ಅಮ್ಮಾ ಅಲ್ಲ.... ಇಂದಿರಾ ಕ್ಯಾಂಟೀನ್ ನಿಂದ ಯಾರೂ ಇನ್ನು ಉಪವಾಸದಿಂದ ಇರುವಂತಾಗದು'' ಎಂದರು.

ಬಾಯಿ ತಪ್ಪಿ ಆಡಿದ ಮಾತಿಗೆ ರಾಹುಲ್ ಮುಖದಲ್ಲಿ ಕೊಂಚ ಮುಜುಗರ ಇಣುಕಿತಾದರೂ, ಅರೆಕ್ಷಣದಲ್ಲಿ ಆ ತಪ್ಪನ್ನು ಸರಿಪಡಿಸಿಕೊಂಡು ಸರಿಯಾಗಿ ಉಚ್ಛರಿಸಿದ್ದರ ಬಗ್ಗೆ ಒಂದು ಸಮಾಧಾನವೂ ಕಂಡಿತು.
ಆದರೆ, ನೆರೆದಿದ್ದವರಿಗೆ ಮಾತ್ರ ರಾಹುಲ್ ಬಾಯಿ ತಪ್ಪಿ ಏನನ್ನೋ ಹೇಳಲು ಹೋಗಿದ್ದು ಅವರ ಮುಖದಲ್ಲಿ ಮಂದಹಾಸವನ್ನು ತರಿಸಿತು.












Click it and Unblock the Notifications