ಚುನಾವಣೆ ಪ್ರಚಾರದಿಂದ ಅಂಬರೀಷ್ ದೂರ ದೂರ?
ಬೆಂಗಳೂರು/ ಸಿಂಗಪುರ, ಮಾ,.23: ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಶ್ವಾಸಕೋಶ ಸೋಂಕಿನ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದ ನಟ, ಸಚಿವ ಅಂಬರೀಷ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅಂಬರೀಷ್ ಅವರು ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಅವರಿಗೆ ಸದ್ಯ ವಿಶ್ರಾಂತಿಯ ಅಗತ್ಯವಿದೆ ಎಂದು ಬೆಂಗಳೂರಿನ ವಿಕ್ರಮ್ ಆಸ್ಪತ್ರೆ ವೈದ್ಯರು ಡಾ. ಸತೀಶ್ ಅವರು ಹೇಳಿದ್ದಾರೆ.
ಅಂಬರೀಷ್ ಅವರಿಗೆ ವಿಶ್ರಾಂತಿ ಬೇಕಾಗಿರುವುದರಿಂದ ನಾಲ್ಕೈದು ದಿನ ಅವರು ಸಿಂಗಾಪುರದಲ್ಲೇ ಇರುತ್ತಾರೆ. ಅಂಬರೀಷ್ ಅವರು ಸಿಂಗಾಪುರದಲ್ಲಿರುವ ತಮ್ಮ ಸ್ನೇಹಿತರೊಬ್ಬರ ಫ್ಲಾಟಿನಲ್ಲಿ ತಂಗಲಿದ್ದು, ವಿಶ್ರಾಂತಿ ಪಡೆಯಲಿದ್ದಾರೆ. ನಂತರ ಅಲ್ಲಿಂದ ಮಲೇಷಿಯಾಕ್ಕೆ ತೆರಳಲಿದ್ದಾರೆ. ಮಲೇಷಿಯಾದಲ್ಲಿ ಒಂದು ವಾರ ಅಥವಾ ಹತ್ತು ದಿನಗಳ ಕಾಲ ನೆಲೆಸುವ ಸಾಧ್ಯತೆಯಿದೆ. ಅದರೆ, ಈ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.
ಚುನಾವಣೆ ಪ್ರಚಾರಕ್ಕೆ ಇಲ್ಲ?: ಮಾ.30ರಂದು ಅಂಬರೀಷ್ ಅವರು ಬೆಂಗಳೂರಿಗೆ ಬರಲಿದ್ದಾರೆ. ಮಾ.24ಕ್ಕೆ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಅಂದಿನಿಂದ ಪಕ್ಷದ ಅಭ್ಯರ್ಥಿ(ರಮ್ಯಾ) ಪರ ಕೆಲಸ ಮಾಡಲು ಮುಂದಾಗೋಣ. ಅಂಬರೀಷ್ ನಾಯಕತ್ವದಲ್ಲೇ ಚುನಾವಣೆ ನಡೆಯಲಿ ಎಂದು ಅಂಬಿ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಸುನೀತಾ ರಾಜೇಶ್ ಅವರು ಹೇಳಿದ್ದರು.

ಆದರೆ, ವೈದ್ಯರ ಪ್ರಕಾರ ಅಂಬರೀಷ್ ಅವರು ಗುಣಮುಖರಾಗಿ ಕರ್ನಾಟಕಕ್ಕೆ ವಾಪಸ್ ಬಂದರೂ ಬಹಿರಂಗ ಪ್ರಚಾರದಲ್ಲಿ ತಕ್ಷಣವೇ ತೊಡಗಿಕೊಳ್ಳುವುದು ಕಷ್ಟಸಾಧ್ಯ. ಎಂದು ತಿಳಿದು ಬಂದಿದೆ.
ಶ್ವಾಸಕೋಶ ಸೋಂಕಿನಿಂದಾಗಿ ಅಂಬರೀಷ್ ಅವರು ಫೆ. 21ರಂದು ನಗರದ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು. ಶ್ವಾಸಕೋಶ ದುರ್ಬಲವಾಗಿದ್ದರಿಂದ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಮಧ್ಯೆ ಅಂಬರೀಷ್ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಭೇಟಿ ನೀಡಿದ್ದ ತಮಿಳಿನ ಖ್ಯಾತ ಚಿತ್ರನಟ ರಜನಿಕಾಂತ್, ತಾವು ಈ ಹಿಂದೆ ಚಿಕಿತ್ಸೆ ಪಡೆದಿದ್ದ ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವಂತೆ ಅಂಬರೀಷ್ ಕುಟುಂಬ ಸದಸ್ಯರಿಗೆ ಸಲಹೆ ಮಾಡಿದ್ದರು.
ರಜನಿಕಾಂತ್ ಸಲಹೆಯಂತೆ ಸರ್ಕಾರದೊಂದಿಗೆ ಚರ್ಚಿಸಿದ ಬಳಿಕ ಹೆಚ್ಚಿನ ಮಾಹಿತಿ ಪಡೆಯಲು ದೆಹಲಿಯ ಏಮ್ಸ್ ಆಸ್ಪತ್ರೆಯ ತಜ್ಞರನ್ನು ಕರೆಸಲಾಗಿತ್ತು. ಅವರು ಅಂಬರೀಷ್ ಅವರನ್ನು ಪರಿಶೀಲಿಸಿ ಸಿಂಗಾಪುರಕ್ಕೆ ಕಳುಹಿಸಲು ಸಮ್ಮತಿಸಿದ್ದರು. ಅದರಂತೆ ಮಾ. 1ರಂದು ಅವರನ್ನು ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ಕರೆದ್ಯೊಲಾಗಿತ್ತು.ಈಗ ಅಂಬರೀಷ್ ಸೋಂಕಿನಿಂದ ಗುಣಮುಖರಾಗಿದ್ದು ಇತ್ತೀಚೆಗೆ ಅಭಿಮಾನಿಗಳಿಗೆ ವಿಡಿಯೋ ಸಂದೇಶ ಕಳುಹಿಸಿದ್ದರು.












Click it and Unblock the Notifications