ಅಂಬಿ ನಿಧನಕ್ಕೆ ಕನ್ನಡ ಚಿತ್ರರಂಗದ ನಟ-ನಟಿಯರ ದಿಗ್ಭ್ರಮೆ
Recommended Video

ಮಾಜಿ ಸಚಿವ- ನಟ ಅಂಬರೀಶ್ ಶನಿವಾರ ಬೆಂಗಳೂರಿನಲ್ಲಿ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ. ಅರವತ್ತಾರು ವರ್ಷದ ಅಂಬರೀಶ್ ಅವರ ವ್ಯಕ್ತಿತ್ವವೇ ಆಕರ್ಷಕವಾದದ್ದು. ಇನ್ನೂ ಆಸಕ್ತಿಕರ ಸಂಗತಿ ಏನೆಂದರೆ, ಅವರ ಬಗ್ಗೆ ಯಾರೇ ಮಾತನಾಡಿದರೂ ಒಂದೇ ಬಗೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಅವರ ಮಾತು ಒರಟಾದರೂ ಮನಸಿನಲ್ಲಿ ಇನ್ನೊಬ್ಬರ ಬಗ್ಗೆ ಕಾಳಜಿ ಇರುವವರು ಎಂಬುದೇ ಹಲವರ ಅಭಿಪ್ರಾಯ. ಇದರಲ್ಲೇ ಗೊತ್ತಾಗುವ ಸಂಗತಿ ಏನೆಂದರೆ, ಎಲ್ಲರ ಬಳಿಯೂ ಅವರು ಒಂದೇ ರೀತಿ ಇರುತ್ತಿದ್ದರು. ಸ್ಟಾರ್ ಪಟ್ಟ, ರಾಜಕಾರಣ, ಏರಿದ ಅಧಿಕಾರ, ಜನರ ಅಭಿಮಾನ, ದೊಡ್ಡವರ ಸ್ನೇಹ ಯಾವುದೂ ಅವರ ಮೂಲ ಗುಣದಲ್ಲಿ ವ್ಯತ್ಯಾಸ ತರಲಿಲ್ಲ.
ಅಂಬರೀಶ್ ಅವರ ಸಾವಿನ ಹಿನ್ನೆಲೆಯಲ್ಲಿ ನಟ-ನಟಿಯರು ಕೆಲವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಅದರ ಸಂಗ್ರಹ ಇಲ್ಲಿದೆ.

ಶ್ರುತಿ, ಚಿತ್ರ ನಟಿ
ಇಂದು ಕರಾಳ ದಿನ. ಇದನ್ನು ನಂಬಲು ಸಾಧ್ಯವೇ ಆಗ್ತಿಲ್ಲ. ನನ್ನ ತಂದೆಯ ಸ್ನೇಹಿತರು ಅವರು. ಈಚೆಗೆ ಅವರನ್ನು ಭೇಟಿಯಾಗಿದ್ದೆ. ನನ್ನ ಮಗಳನ್ನು ಕಂಡರೆ ಅವರಿಗೆ ಬಹಳ ಪ್ರೀತಿ. ನಾವು ಅಂದುಕೊಂಡಂತೆ ಬದುಕುವುದು ಬಹಳ ಕಷ್ಟ. ಇತರರಿಗಾಗಿ ತಮ್ಮ ಗುಣವನ್ನು ಬದಲಾಯಿಸಿಕೊಳ್ಳುವಂಥ ವ್ಯಕ್ತಿ ಅವರಾಗಿರಲಿಲ್ಲ್. ಚಿತ್ರರಂಗದ ಯಾರದೋ ಮನೆಯಲ್ಲಿ ಏನೋ ಆದರೆ ಅಂಬರೀಶ್ ಅವರ ಬಳಿ ಹೋದರೆ ಸಮಸ್ಯೆ ನಿವಾರಣೆ ಆಗುತ್ತದೆ ಎಂಬ ನಂಬಿಕೆ ಇತ್ತು. ನಮಗೆ ಕೋರ್ಟ್ ಬೇಕಿರಲಿಲ್ಲ, ಜಡ್ಜ್ ಬೇಕಿರಲಿಲ್ಲ. ನಮ್ಮ ಪಾಲಿಗೆ ಅವರಿದ್ದರು. ಆದರೆ ನಮಗೆ ಈಗ ಶೂನ್ಯ ಆವರಿಸಿದೆ.

ಭಾರತಿ, ನಟಿ
ಇತ್ತೀಚೆಗಷ್ಟೇ ಅವರು ನಮ್ಮ ಮನೆಗೆ ಬಂದಿದ್ದರು. ಅವರಿಗೆ ಕಿಡ್ನಿ ಡಯಾಲಿಸಿಸ್ ನಡೀತಾ ಇತ್ತು. ಆ ಚಿಕಿತ್ಸೆ ನಡೆಯುವಾಗ ಹೀಗೆ ಆಗುತ್ತದಂತೆ. ಅವರು ಹಾಗೂ ನಮ್ಮ ಮನೆಯವರ (ವಿಷ್ಣುವರ್ಧನ್) ಸ್ನೇಹ ಐತಿಹಾಸಿಕವಾದದ್ದು. ಚಿತ್ರರಂಗದಲ್ಲಿ ಆ ರೀತಿ ನೋಡಲು ಮತ್ತೆ ಸಿಗುತ್ತಾ? ವಿಷ್ಣುವರ್ಧನ್- ಅಂಬರೀಶ್ ಹಾಗೂ ರಾಜೇಂದ್ರ ಸಿಂಗ್ ಬಾಬು ಅವರ ಸ್ನೇಹ ಅಂತ ನೆನಪಿಸಿಕೊಳ್ಳುವ ಹಾಗಿತ್ತು. ಈ ದಿನ ಮಂಡ್ಯದಲ್ಲಿ ಅಷ್ಟೊಂದು ಜನ ತೀರಿಕೊಂಡಿದ್ದಾರೆ. ಈಗ ಇಂಥ ಸುದ್ದಿ ಕೇಳುವಂತಾಗಿದೆ.

ಜಗ್ಗೇಶ್, ನಟ
ನಮ್ಮ ಸಿನಿಮಾ 8 ಎಂಎಂ ಅವರಿಗೆ ತೋರಿಸಬೇಕು ಅಂತ ಬಹಳ ಪ್ರಯತ್ನಪಟ್ಟೆವು. ಆದರೆ ಅದು ಸಾಧ್ಯವಾಗಲಿಲ್ಲ. ಫೋನ್ ಮೂಲಕ ಸಂಪರ್ಕಿಸುವ ಪ್ರಯತ್ನ ಯಶಸ್ವಿ ಆಗಲಿಲ್ಲ. ಮೇಲ್ನೋಟಕ್ಕೆ ಒರಟಾಗಿ ಕಂಡರೂ ಅವರು ಬಹಳ ಸ್ನೇಹಪರರಾಗಿದ್ದರು. ಇಷ್ಟು ವರ್ಷಗಳ ಕಾಲದ ಅವರ ಜತೆಗಿನ ಒಡನಾಟ ಇಂದು ವಿಪರೀತವಾಗಿ ಕಾಡುತ್ತಿತ್ತು. ರಾತ್ರಿ ಹೊತ್ತಿಗೆ ಈ ಸುದ್ದಿ ಬಂದಿದೆ.

ಶಿವರಾಂ, ನಟ
ಟಿವಿಯಲ್ಲಿ ಅಂಬರೀಶ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಸುದ್ದಿ ಬರುತ್ತಲೇ ಸ್ವಲ್ಪ ಹೊತ್ತಿಗೆ ತೀರಿಕೊಂಡರು ಎಂಬುದನ್ನು ನೋಡಿ ಆಘಾತವಾಯಿತು. ಹಿರಿಯರು ಇರುವವರೆಗೆ ಆತ ಬಾಯಿ ಬಿಟ್ಟು ಮಾತನಾಡುತ್ತಲೇ ಇರಲಿಲ್ಲ. ಆದರೆ ರಾಜಕುಮಾರ್ ಅವರು ತೀರಿಕೊಂಡ ನಂತರ ವಿಷ್ಣು ಕಡೆ ನೋಡಲು ಆರಂಭಿಸಿದರು. ಆದರೆ ವಿಷ್ಣು ಭಯಸ್ತ. ವಿಷ್ಣು ಯಾವುದೇ ಕಾರ್ಯಕ್ರಮಕ್ಕೆ ಹೋಗಿಬರಬೇಕು ಅಂದರೂ ಅಂಬಿ ಕೋಟೆಯಂತೆ ಇರುತ್ತಿದ್ದರು. ವಿಷ್ಣು ತನಗಿಂತ ಉತ್ತಮ ನಟ ಎಂಬ ಸಂಗತಿ ಅವರಿಗೆ ತಿಳಿದಿತ್ತು.
|
ಸ್ವೀಡನ್ ನಿಂದ ಬೆಂಗಳೂರಿಗೆ ಬರುತ್ತಿರುವ ದರ್ಶನ್
ಅಂಬಿ ಅಪ್ಪಾಜಿಯನ್ನು ಕಳೆದುಕೊಂಡಿರುವದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ ಎಂದಿರುವ ನಟ ದರ್ಶನ್, ಸ್ವೀಡನ್ ನಲ್ಲಿ ನಡೆಯುತ್ತಿರುವ ಯಜಮಾನ ಚಿತ್ರೀಕರಣ ನಿಲ್ಲಿ ವಾಪಸಾಗುತ್ತಿದ್ದಾರೆ.
|
ಅದ್ಭುತ ವ್ಯಕ್ತಿ ಹಾಗೂ ಆಪ್ತ ಸ್ನೇಹಿತ
ಅದ್ಭುತ ವ್ಯಕ್ತಿ ಹಾಗೂ ಆಪ್ತ ಸ್ನೇಹಿತ ಅಂಬರೀಶ್. ಈ ದಿನ ನಿನ್ನನ್ನು ನಾನು ಕಳೆದುಕೊಂಡೆ...












Click it and Unblock the Notifications