ನೆಲಮಂಗಲ ನಗರಕ್ಕೆ ಕಡ್ಡಾಯವಾಗಿ ಹೋಗಲೇಬೇಕು: ಮಂಗಳೂರು, ತುಮಕೂರು ಮಾರ್ಗದ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಸೂಚನೆ
ಬೆಂಗಳೂರು, ಮೇ, 28: ಬೆಂಗಳೂರು-ತುಮಕೂರು ಮತ್ತು ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಪ್ರಯಾಣಿಸುವ ಎಲ್ಲಾ ಕೆಎಸ್‌ಆರ್‌ಟಿಸಿ ಬಸ್‌ಗಳು ನೆಲಮಂಗಲ ನಗರಕ್ಕೆ ಕಡ್ಡಾಯವಾಗಿ ಪ್ರವೇಶಿಸಬೇಕು ಎಂದು ಕೆಎಸ್‌ಆರ್‌ಟಿಸಿ ಆದೇಶ ನೀಡಿದೆ.
ಸಾಮಾನ್ಯವಾಗಿ ಈ ಮಾರ್ಗದಲ್ಲಿ ಚಲಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳು ಸೊಂಡೆಕೊಪ್ಪ ಬೈಪಾಸ್‌ನ ಬಸ್ ನಿಲ್ದಾಣದಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿ-ಹತ್ತಿಸಿಕೊಳ್ಳುತ್ತಿದ್ದವು. ಆದರೆ ಇನ್ನು ಮುಂದೆ ಇಲ್ಲಿ ನಿಲ್ಲಿಸುವ ಬದಲು ಸಂಜೆ 6 ಗಂಟೆಯಿಂದ ಬೆಳಗ್ಗೆ 6-30 ರವರೆಗೆ ನೆಲಮಂಗಲ ನಗರದಲ್ಲಿರುವ ನಗರದ ಬಸ್ ನಿಲ್ದಾಣದ ಬಳಿ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿ, ಹತ್ತಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಆದೇಶ ನೀಡಿದೆ.

ಹಲವು ವರ್ಷಗಳಿಂದ ಈ ಮಾರ್ಗದಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳು ಸೊಂಡೆಕೊಪ್ಪ ಬೈಪಾಸ್ ಬಳಿ ಸಂಚಾರ ನಿಯಂತ್ರಣ ಕೇಂದ್ರದ ಸಮೀಪ ನಿಲ್ಲಿಸಿ ತೆರಳುತ್ತಿದ್ದವು. ನೆಲಲಂಗಲ ಬಗರದ ಬಸ್ ನಿಲ್ದಾಣ ಬೈಪಾಸ್‌ಗೆ ದೂರ ಇರುವ ಕಾರಣ ಸಂಜೆಯ ನಂತರ ವಿದ್ಯಾರ್ಥಿಗಳು ಮತ್ತು ಮಹಿಳೆಯರು ಸಂಜೆಯ ನಂತರ ಆತಂಕದಲ್ಲೇ ಓಡಾಡುವಂತಾಗಿತ್ತು.
ಸಮಸ್ಯೆಯನ್ನು ಗಮನಿಸಿದ ರಾಷ್ಟ್ರೀಯ ಕಿಸಾನ್ ಸಂಘಟನೆ ಉಪಾಧ್ಯಕ್ಷ ಭೀಮಯ್ಯ ನೆಲಮಂಗಲ ನಗರಕ್ಕೆ ತೆರಳುವಂತೆ ಸಾರಿಗೆ ಸಂಸ್ಥೆಯ ಬಸ್‌ಗಳಿಗೆ ಆದೇಶ ನೀಡುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ್ದರು. ಭೀಮಯ್ಯ ಅವರ ಮನವಿಗೆ ಸ್ಪಂದಿಸಿರುವ ಇಲಾಖೆ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಕೆಎಸ್‌ಆರ್‌ಟಿಸಿ ಬಸ್‌ಗಳು ನಗರದ ಬಸ್ ನಿಲ್ದಾಣಕ್ಕೆ ತೆರಳುವಂತೆ ಆದೇಶಿಸಿದ್ದಾರೆ.
ಸುಳ್ಳು ಮಾಹಿತಿ ನೀಡುವ ಬಸ್ ನಿರ್ವಾಹಕರು
ಈ ಭಾಗದಲ್ಲಿ ಚಲಿಸುವ ಸಾರಿಗೆ ಸಂಸ್ಥೆಯ ಬಸ್ ನಿರ್ವಾಹಕರು ಇಲ್ಲಿನ ಪ್ರಯಾಣಿಕರಿಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ನೆಲಮಂಗಲದಲ್ಲಿ ಸ್ಟಾಪ್ ಇಲ್ಲ ಎಂದು ಹೇಳುವ ಮೂಲಕ ಇಲ್ಲಿ ಬಸ್ ನಿಲ್ಲಿಸದೆ ಕೂಡ ಹೋಗುತ್ತಾರೆ. ಬಸ್‌ಗಳ ನಿರ್ವಾಹಕರು ಇದೇ ರೀತಿ ನಿರ್ಲಕ್ಷ್ಯ ತೋರಿದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಸರ್ಕಾರದ ಆದೇಶಕ್ಕೆ ಬೆಲೆ ಕೊಟ್ಟುಇನ್ನಾದರೂ ಈ ಮಾರ್ಗದಲ್ಲಿ ಚಲಿಸುವ ಕೆಎಸ್‌ಆರ್ ಟಿಸಿ ಬಸ್‌ಗಳು ನೆಲಮಂಗಲ ನಗರಕ್ಕೆ ಪ್ರವೇಶ ನೀಡಬೇಕು ಎಂದು ವಿದ್ಯಾರ್ಥಿಗಳು ಮತ್ತು ಮಹಿಳಾ ಪ್ರಯಾಣಿಕರ ಒತ್ತಾಯವಾಗಿದೆ.
ತುಮಕೂರು-ಬೆಂಗಳೂರು ಮಾರ್ಗದಲ್ಲಂತೂ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳಲು ಬಸ್ ಚಾಲಕರು ಮತ್ತು ನಿರ್ವಾಹಕರು ನಿರ್ಲಕ್ಷ್ಯ ತೋರುತ್ತಾರೆ. ಈ ಬಗ್ಗೆ ಕೂಡ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ, ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡು ಹೋಗುವಂತೆ ಸೂಚನೆ ನೀಡಬೇಕು ಎಂದು ಒತ್ತಾಯಿಸಲಾಗಿದೆ.












Click it and Unblock the Notifications