ಬಿಎಂಟಿಸಿ ಬಸ್ಸಿನಲ್ಲಿಯೇ ಬೋರ್ಡಿಂಗ್ ಪಾಸ್ ಪಡೆಯಿರಿ
ಬೆಂಗಳೂರು, ಸೆಪ್ಟೆಂಬರ್ 20 : ಬೆಂಗಳೂರು ವಿಮಾನ ನಿಲ್ದಾಣದ ಪ್ರಯಾಣಿಕರು ಇನ್ನು ಮುಂದೆ ಬಿಎಂಟಿಸಿ ವಾಯು ವಜ್ರ ಬಸ್ಸಿನಲ್ಲಿಯೇ ಬೋರ್ಡಿಂಗ್ ಪಾಸ್ ಪಡೆಯಬಹುದಾಗಿದೆ. ಈ ವ್ಯವಸ್ಥೆ ಜಾರಿಗೆ ತರಲು ಕೆಐಎಎಲ್ ಅಧಿಕಾರಿಗಳ ಜೊತೆ ಬಿಎಂಟಿಸಿ ಈ ಮಾತುಕತೆ ನಡೆಸುತ್ತಿದೆ.
ವಿಮಾನ ಪ್ರಯಾಣಿಕರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಬೋರ್ಡಿಂಗ್ ಪಾಸ್ ಪಡೆಯುತ್ತಿದ್ದರು. ಬಿಎಂಟಿಸಿಯ ಯೋಜನೆ ಜಾರಿಗೆ ಬಂದರೆ ವಿಮಾನ ನಿಲ್ದಾಣ ತಲುಪುವ ಮೊದಲೇ, ಬಿಎಂಟಿಸಿ ವಾಯು ವಜ್ರ ಬಸ್ಸಿನಲ್ಲಿ ಬೋರ್ಡಿಂಗ್ ಪಾಸ್ ಕೈ ಸೇರುತ್ತದೆ.

ವಿಮಾನ ನಿಲ್ದಾಣದ ಆವರಣದಲ್ಲಿ ಈಗಾಗಲೇ ಸೆಲ್ಫ್ ಚೆಕ್ ಇನ್ ಬೋರ್ಡಿಂಗ್ ಪಾಸ್ ವಿತರಣೆ ಮಾಡುವ ಕಿಯೋಸ್ಕ್ ಸ್ಥಾಪನೆ ಮಾಡಲಾಗಿದೆ. ಬಸ್ಸಿನಲ್ಲಿಯೂ ಇದೇ ಕಿಯೋಸ್ಕ್ ಸ್ಥಾಪಿಸಲು ಬಿಎಂಟಿಸಿ ನಿರ್ಧರಿಸಿದೆ. ಇದಕ್ಕೆ ಮೊದಲು ಎಲ್ಲಾ ವಿಮಾನಯಾನ ಸಂಸ್ಥೆಗಳು ಒಪ್ಪಿಗೆ ನೀಡಬೇಕಿದೆ.
ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಪೊನ್ನುರಾಜ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. 'ಕೆಐಎಎಲ್ ಅಧಿಕಾರಿಗಳ ಜೊತೆ ಈ ಕುರಿತು ಮಾತುಕತೆ ನಡೆಯುತ್ತಿದೆ. ಬೋರ್ಡಿಂಗ್ ಪಾಸ್ ಜೊತೆಗೆ ಲಗೇಜ್ ಹ್ಯಾಡ್ಲಿಂಗ್ ಸೇವೆಯನ್ನು ಒದಗಿಸುವ ಚಿಂತನೆ ಇದೆ' ಎಂದು ಅವರು ಹೇಳಿದ್ದಾರೆ.
ವಿಮಾನ ನಿಲ್ದಾಣಕ್ಕೆ ಬಿಎಂಟಿಸಿಯ 90ಬಸ್ಸುಗಳು ಸಂಚಾರ ನಡೆಸುತ್ತಿವೆ. ಆಗಸ್ಟ್ ತಿಂಗಳಿನಲ್ಲಿ 2 ಲಕ್ಷ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ವಾಯು ವಜ್ರ ಬಸ್ಸಿನ ಮೂಲಕ ತೆರಳಿದ್ದಾರೆ. ಆನ್ ಲೈನ್ ಮೂಲಕವೇ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆ, ಬೋರ್ಡಿಂಗ್ ಪಾಸ್ ವ್ಯವಸ್ಥೆ ಕಲ್ಪಿಸುವ ಮೂಲಕ ಮತ್ತಷ್ಟು ಜನರನ್ನು ಸೆಳೆಯಲು ಬಿಎಂಟಿಸಿ ಮುಂದಾಗಿದೆ.












Click it and Unblock the Notifications