ಬೆಂಗಳೂರಿನಲ್ಲಿ ಗಣನೀಯವಾಗಿ ತಗ್ಗಿದ ಸಕ್ರಿಯ ಪ್ರಕರಣ; ಈ ಕುಸಿತಕ್ಕೆ ಎರಡು ಕಾರಣ...
ಬೆಂಗಳೂರು, ಜುಲೈ 06: ರಾಜ್ಯದಲ್ಲಿ ಆರ್ಭಟಿಸಿದ್ದ ಕೊರೊನಾ ಎರಡನೇ ಅಲೆ ತಣ್ಣಗಾಗಿದೆ. ಕೆಲವು ದಿನಗಳಿಂದ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಅತಿ ಹೆಚ್ಚು ಸಕ್ರಿಯ ಕೊರೊನಾ ಪ್ರಕರಣಗಳಿದ್ದ ಬೆಂಗಳೂರು ನಗರ ಪ್ರದೇಶದಲ್ಲಿಯೂ ಎರಡು ತಿಂಗಳ ನಂತರ ಸಂಖ್ಯೆ ತಗ್ಗಿದ್ದು, ಸಕ್ರಿಯ ಪ್ರಕರಣಗಳ ದಾಖಲೆಯಲ್ಲಿ ಎರಡನೇ ಸ್ಥಾನಕ್ಕೆ ಇಳಿದಿದೆ.
ದೇಶದಲ್ಲೇ ಅತಿ ಹೆಚ್ಚು ಸಕ್ರಿಯ ಪ್ರಕರಣಗಳಿದ್ದ ಜಿಲ್ಲೆಯಾಗಿ ಬೆಂಗಳೂರು ನಗರ ಗುರುತಿಸಿಕೊಂಡಿತ್ತು. ಇದೀಗ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದ್ದು, ಸೋಮವಾರ ಸಕ್ರಿಯ ಪ್ರಕರಣಗಳ ಸಂಖ್ಯೆ 15,395ಕ್ಕೆ ಬಂದು ನಿಂತಿದೆ. ಬೆಂಗಳೂರು ಈ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಇಳಿದಿದೆ. ಮಹಾರಾಷ್ಟ್ರದ ಪುಣೆ ಸದ್ಯಕ್ಕೆ ಮೊದಲ ಸ್ಥಾನದಲ್ಲಿದ್ದು, ಅಲ್ಲಿ 16,960 ಕೊರೊನಾ ಸಕ್ರಿಯ ಪ್ರಕರಣಗಳಿವೆ. ಬೆಂಗಳೂರು ನಗರ ಪ್ರದೇಶದಲ್ಲಿ ಸದ್ಯದ ಕೊರೊನಾ ಪರಿಸ್ಥಿತಿ ಹೇಗಿದೆ? ಇಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ತಗ್ಗಲು ಪ್ರಮುಖ ಕಾರಣವೇನು? ಮುಂದಿದೆ ವಿವರ...

ಏಪ್ರಿಲ್‌ನಲ್ಲಿ ತಾರಕಕ್ಕೇರಿದ್ದ ಸಕ್ರಿಯ ಪ್ರಕರಣ
ಏಪ್ರಿಲ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿದ್ದವು. ಏಪ್ರಿಲ್ 19ರಂದು ಸಕ್ರಿಯ ಪ್ರಕರಣಗಳ ಸಂಖ್ಯೆ ಒಂದು ಲಕ್ಷ ದಾಟಿದ್ದು, ಏಪ್ರಿಲ್ 23ರಂದು 1.5 ಲಕ್ಷ ಕೊರೊನಾ ಸಕ್ರಿಯ ಪ್ರಕರಣಗಳು ದಾಖಲಾಗಿದ್ದವು. ದೇಶದಲ್ಲೇ ಅತಿ ಹೆಚ್ಚು ಸಕ್ರಿಯ ಪ್ರಕರಣಗಳಿರುವ ಜಿಲ್ಲೆಯಾಗಿ ಬೆಂಗಳೂರು ನಗರ ಗುರುತಿಸಿಕೊಂಡಿತು. ಪುಣೆ 1.1 ಲಕ್ಷ ಪ್ರಕರಣಗಳೊಂದಿಗೆ ಎರಡನೇ ಸ್ಥಾನದಲ್ಲಿತ್ತು.

15 ದಿನಗಳಿಂದ ಕೊರೊನಾ ಪ್ರಕರಣಗಳ ಇಳಿಕೆ
ಕಳೆದ ಹದಿನೈದು ದಿನಗಳಿಂದ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಹದಿನೈದು ದಿನಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 61%ರಷ್ಟು ಇಳಿಮುಖವಾಗಿದೆ. ಕೊರೊನಾ ಸೋಂಕಿನಿಂದ ಗುಣಮುಖರಾದವರ ಸಂಖ್ಯೆಯಲ್ಲಿಯೂ ಏರಿಕೆಯಾಗಿದ್ದು, ಲಾಕ್‌ಡೌನ್ ನಿಯಮಗಳನ್ನೂ ಸೋಮವಾರದಿಂದ ಸಡಿಲಗೊಳಿಸಲಾಗಿದೆ.

ಬೆಂಗಳೂರಿನಲ್ಲಿ ಕೊರೊನಾ ಕಡಿಮೆಯಾಗಲು ಕಾರಣವೇನು?
ಬೆಂಗಳೂರು ನಗರ ಪ್ರದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗಲು ಎರಡು ಪ್ರಮುಖ ಕಾರಣವನ್ನು ತಜ್ಞರು ನೀಡಿದ್ದಾರೆ. ಮೊದಲನೆಯದಾಗಿ, ಹೆಚ್ಚು ಮಂದಿ ಕೊರೊನಾ ಲಸಿಕೆ ಪಡೆದುಕೊಂಡಿರುವುದು ಹಾಗೂ ಕೊರೊನಾದಿಂದ ಗುಣಮುಖರಾದವರ ಸಂಖ್ಯೆ ಹೆಚ್ಚಿರುವುದು. ಈ ಎರಡು ಅಂಶಗಳು ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುವಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದಿದ್ದಾರೆ. ಕೊರೊನಾ ಎರಡನೇ ಅಲೆ ಆರಂಭವಾದಾಗಿನಿಂದಲೂ, ಅಂದರೆ ಮಾರ್ಚ್ 12ರಿಂದಲೂ ಇದುವರೆಗೆ ಬೆಂಗಳೂರಿನಲ್ಲಿ 7.94 ಲಕ್ಷ ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಕರ್ನಾಟಕದಲ್ಲಿ ಎಷ್ಟು ಕೊರೊನಾ ಪ್ರಕರಣಗಳಿವೆ?
ಸೋಮವಾರದ ಮಾಹಿತಿಯಂತೆ, ರಾಜ್ಯದಲ್ಲಿ 2848 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಬೆಂಗಳೂರು ನಗರದಲ್ಲಿ 520 ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಇದೇ ಅವಧಿಯಲ್ಲಿ 5631 ಸೋಂಕಿತರು ಗುಣಮುಖರಾಗಿದ್ದಾರೆ. 67 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಈವರೆಗೂ ಸೋಂಕಿನಿಂದ 35434 ಮಂದಿ ಸಾವನ್ನಪ್ಪಿದ್ದಾರೆ. ಸೋಮವಾರದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 28,56,491ಕ್ಕೆ ಏರಿಕೆಯಾಗಿದೆ. ಈವರೆಗೂ 27,79,038 ಸೋಂಕಿತರು ಗುಣಮುಖರಾಗಿದ್ದು. 41,996 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.












Click it and Unblock the Notifications