Bengaluru Airport: ನಟಿ ರನ್ಯಾ ರಾವ್ ಕೇಸ್ ಬಳಿಕ ಏರ್‌ಪೋರ್ಟ್‌ನಲ್ಲಿ ಹೊಸ ರೂಲ್ಸ್
ವಿದೇಶದಿಂದ ಅಕ್ರಮವಾಗಿ ಚಿನ್ನ ಸಾಗಾಟ ಕೇಸ್‌ನಲ್ಲಿ ಕನ್ನಡದ ಖ್ಯಾತ ನಟಿ ರನ್ಯಾ ಅವರನ್ನು ಬಂಧಿಸಲಾಗಿದೆ. ದುಬೈಗೆ ಪದೇ ಪದೇ ಪ್ರಯಾಣಿಸುತ್ತಿದ್ದ ಅನುಮಾನದ ಮೇರೆಗೆ ತಪಾಸಣೆ ನಡೆಸಿದಾಗ ರನ್ಯಾ ಅವರ ಬಳಿ ಅಕ್ರಮ ಚಿನ್ನ ಪತ್ತೆಯಾಗಿತ್ತು. ಇವರನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಬಂಧಿಸಲಾಗಿತ್ತು. ಈ ಪ್ರಕರಣದ ಬಳಿಕ ಏರ್‌ಪೋರ್ಟ್‌ನಲ್ಲಿ ಹೊಸ ರೂಲ್ಸ್ ತರಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.
ರನ್ಯಾ ರಾವ್ ಅವರು ರಾಜ್ಯ ಪೊಲೀಸ್ ವಸತಿ ಮಂಡಳಿಯ ಡಿಜಿಪಿ ರಾಮಚಂದ್ರರಾವ್ ಅವರ ಮಲಮಗಳು. ಹಾಗಾಗಿ ಏರ್‌ಪೋರ್ಟ್‌ನಲ್ಲಿರುವ ಶಿಷ್ಟಾಚಾರ ವಿಭಾಗವನ್ನು ಚಿನ್ನದ ಕಳ್ಳಸಾಗಣೆ ಕಾರ್ಯಾಚರಣೆಗಳಿಗೆ ದುರುಪಯೋಗಪಡಿಸಿಕೊಂಡಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ರಾಜ್ಯ ಸರ್ಕಾರವು ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೆ ಇಲ್ಲಿನ ಕಾರ್ಯವಿಧಾನಗಳನ್ನು ಪರಿಷ್ಕರಿಸಲು ನಿರ್ಧರಿಸಿದೆ. ಅದರಂತೆ ಇನ್ನು ಮುಂದೆ ಹಿರಿಯ ಅಧಿಕಾರಿಗಳ ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಗೆ ಏರ್‌ಪೋರ್ಟ್‌ನಲ್ಲಿ ಯಾವುದೇ ಶಿಷ್ಟಾಚಾರ (ಪ್ರೊಟೋಕಾಲ್) ಸಿಬ್ಬಂದಿಯ ಸೇವೆಗಳನ್ನು ಪಡೆಯಲು ಅವಕಾಶವಿಲ್ಲ ಎಂದು ಹೇಳಿದೆ.

ಇನ್ನು ಮುಂದೆ ಭದ್ರತಾ ಶಿಷ್ಟಾಚಾರವನ್ನು (security protocol) ಸಂಬಂಧಪಟ್ಟ ಅಧಿಕಾರಿಗಳಿಗೆ ಮಾತ್ರವೇ ಒದಗಿಸಲಾಗುವುದು. ಇದು ಅಧಿಕಾರಿಗಳ ಕುಟುಂಬದ ಸದಸ್ಯರು ಅಥವಾ ಸಂಬಂಧಿಕರಿಗೆ ಲಭ್ಯವಿರುವುದಿಲ್ಲ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಉಮಾಶಂಕರ್ ಎಸ್ಆರ್ ಹೇಳಿದ್ದಾರೆ ಎಂದು ವರದಿಯಾಗಿದೆ. ಶಿಷ್ಟಾಚಾರದ ಸವಲತ್ತುಗಳನ್ನು ದುರುಪಯೋಗಪಡಿಸಿಕೊಂಡು ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಮಾಡಿದ್ದಾರೆ ಎಂದು ಬಂಧಿಸಲಾಗಿದೆ. ಅವರ ಬಂಧನದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಇನ್ನು ಮುಂದೆ ನಿಯೋಜಿತ ಅಧಿಕಾರಿ, ಐಪಿಎಸ್ ಅಥವಾ ಐಎಎಸ್ ಆಗಿರಲಿ ಅವರನ್ನು ಮೀರಿ ಬೇರೆ ಇನ್ಯಾರಿಗೂ ಈ ಭದ್ರತಾ ಸೇವೆ ವಿಸ್ತರಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಐಪಿಎಸ್ ಅಥವಾ ಐಎಎಸ್ ಅಧಿಕಾರಿ ಹೊರತುಪಡಿಸಿ ಯಾರಿಗೂ ಭದ್ರತೆ ನೀಡಲು ಯಾವುದೇ ಅವಕಾಶವಿಲ್ಲ. ಅಧಿಕಾರಿಗೆ ಬೆದರಿಕೆ ಇದ್ದಾಗ ಮಾತ್ರ ಹೆಚ್ಚುವರಿ ಭದ್ರತೆಯನ್ನು ಒದಗಿಸಲಾಗುತ್ತದೆ. ನಂತರ ಅಧಿಕಾರಿಯ ಹತ್ತಿರದ ಕುಟುಂಬಕ್ಕೆ ಭದ್ರತೆಯನ್ನು ವಿಸ್ತರಿಸಬಹುದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಚಿನ್ನದ ಕಳ್ಳಸಾಗಣೆ ಆರೋಪದ ಮೇಲೆ ರನ್ಯಾ ರಾವ್ ಅವರನ್ನು ಬಂಧಿಸಿದ ನಂತರ ಡಿಆರ್‌ಐ ಅಧಿಕಾರಿಗಳು ರಾಜ್ಯ ಪೊಲೀಸ್ ಶಿಷ್ಟಾಚಾರವನ್ನು ಪರಿಶೀಲಿಸಿತ್ತು. ಭದ್ರತಾ ಶಿಷ್ಟಾಚಾರ ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಟಿ ರನ್ಯಾ ರಾವ್‌ಗೆ ನೆರವು ನೀಡಿರುವುದು ಗೊತ್ತಾಗಿದೆ. ಡಿಜಿಪಿ ಅವರ ಮಗಳು (ರನ್ಯಾ) ಬಂದಾಗ ಅವರನ್ನು ಬರಮಾಡಿಕೊಳ್ಳಲು ಸೂಚನೆ ನೀಡಲಾಗಿದ್ದು, ಅವರು ಏನು ತರುತ್ತಿದ್ದರು ಎಂಬ ಬಗ್ಗೆ ಅವರಿಗೆ ಮಾಹಿತಿಯೇ ಇರಲಿಲ್ಲ ಎಂದು ತನಿಖೆ ವೇಳೆ ತಿಳಿದುಬಂದಿದೆ.
ಸಿಬಿಐ ಎಂಟ್ರಿ: ನಟಿಯನ್ನು ಮೊದಲಿಗೆ ಕಂದಾಯ ಗುಪ್ತಚರ ನಿರ್ದೇಶನಾಲಯ (ಎಡಿಆರ್) ಅಧಿಕಾರಿಗಳು ಬಂಧಿಸಿದ್ದರು. ಇದೀಗ ಈ ಕೇಸ್‌ಗೆ ಸಿಬಿಐ ಕೂಡ ಎಂಟ್ರಿ ನೀಡಿದೆ. ರನ್ಯಾ ರಾವ್ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿಕೊಂಡಿದೆ. ಎಡಿಆರ್ ನಿರ್ದೇಶನದ ಮೇರೆಗೆ ಸಿಬಿಐ ಇಂದು ದೆಹಲಿ, ಬೆಂಗಳೂರು, ಮುಂಬೈ ಸೇರಿದಂತೆ ಹಲವು ಕಡೆ ದೂರು ದಾಖಲಿಸಿಕೊಂಡು ರನ್ಯಾ ರಾವ್ ವಿರುದ್ಧ ತನಿಖೆ ಪ್ರಾರಂಭಿಸಿದೆ.












Click it and Unblock the Notifications