ಪೊಲೀಸ್ ಪೇದೆ ಮೇಲೆ ದರ್ಶನ್ ಅಭಿಮಾನಿಗಳ ಗೂಂಡಾಗಿರಿ
Recommended Video
ಬೆಂಗಳೂರು, ಫೆಬ್ರವರಿ 18; ಚಾಲೇಂಜಿಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬದ ವೇಳೆ ಅವರ ಅಭಿಮಾನಿಗಳು ಗೂಂಡಾಗಿರಿ ಮೆರೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹುಟ್ಟುಹಬ್ಬದ ವೇಳೆ ಜ್ಞಾನ ಭಾರತಿ ಠಾಣೆಯ ಕಾನ್‌ಸ್ಟೆಬಲ್ ಡಿ.ಆರ್.ದೇವರಾಜ್ ಎಂಬುವವರ ಮೇಲೆ ಹಲ್ಲೆ ಮಾಡಲಾಗಿದ್ದು, ತೀವ್ರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದರ್ಶನ್ ಅಭಿಮಾನಿಗಳು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಜ್ಞಾನ ಭಾರತಿ ಠಾಣೆಯ ಕಾನ್‌ಸ್ಟೆಬಲ್ ದೇವರಾಜ್ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದರ್ಶನ್ ಹುಟ್ಟುಹಬ್ಬ ಕಾರ್ಯಕ್ರಮ ಆಯೋಜಿಸಿದ್ದ ವ್ಯವಸ್ಥಾಪಕರು ಹಾಗೂ ಅಪರಿಚಿತ ಅಭಿಮಾನಿಗಳ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಂದು ನಡೆದಿದ್ದೇನು?
ಕಳೆದ ಶನಿವಾರ ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಮನೆ ಎದುರು ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಲ್ಲಿ ಭದ್ರತೆಗಾಗಿ ಜ್ಞಾನ ಭಾರತಿ ಠಾಣೆಯ ಕಾನ್‌ಸ್ಟೆಬಲ್ ದೇವರಾಜ್ ಅವರನ್ನು ನಿಯೋಜಿಸಲಾಗಿತ್ತು. ಕಾರ್ಯಕ್ರಮ ಸ್ಥಳದಲ್ಲಿ ಅಭಿಮಾನಿಗಳು ಸರದಿಯಲ್ಲಿ ಹೋಗಲು ಆಯೋಜಕರು ಸೂಕ್ತ ವ್ಯವಸ್ಥೆ ಮಾಡಿರಲಿಲ್ಲ. ಹೀಗಾಗಿ, ನೂಕುನುಗ್ಗಲು ಉಂಟಾಗಿತ್ತು.

ದೇವರಾಜ್ ಮೇಲೆ ಹಲ್ಲೆ
ಕೆಲಸದಲ್ಲಿ ದೇವರಾಜ್ ನಿರತರಾಗಿದ್ದ ವೇಳೆ ದೇವರಾಜ್ ಮೂಗಿಗೆ ಯಾರೋ ಜೋರಾಗಿ ಹೊಡೆದ ಘಟನೆ ನಡೆದಿದೆ. ಕಣ್ಣಿಗೂ ತೀವ್ರ ಹಾನಿ ಆಗಿ ರಕ್ತ ಸೋರುತ್ತಿತ್ತು. ಸಹೋದ್ಯೋಗಿಗಳೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರು ಎಂದು ಸ್ಥಳದಲ್ಲಿದ್ದ ಪೊಲೀಸರು ಹೇಳಿದ್ದಾರೆ.

ಕ್ರಮ ಕೈಗೊಳ್ಳಲು ಒತ್ತಾಯ
ಹುಟ್ಟುಹಬ್ಬ ಆಯೋಜಿಸಿದ್ದ ವ್ಯವಸ್ಥಾಪಕರು ಹಾಗೂ ಕೆಲ ಅಭಿಮಾನಿಗಳೇ ಈ ಹಲ್ಲೆಗೆ ಕಾರಣ. ಅವರೆಲ್ಲರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದರು. ಅಪರಾಧ ಸಂಚು (ಐಪಿಸಿ 34) ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ (ಐಪಿಸಿ 353) ಆರೋಪದಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.

ಎದುರು ಮನೆಯ ಮೇಲೆನೂ ಆಟಾಟೋಪ
ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಅವರು ಮನೆಯಲ್ಲಿ ಫೆ 16 ರಂದು ದರ್ಶನ್ ಅವರು ಹಟ್ಟುಹಬ್ಬ ಆಚರಣೆಗೆ ಅವರ ಅಭಿಮಾನಿಗಳು ಬಂದಿದ್ದರು. ಈ ವೇಳೆ ಉಂಟಾದ ನೂಕುನುಗ್ಗಲಿನಲ್ಲಿ ನಮ್ಮ ಮನೆ ಹಾಗೂ ಮನೆ ಮುಂದೆ ನಿಲ್ಲಿಸಿದ್ದ ಕಾರ್‌ಗೆ ಹಾನಿಯಾಗಿದೆ ಎಂದು ರಾಮಪ್ರಸಾದ್ ಎಂ ಎಸ್ ಎನ್ನುವರು ಕೂಡ ದೂರು ದಾಖಲಿಸಿದ್ದರು. ಇದರಿಂದ ನಮಗೆ 40 ಸಾವಿರ ರುಪಾಯಿ ಹಾನಿಯಾಗಿದೆ. ಜನ್ಮದಿನ ಆಯೋಜನೆ ಮಾಡಿದ್ದವರ ಮೇಲೆ ಕ್ರಮ ಕೈಗೊಂಡು, ಉಂಟಾದ ಹಾನಿಯನ್ನು ಕೊಡಿಸಬೇಕು ಎಂದು ರಾಮಪ್ರಸಾದ್ ನೀಡಿದ್ದ ಎನ್‌ಸಿಆರ್ ನಲ್ಲಿ ಒತ್ತಾಯಿಸಿದ್ದರು.












Click it and Unblock the Notifications