ದರ್ಶನ್‌ಗೆ ಇನ್ನಷ್ಟು ಸಂಕಷ್ಟ? ಮಾಜಿ ಮ್ಯಾನೇಜರ್ ಆತ್ಮಹತ್ಯೆ ಕೇಸ್ ಮರು ತನಿಖೆ ಸಾಧ್ಯತೆ
ಬೆಂಗಳೂರು, ಜೂನ್ 18: ಚಿತ್ರದುರ್ಗದ ವ್ಯಕ್ತಿಯ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಕೊರಳಿಗೆ ಒಂದೊಂದು ಹಳೆಯ ಪ್ರಕರಣಗಳು ಸುತ್ತಿಕೊಳ್ಳುತ್ತಿವೆ. ರೇಣುಕಾಸ್ವಾಮಿ ಕೊಲೆ ವಿಚಾರದಲ್ಲಿ ನಟ ದರ್ಶನ್ ಆಂಡ್ ಗ್ಯಾಂಗ್ ತನಿಖೆ ಎದುರಿಸುತ್ತಿದೆ. ಇದೀಗ ಫಾರ್ಮ್‌ಹೌಸಿನಲ್ಲಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ದರ್ಶನ್ ಮಾಜಿ ಮ್ಯಾನೇಜರ್ ಕೇಸ್ ಮರು ತನಿಖೆ ನಡೆಯುವ ಸಾಧ್ಯತೆಗಳು ದಟ್ಟವಾಗಿವೆ.
ಹಣ, ದರ್ಪ, ದುರಹಂಕಾರದಿಂದ ಕೂಡಿರುವ ನಟ ದರ್ಶನ್ ಮಾಡಿರುವ ಅಚಾತುರ್ಯಗಳು ಒಂದೆರಡಲ್ಲ. ಈಗಾಗಲೇ ದರ್ಶನ್ ಮ್ಯಾನೇಜರ್ ಮಲ್ಲಿಕಾರ್ಜುನ್ ಹಣ ವಂಚನೆ ಆರೋಪ ಎದುರಿಸಿ ಬೆನ್ನೆಲ್ಲೆ ಕಳೆದ ಆರೇಳು ವರ್ಷಗಳಿಂದ ನಾಪತ್ತೆ ಆಗಿದ್ದಾರೆ. ಇದರ ಬೆನ್ನಲ್ಲೆ ಮತ್ತೊಬ್ಬ ಮಾಜಿ ಮ್ಯಾನೇಜರ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣವು ನಟನಿಗೆ ಸುತ್ತಿಕೊಳ್ಳುವ ಸಾಧ್ಯತೆ ಇದೆ.

ದರ್ಶನ್ ಮಾಜಿ ಮ್ಯಾನೇಜರ್ ಶ್ರೀಧರ್ ಎಂಬುವವರು ಆನೇಕಲ್ ವ್ಯಾಪ್ತಿಯಲ್ಲಿ ದರ್ಶನ್‌ಗೆ ಸೇರಿದ್ದು ಎನ್ನಲಾದ ಫಾರ್ಮ್‌ಹೌಸಿನಲ್ಲಿ ಕಳೆದ ಏಪ್ರಿಲ್ 17ರಂದು ಡೆತ್‌ನೋಟ್ ಬರೆದಿಟ್ಟು ಸಾವಿಗೀಡಾಗಿದ್ದರು. ಆನೇಕಲ್‌ನ ಬಗ್ಗನದೊಡ್ಡಿಯ ಫಾರ್ಮ್‌ಹೌಸ್ ಅನ್ನು ಈ ಶ್ರೀಧರ್ ಎಂಬುವವರೇ ನೋಡಿಕೊಳ್ಳುತ್ತಿದ್ದರು.
ಡೆತ್‌ನೋಟ್ ನಲ್ಲಿ ಏನಿದೆ?
ಎರಡು ಎಕರೆ ವಿಶಾಲ ಪ್ರದೇಶದಲ್ಲಿ ಬಂಡೆ ಮೇಲೆ ಶ್ರೀಧರ್ ಶವ ಸಿಕ್ಕಿತ್ತು. ಈ ಬಗ್ಗೆ ಮೃತರ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸಾವಿನ ಬೆನ್ನಲ್ಲೆ ಮೃತ ವ್ಯಕ್ತಿ ಬರೆದಿಟ್ಟ ಡೆತ್‌ನೋಟ್ ಪೊಲೀಸರ ಕೈ ಸೇರಿತ್ತು.
ಈ ಡೆತ್‌ನೋಟ್‌ನಲ್ಲಿ 'ನನ್ನ ಸಾವಿಗೆ ನಾನೇ ಕಾರಣ, ಒಂಟಿತನ ಕಾಡುತ್ತಿದೆ. ಹಾಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಯಾರಿಗೂ ತೊಂದರೆ ಕೊಡಬೇಡಿ' ಉಲ್ಲೇಖಿಸಲಾಗಿತ್ತು. ಪ್ರಕರಣ ಆನೇಕಲ್ ತಾಲೂಕು ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಸದ್ಯ ಕೊಲೆ ಪ್ರಕರಣದಲ್ಲಿ ಅಂಧರ್ ಆಗಿರುವ ನಟ ದರ್ಶನ್ ಈ ಹಿಂದೆ ಮಾಡಿದ್ದ ಕೆಲವು ಹಲ್ಲೆ, ಬೆದರಿಕೆ ಇನ್ನಿತರ ಕೃತ್ಯಗಳು ಮರಜನ್ಮ ಪಡೆದಿವೆ.

ದರ್ಶನ್ ಹಿನ್ನೆಲೆ ಜಾಲಾಡುತ್ತಿರುವ ಪೊಲೀಸರು
ಇದೀಗ ಶ್ರೀಧರ್ ಸಾವು ಆತ್ಮಹತ್ಯೆಯೇ? ಕೊಲೆಯೇ? ಯಾರೋ ಆತನನ್ನು ಕೊಲೆ ಮಾಡಿ ಡೆತ್‌ನೋಟ್ ಬರೆದಿಟ್ಟರಾ? ಎಂದೆಲ್ಲ ಅನುಮಾನಗಳು ಎದ್ದಿವೆ. ಇದಕ್ಕೆಲ್ಲ ಮತ್ತೆ ಮರು ಜೀವ ಸಿಗುವ ಸಾಧ್ಯತೆಗಳು ದಟ್ಟವಾಗಿವೆ. ಸದ್ಯ ಕೊಲೆ ಪ್ರಕರಣದಲ್ಲಿರುವ ದರ್ಶನ್ ಹಿನ್ನೆಲೆ, ಹಿಂದಿನ ಕುಕೃತ್ಯಗಳ ಬಗ್ಗೆ ಪೊಲೀಸರು ಜಾಲಾಡುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಈ ಶ್ರೀಧರ್ ಒಂದಷ್ಟು ದಿನ ನಟ ದರ್ಶನ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದರು. ನಂತರ ಕಾರಣಾಂತರಗಳಿಂದ ಆ ಕೆಲಸ ಬಿಟ್ಟಿದ್ದರು. ಶ್ರೀಧರ್‌ಗೆ ಮದುವೆ ಆಗಿರಲಿಲ್ಲ. ಒಂಟಿತನದಿಂದ ಹೀಗೆ ಮಾಡಿಕೊಂಡಿದ್ದಾರೆ ಎಂದು ಅಂದು ತನಿಖೆ ನಡೆಸಿದ್ದ ಪೊಲೀಸ್ ಮರಣೋತ್ತರ ಪರೀಕ್ಷೆ, ಡೆತ್‌ನೋಟ್ ವಿವರವನ್ನು ಬಹಿರಂಗಪಡಿಸಿದ್ದರು.
ಇದೀಗ ಮತ್ತೆ ಶ್ರೀಧರ್ ಆತ್ಮಹತ್ಯೆ ಕೇಸ್ ತನಿಖೆ ನಡೆಸುವ ಸಾಧ್ಯತೆ ಇದೆ. ಇನ್ನೂ ಈಗಾಗಲೇ ಕಾಣೆಯಾಗಿರುವ ಮಲ್ಲಿಕಾರ್ಜುನ್ ಜೀವಂತವಾಗಿದ್ದ ಇದ್ದಾನಾ, ಇಲ್ಲವಾ ಎಂಬುದರ ಬಗ್ಗೆ ಅನುಮಾನ ಇತ್ತು. ಆದರೆ ತಾನು ಮಾಡಿ ಸಾಲ ತೀರಿಸಲು ಹಣ ಗಳಿಸುತ್ತೇನೆ ಎಂದು ಪತ್ನಿಗೆ ಬರೆದ ಪತ್ರದಿಂದ ತಿಳಿದು ಬಂದಿದೆ.












Click it and Unblock the Notifications