ಜಾರಕಿಹೊಳಿ ಸಿಡಿ ದೂರು ವಾಪಸು ಪಡೆಯಲು ಕಲ್ಲಹಳ್ಳಿ ಕತ್ತಿ ವರೆಸೆ !
ಬೆಂಗಳೂರು, ಮಾರ್ಚ್ 10: ಸಾರ್, ನಿಮಗೆ ಕೈ ಮುಗೀತೀನಿ.. ನನಗೆ ಮಾನಸಿಕ ನೆಮ್ಮದಿ ಇಲ್ಲ. ನಾನು ಕೊಟ್ಟಿರುವ ದೂರು ವಾಪಸು ಕೊಟ್ಟುಬುಡಿ.. ದಮ್ಮಯ್ಯ ಅಂತೀನಿ.. ಇದು ದೂರುದಾರ ದಿನೇಶ್ ಕಲ್ಲಹಳ್ಳಿ ದೂರು ವಾಪಸು ಪಡೆಯಲು ಪೊಲೀಸರ ಮುಂದೆ ಗೋಗರೆಯುತ್ತಿದ್ದಾರೆ. ತಮ್ಮಯ್ಯ ಆಡಿದ ನಾಟಕ ಸಾಕು. ಸಂತ್ರಸ್ತೆ ಅಡ್ರೆಸ್ ಕೊಡು.. ಇಲ್ಲಾ ನಿಂಗೆ ಸಿಡಿ ಕೊಟ್ಟ ಅವರ ಸಂಬಂಧಿಕರ ಡಿಟೇಲ್ಸ್ ಆದ್ರೂ ಕೊಡು, ಅಲ್ಲಿ ವರೆಗೂ ದೂರು ವಾಪಸು ಕೇಳಿಕೊಂಡು ಸ್ಟೇಷನ್ ಮೆಟ್ಟಿಲು ಹತ್ತಬೇಡ ಅಂತ ಕಬ್ಬನ್ ಪಾರ್ಕ್ ಪೊಲೀಸರು ಪಟ್ಟು ಹಿಡಿದು ಕೂತಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಕುರಿತ ದಿನೇಶ್ ಕಲ್ಲಹಳ್ಳಿ ದೂರು ವಾಪಸು ಪಡೆಯುವ ನಾಟಕ ಸದ್ಯಕ್ಕೆ ಅಂತ್ಯ ಕಾಣುತ್ತಿಲ್ಲ !
Recommended Video
ದೂರು ಕೊಟ್ಟ ಆರಂಭದಲ್ಲಿ ನನಗೆ ಬೆದರಿಕೆ ಕರೆ ಬರುತ್ತಿದೆ ವಿಚಾರಣೆಗೆ ಬರುವುದಿಲ್ಲ ಎಂದು ಹೇಳಿದ್ದ ದಿನೇಶ್ ಕಲ್ಲಹಳ್ಳಿಗೆ ಪೊಲೀಸರು ಭದ್ರತೆ ಒದಗಿಸಿದ್ದರು. ವಿಚಾರಣೆಗೆ ಹಾಜರಾದ ಬಳಿಕ ನಾನು ದೂರನ್ನೇ ವಾಪಸು ಪಡೆಯುತ್ತೇನೆ ಎಂದು ಹೇಳಿಕೆ ನೀಡಿದ್ದರು. ದೂರು ವಾಪಸು ಕೊಡಬೇಕಾದರೆ ಮೊದಲು ನೀನು ಸಂತ್ರಸ್ತ ಯುವತಿ ವಿವರ ಕೊಡು ಎಂದು ಕಬ್ಬನ್ ಪಾರ್ಕ್ ಪೊಲೀಸರು ಪಟ್ಟು ಹಿಡಿದು ಕೂತಿದ್ದರು. ದಿನೇಶ್ ಕಲ್ಲಹಳ್ಳಿ ದೂರು ಪಡೆಯಲು ಆಗಲಿಲ್ಲ. ಆನಂತರ ಕಾನೂನು ತಜ್ಞರ ಮೊರೆ ಹೊಗಿದ್ದ ದಿನೇಶ್ ಕಲ್ಲಹಳ್ಳಿ ವಕೀಲರನ್ನು ಪೊಲೀಸ್ ಠಾಣೆಗೆ ಕಳುಹಿಸಿ ದೂರು ಹಿಂಪಡೆಯಲು ಯತ್ನಿಸಿದರು. ಅದಕ್ಕೂ ಪೊಲೀಸರು ಆಸ್ಪದ ಕೊಟ್ಟಿರಲಿಲ್ಲ.
ಸಿಡಿ ಬಿಡುಗಡೆ ಹಿಂದೆ ಷಡ್ಯಂತ್ರ ಅಡಗಿದೆ. ಇದರ ಹಿಂದೆ ಐದು ಕೋಟಿ ರೂ. ವ್ಯವಹಾರ ಅಡಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಇದು ರಾಜ್ಯದೆಲ್ಲೆಡೆ ಸಂಚಲನ ಮೂಡಿಸಿತ್ತು. ಇದನ್ನೇ ಮುಂದಿಟ್ಟುಕೊಂಡು ಪ್ರತಿಕ್ರಿಯೆ ನೀಡಿದ್ದ ದಿನೇಶ್ ಕಲ್ಲಹಳ್ಳಿ, ಕುಮಾರಸ್ವಾಮಿ ಹೇಳಿಕೆಯಿಂದ ನೊಂದಿದ್ದೇನೆ. ನನಗೆ ಜನರು ಪ್ರಶ್ನೆ ಮಾಡುವಂತಾಗಿದೆ. ಸಾಮಾಜಿಕ ಜೀವನಕ್ಕೆ ತೊಡಕಾಗಿದೆ. ಹೀಗಾಗಿ ದೂರು ವಾಪಸು ಪಡೆಯುತ್ತೇನೆ ಎಂದು ಹೇಳಿಕೆ ನೀಡಿದ್ದ ಕಲ್ಲಹಳ್ಳಿ ಶತಾಯ ಗತಾಯ ಯತ್ನಿಸಿದರು. ಆದರೆ ಕಲ್ಲಹಳ್ಳಿಯ ಯಾವ ಮನವಿಗೂ ಪೊಲೀಸರು ತಲೆ ಕೆಡಿಸಿಕೊಂಡಿರಲಿಲ್ಲ. ಇದೀಗ ಮಾನಸಿಕ ನೆಮ್ಮದಿ ಹಾಳು ಕಾರಣ ಕೊಟ್ಟು ದೂರು ವಾಪಸು ಪಡೆಯುವ ಹೊಸ ವರೆಸೆ ಶುರು ಮಾಡಿದ್ದಾರೆ.

ನಾನಾ ಬೆಳವಣಿಗೆ: ನಾನು ಕೊಟ್ಟಿರುವ ದೂರು ವಾಪಸು ಕೊಡಿ ಎಂದು ಮಂಗಳವಾರ ಸಂಜೆ ದಿನೇಶ್ ಕಲ್ಲಹಳ್ಳಿ ಕಬ್ಬನ್ ಪಾರ್ಕ್ ಪೊಲೀಸರನ್ನು ಭೇಟಿ ಮಾಡಿ ಗೋಗರೆದಿದ್ದಾರೆ. ಸತತ ಒಂದು ಗಂಟೆ ಕಾಲ ಗೋಗರೆದರೂ ಪೊಲೀಸರು ಸೊಪ್ಪು ಹಾಕಿಲ್ಲ. ಈ ಕುರಿತು ಕಾನೂನು ತಜ್ಞರ ಅಭಿಪ್ರಾಯ ಸಂಗ್ರಹಿಸಿರುವ ಕಬ್ಬನ್ ಪಾರ್ಕ್ ಪೊಲೀಸರು ಕಾದು ನೋಡುವ ತಂತ್ರದ ಮೊರೆ ಹೊಗಿದ್ದಾರೆ. ಕೊಟ್ಟ ದೂರು ವಾಪಸು ಪಡೆಯಲು ಸಾಧ್ಯವಿಲ್ಲ. ಸಂತ್ರಸ್ತ ಯುವತಿಯ ವಿವರಗಳನ್ನು ಕೊಡು.ಇಲ್ಲವೇ ಆಕೆಯ ಸಂಬಂಧಿಕರನ್ನು ಠಾಣೆಗೆ ಕರೆಸಿ ದೂರು ಕೊಡಿಸಿದ ನಂತರ ನಿಮ್ಮ ದೂರು ವಾಪಸು ತೆಗೆದುಕೊಳ್ಳಿ. ನೀವು ಕೊಟ್ಟಿರುವ ದೂರಿನ ಹಿಂದೆ ಗಂಭೀರ ಸ್ವರೂಪದ ಅಪರಾಧವಿದೆ. ಹೀಗಾಗಿ ಸದ್ಯದ ಸ್ಥಿತಿಯಲ್ಲಿ ದೂರು ಕೊಡಲು ಸಾಧ್ಯವಿಲ್ಲ ಎಂದ ಕಡ್ಡಿ ಮುರಿದಂತೆ ಹೇಳಿದ್ದಾರೆ. ಅಲ್ಲದೇ ಇಂದು ವಿಚಾರಣೆಗೆ ಹಾಜರಾಗುವಂತೆಯೂ ಸೂಚಿಸಿದ್ದಾರೆ. ಹೀಗಾಗಿ ದಿನೇಶ್ ಇವತ್ತು ಹಾಜರಾಗುವ ಸಾಧ್ಯತೆಯಿದೆ.

ದೂರು ವಾಪಸು ಯಾವಾಗ ಅಂದ್ರೆ: ಅಶ್ಲೀಲ ಸಿಡಿ ಪ್ರಕರಣಕ್ಕೆ ಬೆಳಗಾವಿ ಸಾಹುಕಾರ್ ರಮೇಶ ಜಾರಕಿಹೊಳಿ ನಿನ್ನೆಯಷ್ಟೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ರಾಜಕೀಯಕ್ಕಿಂತಲೂ ಕುಟುಂಬದ ಗೌರವ ಮುಖ್ಯ. ನನ್ನ ಸಹೋದರ ಬಳಿ ಚರ್ಚಿಸಿ ಉನ್ನತ ಮಟ್ಟದ ತನಿಖೆಗೆ ಒಳಪಡಿಸುತ್ತೇನೆ ಎನ್ನುವ ಮೂಲಕ ತನಿಖೆಯ ಸುಳಿವು ಕೊಟ್ಟಿದ್ದರು. ಒಂದು ವೇಳೆ ರಮೇಶ್ ಜಾರಕಿ ಹೊಳಿ ಮನವಿ ಮೇರೆಗೆ ಈ ಪ್ರಕರಣವನ್ನು ವಿಶೇಷ ತನಿಖಾ ಸಂಸ್ಥೆಗೆ ವಹಿಸಿದರೆ, ಅಲ್ಲಿ ತನಿಖೆ ಆರಂಭವಾದರೆ ದಿನೇಶ್ ಕಲ್ಲಹಳ್ಳಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ನೀಡಿರುವ ದೂರು ವಾಪಸು ಪಡೆಯಬಹುದು. ಯಾಕೆಂದರೆ ರಮೇಶ್ ಜಾರಕಿಹೊಳಿ ದೂರಿನ ಮೇರೆಗೆ ತನಿಖೆ ಆರಂಭವಾದರೆ, ಈ ದೂರಿನ ಅಗತ್ಯವಿಲ್ಲ. ಈ ಎಲ್ಲಾ ಬೆಳವಣಿಗೆ ನೋಡಿದರೆ, ಈ ಪ್ರಕರಣವನ್ನು ಸರ್ಕಾರ ತನಿಖೆಗೆ ವಹಿಸಿದ ನಂತರ ದಿನೇಶ್ ಕಲ್ಲಹಳ್ಳಿ ದೂರು ವಾಪಸು ಪಡೆಯಲು ಅವಕಾಶ ಸಿಗಬಹುದು ಎನ್ನತ್ತಾರೆ ಕಾನೂನು ತಜ್ಞರು.












Click it and Unblock the Notifications