ದೇವನಹಳ್ಳಿ; ಅಕ್ರಮ ಗ್ರಾನೈಟ್ ಫ್ಯಾಕ್ಟರಿಗಳಿಗೆ ಕಡಿವಾಣ ಯಾವಾಗ?
ಬೆಂಗಳೂರು, ಮಾರ್ಚ್ 07; ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇರುವ ದೇವನಹಳ್ಳಿ ತಾಲೂಕಿನಾದ್ಯಂತ ಅನಧಿಕೃತ ಗ್ರಾನೈಟ್ ಫ್ಯಾಕ್ಟರಿಗಳ ಹಾವಳಿ ಹೆಚ್ಚಾಗಿದೆ. ತಾಲೂಕಿನ ಕುಂದಾಣ ಹೋಬಳಿಯೊಂದರಲ್ಲೇ ನೂರಕ್ಕೂ ಹೆಚ್ಚು ಅಕ್ರಮ ಫ್ಯಾಕ್ಟರಿಗಳು ತಲೆಯೆತ್ತಿವೆ.
ಇನ್ನು ಅಕ್ರಮ ಫ್ಯಾಕ್ಟರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಂಬಂಧವೇ ಇಲ್ಲವೆಂಬಂತೆ ಸುಮ್ಮನಾಗಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ದೇವನಹಳ್ಳಿ ತಾಲೂಕಿನಲ್ಲಿ ಅಕ್ರಮವಾಗಿ ತಲೆಯೆತ್ತಿರುವ ನೂರಾರು ಗ್ರಾನೈಟ್ ಫ್ಯಾಕ್ಟರಿಗಳ ವಿರುದ್ದ ಹಲವು ಮಾಧ್ಯಮಗಳು ಸಾಕಷ್ಟು ಬಾರಿ ವರದಿ ಮಾಡಿವೆ.
ವರದಿ ಮಾಡಿದಾಗ ಮಾತ್ರ ಎಚ್ಚೆತ್ತುಕೊಳ್ಳುವ ತಾಲೂಕು ಆಡಳಿತ ಮತ್ತು ಸಂಬಂಧಪಟ್ಟ ಗ್ರಾಮ ಪಂಚಾಯಿತಿಯವರು ಫ್ಯಾಕ್ಟರಿಗಳಿಗೆ ನೋಟಿಸ್ ನೀಡಿ ಸುಮ್ಮನಾಗುತ್ತಾರೆ. ಆದರೆ ಈ ನೋಟಿಸ್ಗೆ ತಲೆಕೆಡಿಸಿಕೊಳ್ಳದ ಮಾಲೀಕರು ಸ್ವಲ್ಪ ದಿನ ಸಮಯಾವಕಾಶ ಕೇಳಿ ಮತ್ತೆ ಫ್ಯಾಕ್ಟರಿಗಳನ್ನು ರಾಜಾರೋಷವಾಗಿ ನಡೆಸುತ್ತಿದ್ದಾರೆ.

ಅನುಮತಿಯನ್ನೇ ಪಡೆದಿಲ್ಲ; ಗ್ರಾಮ ಪಂಚಾಯಿತಿ ಅಥವಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಫ್ಯಾಕ್ಟರಿಗಳನ್ನು ನಡೆಸಬೇಕಾದರೆ ಸಂಬಂಧಪಟ್ಟವರಿಂದ ಅನುಮತಿ ಪತ್ರ ಪಡೆಯಬೇಕು. ಆದರೆ, ದೇವನಹಳ್ಳಿ ತಾಲೂಕಿನಲ್ಲಿ ನಡೆಯುತ್ತಿರುವ ಗ್ರಾನೈಟ್ ಫ್ಯಾಕ್ಟರಿಗಳು ಯಾವುದೇ ರೀತಿಯ ಅನುಮತಿ ಪಡೆದಿಲ್ಲ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಾಜಾರೋಷವಾಗಿ ಹಗಲು ರಾತ್ರಿ ಗಣಿಗಾರಿಕೆ ನಡೆಯುತ್ತಿದೆ.
ಯಾವುದೇ ಒಂದು ಸಣ್ಣ ಗುಡಿಸಲಿಗಾಗಲಿ ಅಥವಾ ಸಣ್ಣ ಕಿರಾಣಿ ಅಂಗಡಿಗೆ ವಿದ್ಯುತ್ ಸಂಪರ್ಕ ನೀಡಬೇಕು ಎಂದಾದರೆ ಹತ್ತಾರು ದಾಖಲೆಗಳನ್ನು ಕೇಳುವ ಬೆಸ್ಕಾಂ ಇಲ್ಲಿ ನಿಯಮಗಳನ್ನು ಗಾಳಿಗೆ ತೂರಿದೆ. ಯಾವುದೇ ನಿಯಮಗಳನ್ನು ಅನುಸರಿಸದೇ ಫ್ಯಾಕ್ಟರಿಗಳಿಗೆ ನಿಯಮಬಾಹಿರವಾಗಿ ವಿದ್ಯುತ್ ಸಂಪರ್ಕ ನೀಡಿದೆ. ಈ ಅಕ್ರಮದ ಬಗ್ಗೆ ಪ್ರಶ್ನಿಸಿದರೆ ನೆಪ ಮಾತ್ರಕ್ಕೆ ಒಂದೆರಡು ಫ್ಯಾಕ್ಟರಿಗಳ ಸಂಪರ್ಕ ಕಡಿತಗೊಳಿಸುತ್ತಾರೆ.

ಕೃಷಿಗೆ ಹಾನಿಕಾರಕ; ಒಂದು ಕಡೆ ಈ ಅಕ್ರಮ ಗ್ರಾನೈಟ್ ಫ್ಯಾಕ್ಟರಿಗಳಿಂದ ಸರ್ಕಾರದ ಬೊಕ್ಕಸಕ್ಕೆ ಸಾಕಷ್ಟು ನಷ್ಟವಾಗುತ್ತಿದೆ. ಮತ್ತೊಂದೆಡೆ ಧೂಳಿನಿಂದ ಕೃಷಿಗೆ ಮತ್ತು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ರೈತರು ಬೆಳೆದ ಬೆಳೆಗಳ ಮೇಲೆ ಕಲ್ಲಿನ ಧೂಳು ಬೀಳುತ್ತಿದ್ದು, ಬೆಳೆಗಳು ಸರಿಯಾದ ಫಸಲು ನೀಡದೆ ರೈತರು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಇನ್ನು ಇಂತಹ ಧೂಳು ಮಿಶ್ರಿತ ಗಾಳಿಯಿಂದ ಜನರು ಶ್ವಾಸಕೋಶದ ತೊಂದರೆಗೆ ಸಹ ಸಿಲುಕುತ್ತಿದ್ದಾರೆ.
ಕೃಷಿ ಜಮೀನಿನಲ್ಲಿ ಯಾವುದೇ ಒಂದು ಫ್ಯಾಕ್ಟರಿ ನಿರ್ಮಿಸಬೇಕಾದರೆ ಸರ್ಕಾರ ನೀಡುವ ಒಂದಷ್ಟು ಮಾರ್ಗಸೂಚಿಗಳನ್ನು ಅನುಸರಿಸಬೇಕಾಗುತ್ತದೆ. ಕೃಷಿ ಜಮೀನನ್ನು ವ್ಯವಸಾಯೇತರ ಉದ್ದೇಶಕ್ಕೆ ಬಳಸಬಹುದಾಗಿ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯಬೇಕಾಗುತ್ತದೆ. ಆದರೆ, ದೇವನಹಳ್ಳಿ ತಾಲೂಕಿನಲ್ಲಿ ತಲೆಯೆತ್ತಿರುವ ಫ್ಯಾಕ್ಟರಿಗಳು ಇಂತಹ ಯಾವುದೇ ನೀತಿ ನಿಯಮಗಳನ್ನು ಅನುಸರಿಸುತ್ತಿಲ್ಲ. ಕಾರಣ ಇಂತಹ ಗ್ರಾನೈಟ್ ಫ್ಯಾಕ್ಟರಿಗಳ ವಿರುದ್ದ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕಾಗಿದೆ.
ತಹಸೀಲ್ದಾರ್ ಹೇಳಿಕೆ; ದೇವನಹಳ್ಳಿ ತಹಶೀಲ್ದಾರ್ ಶಿವರಾಜ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, "ಅನಧಿಕೃತ ಗ್ರಾನೈಟ್ ಫ್ಯಾಕ್ಟರಿಗಳ ಕುರಿತು ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಾಧಿಕಾರಿಗಳ ಸಭೆ ಕರೆದು ಮಾಹಿತಿ ನೀಡಲು ಹೇಳಿದ್ದೇನೆ. ಹೊಸದಾಗಿ ತಾಲೂಕಿಗೆ ದಂಡಾಧಿಕಾರಿಯಾಗಿ ನೇಮಕವಾಗಿರುವ ಕಾರಣ ಸಾಕಷ್ಟು ಕೆಲಸಗಳ ಒತ್ತಡದಲ್ಲಿ ಇತ್ತ ಗಮನ ಹರಿಸಲು ಸಾಧ್ಯವಾಗಲಿಲ್ಲ. ಇಂತಹ ಫ್ಯಾಕ್ಟರಿಗಳಿಗೆ ನೋಟಿಸ್ ನೀಡಿ ಅವರ ಬಳಿಯಿರುವ ದಾಖಲೆಗಳನ್ನು ಪರಿಶೀಲನೆ ಮಾಡಿ ತದನಂತರ ಕ್ರಮ ಕೈಗೊಳ್ಳುತ್ತೇನೆ" ಎಂದು ಹೇಳಿದ್ದಾರೆ.











Click it and Unblock the Notifications