ಆಸಿಡ್ ನಾಗನ ಬಲೆಗೆ ಪೊಲೀಸರ ಮಾರು ವೇಷದ ಕಾರ್ಯಾಚರಣೆ ಸೀಕ್ರೇಟ್!
ಬೆಂಗಳೂರು, ಮೇ. 14: ಸುಂಕದಕಟ್ಟೆ ಬಳಿ ಮುದ್ದಾದ ಹುಡುಗಿ ಮುಖಕ್ಕೆ ಆಸಿಡ್ ಎಚರಿ ಎಸ್ಕೇಪ್ ಆಗಿದ್ದ ಆಸಿಡ್ ನಾಗನನ್ನು ತಮಿಳುನಾಡಿನ ತಿರುವಣ್ಣಾಮಲೈನ ಆಶ್ರಮದಲ್ಲಿ ಪೊಲೀಸರು ಪತ್ತೆ ಮಾಡಿದ್ದಾರೆ. ಸಿನಿಮಾ ಶೈಲಿಯಲ್ಲಿ ಪೊಲೀಸರು ಮಾರು ವೇಷದ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಕುರಿತ ಸಮಗ್ರ ವಿವರ ಇಲ್ಲಿದೆ ನೋಡಿ.
ತಿರುವಣ್ಣಾಮಲೈ ರಮಣ ಮಹರ್ಷಿ ಸೇರಿದಂತೆ ಅನೇಕ ಸಾಧು ಸಂತರ ನೂರಾರು ಆಶ್ರಮಗಳು ಇರುವ ತಾಣ. ದಕ್ಷಿಣ ಭಾರತದ ಅತಿದೊಡ್ಡ ಆಧ್ಯಾತ್ಮಿಕ ಕೇಂದ್ರ ತಿರುವಣ್ಣಾಮಲೈ. ಸಾವಿರಾರು ಮಂದಿ ನಿರಂತರ ಧ್ಯಾನದಲ್ಲಿ ಮುಳಗಿ ಅವರದ್ದೇ ಲೋಕದಲ್ಲಿ ಮುಳಗಿರುತ್ತಾರೆ. ಹೊರಗಿನ ಲೋಕದ ಬಗ್ಗೆ ಯಾರೂ ಅಷ್ಟು ತಲೆ ಕೆಡಿಸಿಕೊಳ್ಳುವುದಿಲ್ಲ.
ಆಸಿಡ್ ದಾಳಿ ಪ್ರಕರಣ: ಆರೋಪಿ ನಾಗೇಶ್ ಕಾಲಿಗೆ ಗುಂಡೇಟು
ಏ. 28 ರಂದು ಸುಂಕದಕಟ್ಟೆಯ ಬಳಿ ಮದುವೆಯಾಗುವಂತೆ ಪೀಡಿಸಿ ಯುವತಿ ಮುಖಕ್ಕೆ ಆಸಿಡ್ ಎರಚಿ ವಿಕೃತ ಮೆರೆದಿದ್ದ ನಾಗೇಶ್ ಅಲಿಯಾಸ್ ಆಸಿಡ್ ನಾಗ ಮರು ಕ್ಷಣ ನಾಪತ್ತೆಯಾಗಿದ್ದ. ಆಸಿಡ್ ದಾಳಿ ಮಾಡುವ ಮುನ್ನ ದಿನ ಕುಡಿದ ಅಮಲಿನಲ್ಲಿ ತನ್ನ ಸ್ನೇಹಿತರೊಂದಿಗೆ ನಾಳೆ ನಾನು ಟಿವಿಯಲ್ಲಿ ದೊಡ್ಡ ಸುದ್ದಿಯಾಗುತ್ತೀನಿ ಎಂದು ಸಹ ಹೇಳಿಕೊಂಡಿದ್ದ.
ಆಸಿಡ್ ದಾಳಿ ಮಾಡಿದ ನಾಗೇಶ್ ಮೊಬೈಲ್ ಬಳಸಿರಲಿಲ್ಲ. ಎಟಿಎಂ ಕಾರ್ಡ್ ಸಹ ತೆಗೆದುಕೊಂಡು ಹೋಗಿರಲಿಲ್ಲ. ಹೀಗಾಗಿ ಈತ ಎಟಿಎಂ ಕಾರ್ಡ್ ಬಳಸುವಾಗ ಸಿಕ್ಕಿ ಬೀಳುತ್ತಾನೆ ಎಂಬ ಪೊಲೀಸರ ನಂಬಿಕೆ ಬುಡಮೇಲಾಗಿತ್ತು. ಕೇವಲ ಕರ್ನಾಟಕ ಅಲ್ಲದೇ ನೆರೆ ರಾಜ್ಯಗಳಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ಹುಡುಕಾಡಿದರೂ ಆರೋಪಿ ಸುಳಿವು ಸಿಕ್ಕಿರಲಿಲ್ಲ.

ಪ್ರಕಟಣೆ ಕೊಟ್ಟ ಕ್ಲೂ
ಮೂಲತಃ ತಮಿಳುನಾಡಿನ ಕೋಡಂಪಟ್ಟಿ ಗ್ರಾಮದವನಾಗಿದ್ದ ನಾಗೇಶ್ ಮಾತೃಭಾಷೆ ತಮಿಳು. ಆಸಿಡ್ ದಾಳಿ ಮಾಡಿದ ಬಳಿಕ ತಿರುವಣ್ಣಾಮಲೈ ಸೇರಿದ್ದ. ಅಲ್ಲಿ ತಮಿಳು ಭಾಷೆಯಲ್ಲಿ ಮಾತನಾಡಿ ರಮಣರ್ ಆಶ್ರಮದ ಪರಮ ಭಕ್ತನಂತೆ ಬಿಂಬಿಸಿಕೊಂಡಿದ್ದ. ಅಲ್ಲಿಯೇ ಧ್ಯಾನ ಮಾಡುವ ಮೂಲಕ ಆಶ್ರಮದ ಗಮನ ಸೆಳೆದಿದ್ದ. ಆನಂತರ ಅಲ್ಲಿಯೇ ಅವನಿಗೆ ಆಶ್ರಯ ದೊರೆತಿತ್ತು. ಖಾವಿ ಬಟ್ಟೆ ತೊಟ್ಟು ಸ್ವಾಮೀಜಿಯಂತೆ ಬದಲಾಗಿ ಹೋಗಿದ್ದ. ಈತನಿಗಾಗಿ ಪೊಲೀಸರು ಬರೋಬ್ಬರಿ 15 ಸಾವಿರ ಲಾಡ್ಜ್ ತಲಾಷೆ ಮಾಡಿದ್ದರು.

ಮಾರುವೇಷದಲ್ಲಿ ಪೊಲೀಸರು
ರಮಣರ್ ಆಶ್ರಮದಲ್ಲಿದ್ದ ಆಸಿಡ್ ನಾಗೇಶ್ ಬಗ್ಗೆ ನೀಡಿದ್ದ ಲುಕ್ ಔಟ್ ನೋಟಿಸ್ ಪ್ರಕಟಣೆ ನೋಡಿ ಆಶ್ರಮದ ವ್ಯಕ್ತಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪ್ರಕಟಣೆಯಲ್ಲಿ ಇರುವ ವ್ಯಕ್ತಿ ರಮಣರ್ ಆಶ್ರಮದಲ್ಲಿ ಇರುವುದಾಗಿ ತಿಳಿಸಿದ್ದಾರೆ. ಈ ಮಾಹಿತಿ ಪಡೆದ ಪೊಲೀಸರು ಭಕ್ತರ ವೇಷ ಧರಿಸಿ ಪೊಲೀಸರು ಮಠಕ್ಕೆ ಕಾಲಿಟ್ಟಿದ್ದಾರೆ. ಆಸಿಡ್ ನಾಗ ಸ್ವಾಮೀಜಿ ವೇಷಧಲ್ಲಿ ಧ್ಯಾನಕ್ಕೆ ಕೂತಿದ್ದಾನೆ. ಆತನ ಅಕ್ಕ ಪಕ್ಕದಲ್ಲಿಯೇ ಮಾರುವೇಷದಲ್ಲಿದ್ದ ಪೊಲೀಸರು ಧ್ಯಾನಕ್ಕೆ ಕೂತಿದ್ದಾರೆ. ಈ ವೇಳೆ ಆಸಿಡ್ ನಾಗನ ಪೋಟೋ ತೆಗೆದು ಪೊಲೀಸರಿಗೆ ಕಳುಹಿಸಿ ಖಚಿತ ಪಡಿಸಿಕೊಂಡಿದ್ದಾರೆ. ಮಿಗಿಲಾಗಿ ನಾಗನ ಕೈಯಲ್ಲಿ ಆಸಿಡ್ ದಾಳಿ ಗಾಯ ಆಗಿರುವುದನ್ನು ಖಚಿತ ಪಡಿಸಿಕೊಂಡು ಸುತ್ತುವರೆದು ವಶಕ್ಕೆ ಪಡೆದಿದ್ದಾರೆ.
ಸ್ವಾಮೀಜಿ ವೇಷದಲ್ಲಿದ್ದ ನಾಗೇಶ್ ನನ್ನು ಪೊಲೀಸರು ಬಂಧಿಸಿದ ಬಳಿಕ ಅಲ್ಲಿ ಸ್ಥಳೀಯರು ಗಲಾಟೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಗುರುತಿನ ಚೀಟಿ ತೋರಿಸಿ ಪೊಲೀಸರು ಆಸಿಡ್ ನಾಗನ ವೃತ್ತಾಂತ ಹೇಳಿ ಎಳೆದು ತಂದಿದ್ದಾರೆ. ಪೊಲೀಸರ ಮಾರು ವೇಷದ ಕಾರ್ಯಾಚರಣೆಯಿಂದ ಆಸಿಡ್ ನಾಗ ಬಲೆಗೆ ಬಿದ್ದಿದ್ದಾನೆ.

ಕಾಲಿಗೆ ಗುಂಡೇಟು
ಬರುವ ದಾರಿಯಲ್ಲಿ ಮೂತ್ರ ವಿಸರ್ಜನೆ ಮಾಡುವ ನೆಪದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿ ಕಾಲಿಗೆ ಗುಂಡೇಟು ತಿಂದು ಇದೀಗ ಹಾಸಿಗೆಯಲ್ಲಿ ಮಲಗಿದ್ದಾನೆ. ಕೊನೆಗೂ ಆಸಿಡ್ ದಾಳಿಕೋರನನ್ನು ಬಂಧಿಸಿದ ಕಾಮಾಕ್ಷಿಪಾಳ್ಯ ಪೊಲೀಸರ ಕಾರ್ಯಶೈಲಿಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.

ಯುವತಿಯ ಆರೋಗ್ಯದಲ್ಲಿ ಚೇತರಿಕೆ
ಆಸಿಡ್ ದಾಳಿಗೆ ಒಳಗಾಗಿ ಚಿಕಿತ್ಸೆಗೆ ಒಳಗಾಗಿದ್ದ ಯುವತಿ ಇದೀಗ ಚೇತರಿಸಿಕೊಂಡಿದ್ದಾಳೆ. ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ವಾರ್ಡ್ ಗೆ ವರ್ಗಾವಣೆಯಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.