ಆರ್‌ಸಿಬಿ vs ಮುಂಬೈ ಬಿಗ್ ಫೈಟ್: ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಬಗ್ಗೆ ಮುಂಬೈ ಇಂಡಿಯನ್ಸ್ ಬಿಗ್ ಅಪ್ಡೇಟ್
RCB Vs MI IPL 2026: ರಾಯ್‌ಪುರದಲ್ಲಿ ಭಾನುವಾರ (ಮೇ 10) ನಡೆಯಲಿರುವ ಹೈವೋಲ್ಟೇಜ್ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೆ ಎಂಐ ಪರ ಹಾರ್ದಿಕ್ ಪಾಂಡ್ಯ ಕಮ್‌ಬ್ಯಾಕ್ ಮಾಡಲಿದ್ದಾರೆ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ಆರ್‌ಸಿಬಿ ಪ್ರಸ್ತುತ ಅಂಕಪಟ್ಟಿಯಲ್ಲಿ ಟಾಪ್ 4 ಸ್ಥಾನದಲ್ಲಿದ್ದು, ಪ್ಲೇ ಆಫ್‌ಗೆ ಪ್ರವೇಶಿಸಲು ಉತ್ತಮ ಅವಕಾಶ ಹೊಂದಿದೆ. ಮತ್ತೊಂದೆಡೆ ಪ್ಲೇ ಆಫ್ ರೇಸ್‌ನಲ್ಲಿ ಉಳಿಯಲು ಮುಂಬೈ ತಂಡ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಇನ್ನೂ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಕಳೆದ ಪಂದ್ಯದಲ್ಲಿ ಮುಂಬೈ ಪರ ನಾಯಕ ಹಾರ್ದಿಕ್ ಪಾಂಡ್ಯ ಹೊರಗುಳಿದಿದ್ದರು. ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಅವರು, ಆರ್‌ಸಿಬಿ ವಿರುದ್ಧದ ಈ ಪ್ರಮುಖ ಪಂದ್ಯಕ್ಕೂ ಲಭ್ಯರಿರುತ್ತಾರೆಯೇ ಎಂಬುದು ಇನ್ನೂ ಖಚಿತವಾಗಿಲ್ಲ.

ಹಾರ್ದಿಕ್ ಪಾಂಡ್ಯ ಬಗ್ಗೆ ಎಂಐ ಬಿಗ್ ಅಪ್ಡೇಟ್
ಪಂದ್ಯಕ್ಕೂ ಮುನ್ನ ತಂಡದ ಸ್ಥಿತಿಗತಿಯ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಎಂಐ, "ಹಾರ್ದಿಕ್ ಪಾಂಡ್ಯ ಅವರ ಆರೋಗ್ಯವನ್ನು ವೈದ್ಯಕೀಯ ತಂಡವು ನಿರಂತರವಾಗಿ ಪರಿಶೀಲಿಸುತ್ತಿದೆ. ಅವರ ಚೇತರಿಕೆಯ ಬಗ್ಗೆ ವೈದ್ಯರು ನೀಡುವ ಮಾಹಿತಿಯ ಆಧಾರದ ಮೇಲೆ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು. ಇನ್ನುಳಿದಂತೆ ಸೂರ್ಯಕುಮಾರ್ ಯಾದವ್ ಅವರು ತಂಡಕ್ಕೆ ಎಂಟ್ರಿ ಕೊಡಲಿದ್ಧಾರೆ," ಎಂದು ತಿಳಿಸಿದೆ. ಸೂರ್ಯಕುಮಾರ್ ಅವರ ಆಗಮನ ಮುಂಬೈ ತಂಡಕ್ಕೆ ಆನೆ ಬಲ ತಂದಂತಾಗಿದ್ದು, ಅವರೇ ಹಂಗಾಮಿ ನಾಯಕರಾಗಿ ಮುಂದುವರೆಯುವ ಸಾಧ್ಯತೆ ಹೆಚ್ಚಿದೆ.
ತಂಡ ಸೇರಿಕೊಳ್ಳಲಿರುವ ಸೂರ್ಯಕುಮಾರ್
ಕ್ರಿಕ್‌ಬಜ್ ವರದಿ ಪ್ರಕಾರ, ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್ ಅವರು ಬೆಂಗಳೂರು ವಿರುದ್ಧದ ಪಂದ್ಯಕ್ಕೆ ಲಭ್ಯರಿರಲಿದ್ದಾರೆ. ವಾರದ ಆರಂಭದಲ್ಲಿ ಅವರು ತಂಡದ ಜೊತೆ ರಾಯ್‌ಪುರಕ್ಕೆ ಪ್ರಯಾಣಿಸಿರಲಿಲ್ಲ ಅಷ್ಟೆ. ಸೂರ್ಯಕುಮಾರ್ ಯಾದವ್ ಮತ್ತು ಅವರ ಪತ್ನಿ ದೇವಿಶಾ ಶೆಟ್ಟಿ ಅವರು ಗುರುವಾರ ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದಾರೆ. ಈ ಸಂತಸದ ಸುದ್ದಿಯನ್ನು ಸೂರ್ಯಕುಮಾರ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, "ಹೊಸ ಕನಸುಗಳೊಂದಿಗೆ ನಮ್ಮ ಪುಟಾಣಿ ಹೆಣ್ಣು ಮಗುವನ್ನು ಸ್ವಾಗತಿಸುತ್ತಿದ್ದೇವೆ," ಎಂದು ಬರೆದುಕೊಂಡಿದ್ದರು.
ಸೂರ್ಯನ ಮನೆಗೆ ಮಹಾಲಕ್ಷ್ಮಿ ಆಗಮನ
ಭಾನುವಾರ ರಾಯ್‌ಪುರದಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯಕ್ಕಾಗಿ ಬುಧವಾರ ಮೊದಲ ಹಂತದಲ್ಲಿ ಪ್ರಯಾಣಿಸಿದ ಮುಂಬೈ ಇಂಡಿಯನ್ಸ್ ಆಟಗಾರರ ಜೊತೆ ಸೂರ್ಯಕುಮಾರ್ ಇರಲಿಲ್ಲ. ಮಗುವಿನ ಜನನದ ಕಾರಣ ಅವರು ಮುಂಬೈನಲ್ಲೇ ಉಳಿದುಕೊಂಡಿದ್ದರು. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಕಳೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅಲಭ್ಯತೆಯಿಂದಾಗಿ ಸೂರ್ಯಕುಮಾರ್ ಅವರೇ ಮುಂಬೈ ತಂಡವನ್ನು ಮುನ್ನಡೆಸಿದ್ದರು.
ಹೆಣ್ಣು ಮಗುವಿಗೆ ತಂದೆಯಾದ ಸೂರ್ಯ
ಇನ್ನು ತಂದೆಯಾದ ಸಂಭ್ರಮದಲ್ಲಿರುವ ಸೂರ್ಯಕುಮಾರ್ ಅವರಿಗೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಹಾಗೂ ಅವರ ಸಹ ಆಟಗಾರ ದೀಪಕ್ ಚಹರ್ ಸೇರಿದಂತೆ ಹಲವರು ಅಭಿನಂದನೆ ಸಲ್ಲಿಸಿದ್ದರು. ಕುಟುಂಬದ ಸಂಭ್ರಮದ ನಂತರ ಸೂರ್ಯಕುಮಾರ್ ಈಗ ಆರ್‌ಸಿಬಿ ವಿರುದ್ಧದ ಮಹತ್ವದ ಪಂದ್ಯಕ್ಕಾಗಿ ಮೈದಾನಕ್ಕೆ ಮರಳಲು ಸಜ್ಜಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಆರ್‌ಸಿಬಿ ನಾಯಕ ಪಾಟಿದಾರ್ ಹೇಳಿದ್ದೇನು?
ಛತ್ತೀಸ್‌ಗಢದ ಸ್ಥಳೀಯ ಆಹಾರ, ಸಂಗೀತ, ಕಲೆ ಮತ್ತು ಪರಂಪರೆಯನ್ನು ಪ್ರದರ್ಶಿಸುವ ಎಕ್ಸ್‌ಪೋದಲ್ಲಿ ಭಾಗವಹಿಸಿದ ಆರ್‌ಸಿಬಿ ತಂಡವು ಛತ್ತೀಸ್‌ಗಢ ರಾಜ್ಯದ ಜನಜೀವನ ಮತ್ತು ಪರಂಪರೆಯನ್ನು ಹತ್ತಿರದಿಂದ ಕಣ್ತುಂಬಿಕೊಂಡಿತು. ಐಪಿಎಲ್ 2026ರ ಮೊದಲ 5 ಹೋಮ್ ಪಂದ್ಯಗಳನ್ನು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿದ್ದ ಆರ್‌ಸಿಬಿ ತನ್ನ ಉಳಿದ ಎರಡು ಹೋಮ್ ಪಂದ್ಯಗಳನ್ನು ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಡಲಿದೆ.
ಇಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಅಲ್ಲಿನ ಅನುಭವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಸಾಂಪ್ರದಾಯಿಕ ಸಂಗೀತ, ಡೋಲು ಬಡಿತ ಮತ್ತು ನೃತ್ಯ ಪ್ರದರ್ಶನಗಳು ಸ್ಮರಣೀಯವಾಗಿದ್ದವು. ಅಲ್ಲದೆ ಈ ಭಾಗದ ಬುಡಕಟ್ಟು ಸಮುದಾಯಗಳು ಮತ್ತು ಅವರ ಇತಿಹಾಸದ ಬಗ್ಗೆ ತಿಳಿದುಕೊಂಡಿದ್ದು ತುಂಬಾ ಸಂತೋಷವಾಯಿತು," ಎಂದು ಹೇಳಿದ್ದಾರೆ.












Click it and Unblock the Notifications