ವಿವಾದಕ್ಕೆ ಕಾರಣವಾದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ "ಆಶೀರ್ವಾದ"
ಸರಳ, ಸಜ್ಜನ ಶ್ರೀಗಳು ಹಾಗೂ ಸಾವಿರಾರು ಮಕ್ಕಳ ಮೆಚ್ಚಿನ ಸ್ವಾಮೀಜಿ ಎಂದೇ ಖ್ಯಾತಿ ಗಳಿಸಿರುವ ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಅವರ "ಆಶೀರ್ವಾದ" ಇದೀಗ ವಿವಾದಕ್ಕೆ ಕಾರಣವಾಗಿದೆ.
ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿಗೆ ಲಕ್ಷಾಂತರ ಜನ ಭಕ್ತರಿದ್ದಾರೆ. ಅಲ್ಲದೇ ಸಾವಿರಾರು ಮಕ್ಕಳ ವಿದ್ಯಾಭ್ಯಾಸ ಹಾಗೂ ವಸತಿಗಾಗಿ ಶ್ರೀ ಅಭಿನವ ಸ್ವಾಮೀಜಿ ಅವರು ಶ್ರಮಿಸುತ್ತಿದ್ದಾರೆ. ಸ್ವಾಮೀಜಿ ಅವರು ಇಲ್ಲಿಯ ವರೆಗೆ ಯಾವುದೇ ವಿವಾದಗಳಲ್ಲಿ ಸಿಲುಕಿರಲಿಲ್ಲ. ಇದೀಗ ಸ್ವಾಮೀಜಿ ಅವರು ಭಕ್ತರೊಬ್ಬರಿಗೆ ಮಾಡಿರುವ ಆಶೀರ್ವಾದ ವಿವಾದದ ಸ್ವರೂಪವನ್ನು ಪಡೆದುಕೊಂಡಿದ್ದು, ಪರ - ವಿರೋಧ ಚರ್ಚೆಗೆ ಕಾರಣವಾಗಿದೆ.

ಭಕ್ತರೊಬ್ಬರಿಗೆ ಆಶೀರ್ವಾದ ನೀಡುವ ಸಂದರ್ಭದಲ್ಲಿ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಅವರು ತಮ್ಮ ಕಾಲುಗಳನ್ನು ಭಕ್ತರೊಬ್ಬರು ಹಣೆಗೆ ತಾಕಿಸಿಕೊಂಡು ನಮಸ್ಕರಿಸಲು ಅವಕಾಶ ನೀಡಿದ್ದಾರೆ.
ಈ ರೀತಿಯ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸರ್ಕಾರಿ ಶಾಲೆಯೊಂದರ ಮುಖ್ಯ ಶಿಕ್ಷಕರಾದ ವೀರಣ್ಣ ಗಣಾಚಾರಿ ಎನ್ನುವವರು, "ಮಕ್ಕಳೊಂದಿಗೆ ಮಗುವಾಗ್ತೀರಿ... ಹಿರಿಯರೊಂದಿಗೆ ಹೀಗೇಕೆ ಶ್ರೀಗಳೇ" ಎಂದು ಪ್ರಶ್ನಿಸಿದ್ದಾರೆ.
ಪರ - ವಿರೋಧ ಚರ್ಚೆ
ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಅವರ ಆಶೀರ್ವಾದದ ಚಿತ್ರ ಇದೀಗ ಪರ - ವಿರೋಧ ಚರ್ಚೆಗೆ ಕಾರಣವಾಗಿದೆ. ಸಂತೋಷ್ ಎನ್ನುವವರು ಬಹುಶ: ಇದು ಭಕ್ತರ ಅತಿರೇಖದ ಪರಮಾವಧಿ ಅನಿಸುತ್ತೆ. ಶ್ರೀಗಳ ಕಾಲುಗಳನ್ನೇ ಎಳೆದುಕೊಂಡು ಹಣೆಗೆ ಮುಟ್ಟಿಸಿಕೊಳ್ಳುತ್ತಿರುವಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ವೀರಣ್ಣ ಅವರು, ಕಾಲುಕೊಟ್ಟ ಶ್ರೀಗಳು ಪ್ರಜ್ಞೆಯಲ್ಲಿರಲಿಲ್ಲ ಎಂದುಕೊಳ್ಳೋಣವೇ ಗೆಳೆಯಾ ಎಂದು ಪ್ರಶ್ನಿಸಿದ್ದಾರೆ. ಇದು ಶ್ರೀಗಳಿಗೂ ಅನಿರೀಕ್ಷಿತವಾಗಿರಬಹುದು ಎಂದು ಕೆಲವರು ಸ್ವಾಮೀಜಿ ಅವರನ್ನು ಸಮರ್ಥನೆ ಮಾಡಿಕೊಂಡರೆ ಇನ್ನೂ ಕೆಲವರು ನಾವು ಇನ್ನೂ ಯಾವ ಶತಮಾನದಲ್ಲಿ ಇದ್ದೇವೆ ಎನ್ನುವುದೇ ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ.
ನಮ್ಮಲ್ಲಿ ಬಸವಣ್ಣನವರ ಅನುಯಾಯಿಗಳೇ ಭಕ್ತರಿಂದ ಪಾದ ಪೂಜೆಯನ್ನು ಮಾಡಿಸಿಕೊಂಡಿರುವ ಉದಾಹರಣೆಗಳು ನಮ್ಮ ನಾಡಿನಲ್ಲಿ ಇಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
ದೇವೇಂದ್ರ ಎನ್ನುವವರು ಭಕ್ತರ ಮನಸ್ಥಿತಿಯೇ ಅಂತದ್ದು.. ಸಂಪೂರ್ಣ ಶರಣಾಗತಿಯೇ ಭಕ್ತಿಯ ಅಂತಿಮ ಕಸರತ್ತು ಎಂದು ಹೇಳಿದ್ದಾರೆ. ಇದಕ್ಕೆ ಗುರುವಿನ ಮನಸ್ಥಿತಿ ಎಂಥದ್ದು ಎನ್ನುವ ಪ್ರಶ್ನೆ ಎದುರಾಗಿದೆ.
ಇದು ಸಹ ಶೋಷಣೆಯೇ
ಗವಿಸಿದ್ಧೇಶ್ವರ ಸ್ವಾಮೀಜಿ ಅವರ ಆಶೀರ್ವಾದವೂ ಸಹ ಶೋಷಣೆಯ ಸಂಕೇತವೇ ಎಂದು ಕೆಲವು ನೆಟ್ಟಿಗರು ಈ ಚಿತ್ರಕ್ಕೆ ಪ್ರತಿಕ್ರಿಯಿಸಿದ್ದಾರೆ. ಉದ್ದುದ್ದ ಹೇಳಿಕೆ ನೀಡುವುದಕ್ಕೂ ಪ್ರಾಯೋಗಿಕವಾಗಿ ನಡೆದುಕೊಳ್ಳುವುದಕ್ಕೂ ತುಂಬಾ ಅಂತರವಿದೆ ಎಂದು ವಿದ್ಯಾ ಎನ್ನುವವರು ಪ್ರತಿಕ್ರಿಯಿಸಿದ್ದಾರೆ.
ಶ್ರೀಗಳು ಮಾಡಿರುವ ನೂರು ಒಳ್ಳೆಯ ಕೆಲಸಗಳ ಬಗ್ಗೆ ಯಾರೊಬ್ಬರೂ ಮಾತನಾಡುವುದಿಲ್ಲ. ಅವರು ಮಾಡದೆ ಇರುವ ಈ ಕೆಲಸ ಎಲ್ಲರ ಕಣ್ಣಿಗೆ ಕಾಣುತ್ತೆ. ಶ್ರೀಗಳು ಎಂದೂ ಸಹ ನನ್ನ ಕಾಲಿಗೆ ಬಿದ್ದು ನಮಸ್ಕಾರ ತೆಗೆದುಕೊಳ್ಳಿ ಎಂದು ಹೇಳಲ್ಲ. ಭಕ್ತರು ತಾವಾಗೇ ಹೋಗಿ ನಮಸ್ಕಾರ ತೆಗೆದುಕೊಳ್ಳಿ ಎಂದು ಹೇಳಿಲ್ಲ. ಭಕ್ತರೇ ತಾವಾಗಿ ಹೋಗಿ ನಮಸ್ಕಾರ ತೆಗೆದುಕೊಂಡರೆ ಅದರಲ್ಲಿ ಸ್ವಾಮೀಜಿ ಅವರ ತಪ್ಪೇನಿದೆ ಎಂದು ಕಪ್ಪತ್ತಾ ಎನ್ನುವವರು ಕಾಮೆಂಟ್ ಮಾಡಿದ್ದಾರೆ.
ಅನುಭವ ಮಂಟಪ ಸಮಾನತೆಯ ಸಂಕೇತ ಎಂದಿದ್ದ ಶ್ರೀಗಳು
12ನೇ ಶತಮಾನದ ಅನುಭವ ಮಂಟಪ ಪರಿಕಲ್ಪನೆಯು ಸಮಾನತೆಯ ಸಂಕೇತ. ಇದು ವಿಶ್ವದ ಮೊದಲ ಸಂವಿಧಾನ ಎಂದು ಈ ಹಿಂದೆ ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಅವರು ಹೇಳಿದ್ದರು. ಕರ್ನಾಟಕದ ಇತಿಹಾಸದಲ್ಲಿ 12ನೇ ಶತಮಾನಕ್ಕೆ ಮಹತ್ವದ ಸ್ಥಾನವಿದೆ. ಕಲ್ಯಾಣ ಮಾರ್ಗವಾಗಿ ದೂರ ದೃಷ್ಟಿಯ ಹಾಗೂ ಸಮ ಸಮಾಜದ ನಿರ್ಮಾಣದ ಉದ್ದೇಶವನ್ನು ಅನುಭವ ಮಂಟಪ ಹೊಂದಿತ್ತು ಎಂದು ಶ್ರೀಗಳು ಈ ಹಿಂದೆ ತಮ್ಮ ಭಾಷಣದಲ್ಲಿ ಹೇಳಿದ್ದರು.
ಶ್ರೀಗಳ ವಚನವು ಸಾಕಷ್ಟು ಮೆಚ್ಚುಗೆಗೂ ಪಾತ್ರವಾಗುತ್ತಿರುತ್ತವೆ. ಆದರೆ, ಸ್ವಾಮೀಜಿಗಳ ಆಶೀರ್ವಾದದ ಚಿತ್ರವು ಕೆಲವು ಭಕ್ತರಲ್ಲಿ ಅಸಮಾಧಾನವನ್ನು ಮೂಡಿಸಿದೆ.












Click it and Unblock the Notifications