Ration Card: ಪರಾಮರ್ಶಿಸದೇ ಅವೈಜ್ಞಾನಿಕವಾಗಿ ಲಕ್ಕಿ ಡಿಪ್ ರೀತಿ BPL ಕಾರ್ಡ್ ರದ್ದು: ಎಎಪಿ
ಬೆಂಗಳೂರು, ನವೆಂಬರ್ 18: ಕರ್ನಾಟಕ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಇತ್ತೀಚೆಗೆ ಒಂದ ಹಿಂದೊಂದರಂತೆ ವಿಷಯಗಳು ಮುನ್ನೆಲೆಗೆ ಬಂದು ಸದ್ದು ಮಾಡುತ್ತಿವೆ. ಇದರಿಂದ ವಿಪಕ್ಷಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಯತ್ನ ಮಾಡತ್ತಿದ್ದಾರೆ. ಇದೀಗ ಬಿಪಿಎಲ್ ಕಾರ್ಡ್ ರದ್ದು ವಿಚಾರ ಖಂಡಿಸಿರುವ ಆಮ್ ಆದ್ಮಿ ಪಕ್ಷ ಸರ್ಕಾರದ ಮೇಲೆ ಗಂಭಿರ ಆರೋಪ ಮಾಡಿದೆ. ಸರ್ಕಾರ ಕಾರ್ಡ್ ರದ್ದು ನಿರ್ಧಾರವನ್ನು ಮರುಪರಿಶೀಸುವಂತೆ ಒತ್ತಾಯಿಸಿದೆ.
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸಾಧ್ಯವಾಗದೆ ಫಲಾನುಭವಿಗಳನ್ನೇ ಕಡಿಮೆ ಮಾಡಲು, ಕಾಂಗ್ರೆಸ್ ಸರ್ಕಾರ ಸುಮಾರು 11 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಲು ಮುಂದಾಗಿದೆ. ಇದು ಸ್ವಾಗತಾರ್ಹವಲ್ಲ. ಯಾವುದೇ ಪರಿಶೀಲನೆ ನಡೆಸದೆ ಅವೈಜ್ಞಾನಿಕವಾಗಿ ಬಿಪಿಎಲ್ ಕಾರ್ಡ್ ರದ್ದು ಮಾಡಬಾರದು. ಒಂದು ವೇಳೆ ರದ್ದು ಮಾಡಿದಲ್ಲಿ ಬಡವರು, ರೈತರು, ವಿಧವೆಯರು ಸೇರಿದಂತೆ ಅಶಕ್ತರು ತೊಂದರೆಗೆ ಒಳಗಾಗುತ್ತಾರೆ ಎಂದು ಎಎಪಿ ನಾಯಕ, ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ ಹೇಳಿದರು.

ಪಡಿತರ ಕಾರ್ಡ್ ರದ್ದು ಅವೈಜ್ಞಾನಿಕ ಎಂದ ಎಎಪಿ
ರಾಜ್ಯದಲ್ಲಿ 1.47 ಕುಟುಂಬಗಳ ಬಳಿ ರೇಷನ್ ಕಾರ್ಡ್ ಇದೆ. ಅದರಲ್ಲಿ 1.13 ಕೋಟಿ ಕುಟುಂಬಗಳ ಬಳಿ ಬಿಪಿಎಲ್ ಕಾರ್ಡ್ ಇದೆ ಎಂದು ನೀತಿ ಆಯೋಗ ಹೇಳಿದೆ. ದೆಹಲಿಯಲ್ಲಿ ನಾವು ಕೊಟ್ಟ ಯೋಜನೆಗಳನ್ನು ಕದ್ದು ಅದನ್ನು ವೈಜ್ಞಾನಿಕವಾಗಿ ಪರಾಮರ್ಶೆ ಮಾಡದೆ, ಅಲ್ಲಿ ಯಾವ ರೀತಿ ಪಾರದರ್ಶಕ ಆಡಳಿತ ನಡೆಸಲಾಗುತ್ತಿದೆ ಎನ್ನುವುದನ್ನು ಚರ್ಚೆ ಮಾಡದೆ ಕಾಂಗ್ರೆಸ್ ಏಕಾಏಕಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿರುವುದ ಸಮಸ್ಯೆಗೆ ಮೂಲ ಕಾರಣ ಎಂದು ದೂರಿದರು.
2023 ಸೆಪ್ಟೆಂಬರ್ 2 ರಂದು 25,13,798 ಎಪಿಎಲ್ ಕಾರ್ಡುಗಳಿದ್ದವು. ಈ ವರ್ಷ ನವೆಂಬರ್ 16ರ ವೇಳೆಗೆ 25,62,566 ಕಾರ್ಡುಗಳಿಗೆ ಏರಿಕೆಯಾಗಿವೆ ಎಂದು ಆಹಾರ ಇಲಾಖೆ ಮಾಹಿತಿ ನೀಡಿದೆ. ಬಿಪಿಎಲ್ ಕಾರ್ಡುಗಳನ್ನು ರದ್ದುಗೊಳಿಸಿದ್ದರಿಂದ ಹಾಗೂ ಬಿಪಿಎಲ್ ಕಾರ್ಡುಗಳನ್ನು ಎಪಿಎಲ್ ಕಾರ್ಡುಗಳಾಗಿ ಪರಿವರ್ತಿಸಿದ್ದರಿಂದ ಎಪಿಎಲ್ ಕಾರ್ಡ್‌ಗಳ ಸಂಖ್ಯೆ ಕೂಡ 48,768 ಹೆಚ್ಚಾಗಿದೆ ಎಂದು ಅವರು ವಿವರಿಸಿದರು.
ಗ್ಯಾರಂಟಿ ಯೋಜನೆ ಜಾರಿ ವರ್ಷಕ್ಕೆ 54 ಸಾವಿರ ಕೋಟಿ ಖರ್ಚಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಇಷ್ಟೊಂದು ಹಣ ಹೊಂದಿಸಲು ಸಾಧ್ಯವಾಗದೆ ಸರ್ಕಾರ ಬಿಪಿಎಲ್ ಕಾರ್ಡ್ ಸಂಖ್ಯೆ ಕಡಿಮೆ ಮಾಡಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದು ಏಕಾಏಕಿ 11 ಲಕ್ಷ ಕಾರ್ಡ್‌ಗಳನ್ನು ರದ್ದು ಮಾಡಲು ಮುಂದಾಗಿದೆ ಎಂದು ಹೇಳಿದರು.

ಪರಿಶೀಲಿಸದೇ ಕಾರ್ಡ್‌ಗಳು ರದ್ದು
ಮಾಹಿತಿ ಪ್ರಕಾರ ಯಾವುದೇ ಅಧಿಕಾರಿಗಳು ಮನೆಗಳಿಗೆ ಹೋಗಿ ಪರಿಶೀಲನೆ ಮಾಡಿಲ್ಲ. ಕೂತಲ್ಲೇ ಸಿಕ್ಕ ಸಿಕ್ಕ ಹೆಸರುಗಳನ್ನು ಪಟ್ಟಿಯಿಂದ ಕೈಬಿಡುತ್ತಿದ್ದಾರೆ. ಅನರ್ಹರು ಯಾರು ಎನ್ನುವುದನ್ನು ಮನೆಗೆ ಹೋಗಿ ಪರಿಶೀಲನೆ ಮಾಡಿಲ್ಲ, ದುಡ್ಡು ಕೊಟ್ಟವರಿಗೆ ರೇಷನ್ ಕಾರ್ಡ್ ಮಾಡಿಕೊಡಲಾಗಿದೆ. 11 ಲಕ್ಷದಲ್ಲಿ 200 ರೇಷನ್ ಕಾರ್ಡ್‌ಗಳು ಸರ್ಕಾರಿ ನೌಕರರದ್ದಾಗಿದೆ, ಆದರೆ ನಮಗಿರುವ ಮಾಹಿತಿ ಪ್ರಕಾರ ಪ್ರತಿಯೊಂದು ಜಿಲ್ಲೆಗಳಲ್ಲಿ ಸಾವಿರಾರು ಸರ್ಕಾರಿ, ಅರೆ ನೌಕರರು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ, ಅವರನ್ನು ಪಟ್ಟಿಯಿಂದ ಕೈಬಿಟ್ಟಿಲ್ಲ ಎಂದು ಹೇಳಿದರು.
ಈಗ ರದ್ದು ಮಾಡಿರುವ ಕಾರ್ಡ್‌ಗಳಲ್ಲಿ ಮಹಿಳೆಯರು, ರೈತರು, ವಿಕಲಾಂಗರು, ವಿಧವೆಯರ ರೇಷನ್ ಕಾರ್ಡ್‌ಗಳು ಹೆಚ್ಚಾಗಿವೆ. ಕಾರ್ಡ್ ರದ್ದಾದ ಬಳಿಕ ಮಹಿಳೆಯರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ ಅವರ ಕೂಗು ಸರ್ಕಾರಕ್ಕೆ ಯಾಕೆ ಕೇಳಿಸುತ್ತಿಲ್ಲ ಎಂದು ಪ್ರಶ್ನೆ ಮಾಡಿದರು.
ಸಿಎಂಗೆ ರಾಜಕೀಯವೇ ಮುಖ್ಯವಾಗಿದೆಯಾ?
ನಿಮ್ಮ ರಾಜಕೀಯ ಸಮಸ್ಯೆಗಳು, ಉಪಚುನಾವಣೆಯೇ ಸಿಎಂ ಸಿದ್ದರಾಮಯ್ಯನವರಿಗೆ ಮುಖ್ಯವಾಗಿದೆಯಾ? ವಿಧವೆಯರು, ವಿಕಲಾಂಗರು, ರೈತರು ಮಾಡುತ್ತಿರುವ ಪ್ರತಿಭಟನೆ ನಿಮ್ಮ ಕಣ್ಣಿಗೆ ಕಾಣಿಸುತ್ತಿಲ್ಲವಾ? ನಿಮಗೆ ಗ್ಯಾರಂಟಿಗಳನ್ನು ಕೊಡಲು ಸಾಧ್ಯವಾಗದಿದ್ದರೆ, ನಮಗೆ ಗ್ಯಾರಂಟಿ ಯೋಜನೆ ಮುಂದುವರೆಸಲು ಯೋಗ್ಯತೆ ಇಲ್ಲ ಎಂದು ಜನರ ಕ್ಷಮೆ ಕೇಳಿ, ಇಲ್ಲ ದೆಹಲಿಗೆ ಬಂದು ಆಮ್ ಆದ್ಮಿ ಪಕ್ಷ ಯಾವ ರೀತಿ ಗ್ಯಾರಂಟಿ ಕೊಟ್ಟು, ಲಾಭದಾಯಕ ಬಜೆಟ್ ನೀಡಿದೆ ಎನ್ನುವುದನ್ನು ತಿಳಿದುಕೊಳ್ಳಿ ಎಂದರು.
ರದ್ದು ಆದೇಶ ಮರುಪರಿಶೀಲಿಸಿ: ಎಎಪಿ ಗರಂ
ಸರ್ಕಾರಕ್ಕೆ ಜನ ಬಗ್ಗೆ ಕಾಳಜಿ ಇದ್ದರೆ, 11 ಲಕ್ಷ ಬಿಪಿಎಲ್ ಕಾರ್ಡ್ ರದ್ದು ಮಾಡಿರುವ ಆದೇಶವನ್ನು ಮರುಪರಿಶೀಲನೆ ಮಾಡಲಿ. ಬಿಪಿಎಲ್ ಕಾರ್ಡ್ ಹೊಂದಿರುವ ಸರ್ಕಾರಿ ನೌಕರರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಿ, ಜಮೀನ್ದಾರರು, ನಿಜವಾದ ಶ್ರೀಮಂತರ ಕಾರ್ಡ್‌ಗಳನ್ನು ರದ್ದು ಮಾಡಿ ಎಂದು ಆಗ್ರಹಿಸಿದರು. ಬೆಂಗಳೂರಿನಲ್ಲಿ ಲಕ್ಷಾಂತರ ರೂಪಾಯಿ ಪಡೆಯುವ ಭೂಮಾಲೀಕರನ್ನು ಪತ್ತೆ ಹಚ್ಚಿ ಅವರ ಕಾರ್ಡ್ ರದ್ದು ಮಾಡಿ ಎಂದರು.
ಲಕ್ಕಿ ಡಿಪ್ ಮಾಡುವ ರೀತಿ ಸಿಕ್ಕ ಸಿಕ್ಕವರ ರೇಷನ್ ಕಾರ್ಡ್ ರದ್ದು ಮಾಡಲಾಗಿದೆ. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ವೈಜ್ಞಾನಿಕವಾಗಿ ಪರಿಶೀಲನೆ ಮಾಡಿ, ಯಾರು ನಿಜವಾಗಿ ಅನರ್ಹರಿದ್ದಾರೆ, ಸರ್ಕಾರಿ ನೌಕರರು ಅಕ್ರಮವಾಗಿ ತೆಗೆದುಕೊಂಡಿರು ರೇಷನ್ ಕಾರ್ಡ್‌ಗಳನ್ನು ರದ್ದು ಮಾಡಿ ಎಂದು ಎಎಪಿ ಮತ್ತೋರ್ವ ನಾಯಕ ದರ್ಶನ್ ಜೈನ್ ಆಗ್ರಹಿಸಿದರು.












Click it and Unblock the Notifications