ಚಾಲೆಂಜ್ ಕಟ್ಟಿ ಹಚ್ಚಿದ ಪಟಾಕಿ ಮೇಲೆ ಕೂತ, ಹಿಂಬದಿ ಛಿದ್ರವಾಗಿ ಮಸಣ ಸೇರಿದ..!
ಮೊನ್ನೆಯಷ್ಟೇ ಬೆಳಕಿನ ಹಬ್ಬ ದೀಪಾವಳಿ ವಿಜೃಂಭಣೆಯಿಂದ ನೆರವೇರಿದೆ. ಆದರೆ, ಹಲವರ ಬದುಕನ್ನು ಈ ದೀಪಾವಳಿ ಕತ್ತಲಿಗೆ ದೂಡಿದೆ. ಹಬ್ಬಕ್ಕೆ ಮೆರುಗು ತರುವ ಪಟಾಕಿ ಹಲವು ಮನೆಗಳಿಗೆ ಶೋಕ ತಂದಿದೆ. ಬೆಂಗಳೂರಿನಲ್ಲೊಬ್ಬ ಪಟಾಕಿ ಜೊತೆಗೆ ಭಂಡತನ ತೋರಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರುವ ಹೃದಯವಿದ್ರಾವಕ ಘಟನೆ ವರದಿಯಾಗಿದೆ.
ಸ್ನೇಹಿತರು ಹಚ್ಚಿದ ಪಟಾಕಿ ಮೇಲೆ ಕುಳಿತರೆ ನಿನಗೆ ಆಟೋ ಕೊಡಿಸುವುದಾಗಿ ಒಪ್ಪಿದ್ದರು. ಆಟೋ ಆಸೆಗೆ ಬಿದ್ದ 32 ವರ್ಷದ ಶಬರೀಶ್ ಎಂಬಾತ ಕುಡಿದ ಅಮಲಿನಲ್ಲಿ ಹಚ್ಚಿದ ಪಟಾಕಿ ಮೇಲೆ ಕುಳಿತು ಹೀರೋ ಆಗಲು ಹೊರಟಿದ್ದ. ಆದರೆ ಪಟಾಕಿ ಸಿಡಿದ ಕಾರಣ ಆತನ ಹಿಂಬದಿ ಛಿದ್ರವಾಗಿ ಕೊನೆಗೆ ಪ್ರಾಣಪಕ್ಷಿಯೇ ಹಾರಿಹೋಗಿದೆ. ಈ ದುರ್ಘಟನೆ ಬೆಂಗಳೂರಿನ ಕೋಣನಕುಂಟೆಯಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.

ಈ ವಿಡಿಯೋ ಕೂಡ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತಮಾಷೆ ಮಾಡಲು ಹೋಗಿ ಒಬ್ಬನ ಪ್ರಾಣವೇ ಹೋಯ್ತಲ್ಲ ಎಂದು ಹಲವರು ಬೇಸರ ಹಂಚಿಕೊಳ್ಳುತ್ತಿದ್ದಾರೆ. ಈ ಘಟನೆಯಿಂದ ಅಲ್ಲಿ ಶೋಕ ಮನೆಮಾಡಿದೆ. ಬದುಕಿದ್ದರೆ ನೂರು ಆಟೋಗಳನ್ನು ಸಂಪಾದನೆ ಮಾಡಬಹುದಿತ್ತು. ಆಟವಾಡಲು ಹೋಗಿ ಏನು ಸಾಧಿಸಿದ? ಎಂದೆಲ್ಲ ಮಾತನಾಡುತ್ತಿದ್ದಾರೆ.
ಪ್ರಾಣಕ್ಕೆ ಕುತ್ತು ತರುವ ಚಾಲೆಂಜ್ ಹಾಕಿದವರಿಗೆ ತಕ್ಕ ಶಿಕ್ಷೆ ಆಗಲೇಬೇಕು ಎಂದೂ ನೆಟ್ಟಿಗರು ಆಗ್ರಹಿಸಿದ್ದಾರೆ. ಪಟಾಕಿ ಸಿಡಿಸುವಾಗ ಎಷ್ಟು ಜೋಪಾನ ವಹಿಸಿದರೂ ಇಂತಹ ದುರ್ಘಟನೆಗಳು ನಡೆಯುತ್ತವೆ. ಆದರೆ, ಇದು ಉದ್ದೇಶಪೂರ್ವಕವಾಗಿ ಸಾವಿನ ಆಹ್ವಾನ ನೀಡಿರುವ ಘಟನೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ಶುರು ಮಾಡಿದ್ದಾರೆ. ಈ ಘಟನೆ ಹೇಗಾಯ್ತು, ಯಾರು ಚಾಲೆಂಜ್ ಕಟ್ಟಿದವರು? ಎಂದೆಲ್ಲ ಪರಿಶೀಲನೆ ನಡೆಸುತ್ತಿದ್ದಾರೆ.

ಘಟನೆ ಸಂಬಂಧ ಕೇಸ್ ದಾಖಲಿಸಿಕೊಂಡಿರುವ ಕೋಣನಕುಂಟೆ ಪೊಲೀಸರು, ಈ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳಾದ ನವೀನ್, ದಿನಕರ್, ಸತ್ಯವೇಲು, ಕಾರ್ತಿಕ್, ಸತೀಶ್, ಸಂತೋಷ್ ಎಂಬುವರನ್ನು ಅರೆಸ್ಟ್ ಮಾಡಿರುವುದಾಗಿಯೂ ಪೊಲೀಸ್ ಮೂಲಗಳು ತಿಳಿಸಿವೆ.
100ಕ್ಕೂ ಹೆಚ್ಚು ಪಟಾಕಿ ಕೇಸ್ ವರದಿ
ಪಟಾಕಿ ಸಿಡಿತದಿಂದ ಹಲವರು ಗಾಯಗೊಂಡಿರುವ ಘಟನೆಗಳು ವರದಿಯಾಗಿದ್ದು, ಇವರ ಪಾಲಿಗೆ ಬೆಳಕಿನ ಹಬ್ಬವೇ ಕತ್ತಲು ತಂದಿಟ್ಟಿದೆ. ಬೆಂಗಳೂರಿನಲ್ಲಿ ಪಟಾಕಿ ಸಿಡಿಸಲು ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಲಾಗಿದ್ದರೂ ಪಟಾಕಿ ಸಿಡಿತದಿಂದ ಗಂಭೀರವಾಗಿ ಗಾಯಗೊಂಡಿರುವವರ ಸಂಖ್ಯೆ ಹೆಚ್ಚೇ ಆಗಿದೆ. ಪಟಾಕಿ ಸಿಡಿತದಿಂದಾಗಿ ಬೆಂಗಳೂರಿನಲ್ಲಿ ಮಕ್ಕಳು, ಮಹಿಳೆಯರು ಸೇರಿ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸದ್ಯ ಅವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಪಟಾಕಿ ಸಿಡಿಸಿದವರಿಗಿಂತ ಹೆಚ್ಚಾಗಿ ದೂರದಲ್ಲಿ ನಿಂತು ನೋಡಿದವರಿಗೆ ಹೆಚ್ಚು ಗಾಯಗಳಾಗಿವೆ. ಪಟಾಕಿಯಿಂದ ಹಲವರಿಗೆ ಕಣ್ಣಿಗೆ ಹಾನಿಯಾಗಿ ಮಿಂಟೋ ಆಸ್ಪತ್ರೆ, ಶಂಕರ ಆಸ್ಪತ್ರೆ, ನಾರಾಯಣ ನೇತ್ರಾಲಯ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಹಲವರಿಗೆ ದೇಹದ ವಿವಿಧ ಭಾಗಗಳ ಮೇಲೂ ಸುಟ್ಟ ಗಾಯಗಳು ಆಗಿರುವುದು ವರದಿಯಾಗಿವೆ.











Click it and Unblock the Notifications