ರೋಗಿಗಳಿಂದ ಹಣ ವಸೂಲಿ, ಟಾಯ್ಲೆಟ್ ಸರಿಯಿಲ್ಲ! ಕೆ.ಸಿ.ಜನರಲ್ ಆಸ್ಪತ್ರೆ ಕಂಡು ಲೋಕಾಯುಕ್ತ ಶಾಕ್
ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯು ಈಗ ಹಲವು ವಿಚಾರಗಳಲ್ಲಿ ಕುಖ್ಯಾತಿಯಾಗಿದೆ. ಲೋಕಾಯುಕ್ತ ನ್ಯಾಯಾಧೀಶರಾದ ಬಿ.ಎಸ್.ಪಾಟೀಲ್, ನ್ಯಾ.ವೀರಪ್ಪ ಮತ್ತು ನ್ಯಾ.ಫಣೀಂದ್ರ ಅವರು ನಿನ್ನೆ ದಿಢೀರ್ ಆಸ್ಪತ್ರೆಗೆ ಭೇಟಿ ಪರಿಶೀಲನೆ ನಡೆಸಿದ ವೇಳೆ ಅಲ್ಲಿದ್ದ ಅವ್ಯವಸ್ಥೆಗಳನ್ನು ಕಂಡು ದಂಗಾಗಿದ್ದಾರೆ.
ಹೌದು ಕೆ.ಸಿ.ಜನರಲ್ ಆಸ್ಪತ್ರೆಯ ಅವ್ಯವಹಾರಗಳ ಬಗ್ಗೆ ಹಲವು ದೂರುಗಳು ಕೇಳಿಬಂದ ಹಿನ್ನೆಲೆ ನಿನ್ನೆ ದಿಢೀರ್ ಭೇಟಿ ನೀಡಿದ್ದಾರೆ. ಈ ವೇಳೆ ಅಲ್ಲಿ ತುರ್ತು ಚಿಕಿತ್ಸಾ ವಿಭಾಗಗಳಲ್ಲಿ ವೈದ್ಯರೇ ಇರಲಿಲ್ಲ. ಆಸ್ಪತ್ರೆಯಲ್ಲೇ ಲಭ್ಯವಿದ್ದರೂ ಹೊರಗಿನ ಔಷಧಿ ಖರೀದಿಗೆ ವೈದ್ಯರು ಚೀಟಿ ಬರೆದು ಕಳಿಸುವುದು ಸಹ ಕಂಡು ಬಂದಿದೆ ಎನ್ನಲಾಗಿದೆ.

ಇನ್ನು ಬೆಳಿಗ್ಗೆ 9 ಗಂಟೆಗೆ ರೋಗಿಗಳಿಗೆ ಚಿಕಿತ್ಸೆ ಆರಂಭಿಸುವಂತೆ ಸ್ಪಷ್ಟ ಸೂಚನೆ ನೀಡಿದ್ದರೂ 10 ಗಂಟೆಯಾದರೂ ಐವರು ವೈದ್ಯರಲ್ಲಿ ಒಬ್ಬರು ಮಾತ್ರ ಹಾಜರಿದ್ದರು. ಆಸ್ಪತ್ರೆಯಲ್ಲಿರೋ 10 ವಿಶೇಷ ವಾರ್ಡ್‌ಗಳಲ್ಲಿ ಕೇವಲ ಮೂರು ಮಾತ್ರ ಬಳಕೆಯಲ್ಲಿದೆ. ಚಿಕಿತ್ಸೆಗಾಗಿ ರೋಗಿಗಳು ಬಂದಿದ್ದರೂ ವಾರ್ಡ್‌ಗಳು ಖಾಲಿಯಾಗೇ ಇದ್ದವು ಎಂದು ಲೋಕಾಯುಕ್ತ ಪರಿಶೀಲನೆ ವೇಳೆ ತಿಳಿದುಬಂದಿದೆ.
ಗರ್ಭಾವಸ್ಥೆಯ ವಾರ್ಡ್‌ನಲ್ಲಿರುವ ಇಸಿಜಿ ಯಂತ್ರ ಮತ್ತು ಮಕ್ಕಳ ತೀವ್ರ ನಿಗಾ ಘಟಕದಲ್ಲಿನ ವೆಂಟಿಲೇಟರ್ ಕಾರ್ಯನಿರ್ವಹಿಸುತ್ತಿಲ್ಲ. ರೋಗಿಗಳಿಗೆ ಗುಣಮಟ್ಟವಲ್ಲದ ಔಷಧಗಳನ್ನು ನೀಡುತ್ತಿರುವುದು ಕಂಡುಬಂದಿದೆ. ಆಸ್ಪತ್ರೆಯಲ್ಲಿ ತುರ್ತು ಸಂದರ್ಭಗಳಲ್ಲಿ ಬಳಸುವ ಎಬಿಜಿ ಔಷಧಗಳೂ ಇರಲಿಲ್ಲ ಎಂದು ಗೊತ್ತಾಗಿದೆ.

ಆಸ್ಪತ್ರೆಯ ಕೆಲವು ಗೋಡೆಗಳಲ್ಲಿ ಬಿರುಕು ಬಿಟ್ಟಿದ್ದು, ನೀರು ಸೋರಿಕೆಯಾಗುತ್ತಿದೆ. ಆಸ್ಪತ್ರೆಯಲ್ಲಿ ಸಿಬ್ಬಂದಿ ಹಾಗೂ ವೈದ್ಯರು ನೇಮಕಗೊಂಡಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಹಾಜರಾತಿ ಮತ್ತು ನಗದು ರಿಜಿಸ್ಟರ್ ಅನ್ನು ಸರಿಯಾಗಿ ನಿರ್ವಹಿಸಿಲ್ಲ. ಅವಧಿ ಮೀರಿದ ಔಷಧಿಗಳನ್ನು ವಿಲೇವಾರಿ ಕೂಡ ಮಾಡಿಲ್ಲ ಎಂದು ಗೊತ್ತಾಗಿದೆ. ಈ ಸಂಬಂಧ ಲೋಕಾಯುಕ್ತರು ನ್ಯಾಯಾಧೀಶರು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಮತ್ತು ಅಧಿಕಾರಿಗಳನ್ನು ವಿಚಾರಣೆಗೆ ಕರೆದಿದ್ದಾರೆ ಎನ್ನಲಾಗಿದೆ.
ಇನ್ನು ಇದೇ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಕಳೆದ ವಾರ ಗರ್ಭಿಣಿ ಮಹಿಳೆಯನ್ನು ದಾಖಲಿಸಿಕೊಳ್ಳಲು ವಿಳಂಬ ಮಾಡಿದ್ದರು. ಲಂಚ ಪಡೆದ ನಂತರವೇ ಅವರನ್ನು ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಒಳಗೆ ಬಿಟ್ಟರು ಎಂಬ ಆರೋಪ ಕೇಳಿಬಂದಿತ್ತು. ಪ್ರತಿನಿತ್ಯ 1,500 ರಿಂದ 1,750 ರೋಗಿಗಳು ಬರುವ ಈ ಆಸ್ಪತ್ರೆಯಲ್ಲಿ ಕೇವಲ ಒಂದು ಶೌಚಾಲಯ ಮಾತ್ರ ಬಳಕೆಯ ಸ್ಥಿತಿಯಲ್ಲಿದೆ. ಹೆರಿಗೆಯಾದ ಮಹಿಳೆಯರಿಗೆ ಸರಿಯಾದ ಕುಡಿಯುವ ನೀರಿನ ಘಟಕಗಳು ಹಾಗೂ ಬಿಸಿನೀರಿನ ವ್ಯವಸ್ಥೆ ಇಲ್ಲ ಎಂದು ಹೇಳಲಾಗಿದೆ.

ರೋಗಿಗಳಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆಯೂ ದೊಡ್ಡ ಆರೋಪವಿದ್ದು, ಮೊದಲಿನಿಂದಲೂ ಈ ದೂರುಗಳು ಕೇಳಿಬರುತ್ತಲೇ ಇವೆ. ಈ ಕಾರಣದಿಂದ ಲೋಕಾಯುಕ್ತ ನ್ಯಾಯಾಧೀಶರ ತಂಡ ದಾಳಿ ನಡೆಸಿ ಬಿಸಿ ಮುಟ್ಟಿಸಿದೆ. ಈ ವೇಳೆ ಲೋಕಾಯುಕ್ತ ಅಧಿಕಾರಿಗಳ ಮುಂದೆ ರೋಗಿಗಳು, ಅವರ ಕುಟುಂಬಸ್ಥರು ತಮ್ಮ ನೋವು ಬಿಚ್ಚಿಟ್ಟಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಕನಿಷ್ಠ ಅಂದರೂ 500 ರೂಪಾಯಿ ಕೊಡಲೇಬೇಕು ಅಂತಾರೆ. ಇಲ್ಲದಿದ್ರೆ ತಾಯಿ ಕಾರ್ಡೇ ಕೊಡಲ್ಲ ಎಂದು ಹೆದರಿಸುತ್ತಾರೆ ಎಂದು ಅಳಲು ತೋಡಿಕೊಂಡಿದ್ದಾರೆ.












Click it and Unblock the Notifications