Unsung Heroes: ಈ ಮಹಿಳೆ ಇಲ್ಲದಿದ್ರೆ ಮೆಟ್ರೋದಲ್ಲಿ ದೊಡ್ಡ ದುರಂತವೇ ನಡೀತಿತ್ತು!
ಬೆಂಗಳೂರಿನ ನೆಚ್ಚಿನ ನಮ್ಮ ಮೆಟ್ರೋದಲ್ಲಿ ನಿನ್ನೆ ಸ್ವಲ್ಪ ಎಚ್ಚರ ತಪ್ಪಿದ್ದರೂ ದೊಡ್ಡ ಅನಾಹುತವೇ ನಡೆದು ಹೋಗುತ್ತಿತ್ತು. ಮೆಟ್ರೋ ನೇರಳೆ ಮಾರ್ಗದ ಜ್ಞಾನಭಾರತಿ ಮೆಟ್ರೋ ನಿಲ್ದಾಣದಲ್ಲಿ ನಿನ್ನೆ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆಯು ಬೆಂಗಳೂರಿಗರನ್ನು ಬೆಚ್ಚಿಬೀಳಿಸಿತ್ತು.
ಆದರೆ ಅದೃಷ್ಟವಶಾತ್ ಆತನಿಗೆ ಯಾವುದೇ ತೊಂದರೆ ಆಗಲಿಲ್ಲ. ಇದಕ್ಕೆ ಕಾರಣ, ಆ ನಿಲ್ದಾಣದಲ್ಲಿ ಅಲರ್ಟ್ ಆಗಿದ್ದ ಮಹಿಳಾ ಸಿಬ್ಬಂದಿ. ಅವರ ಹೆಸರು ರಶ್ಮಿ. ನಿನ್ನೆ ಇವರು ತೋರಿದ ಧೈರ್ಯಕ್ಕೆ ಎಲ್ಲರೂ ಸಲಾಂ ಎನ್ನುತ್ತಿದ್ದಾರೆ.

ಹೌದು, ನಿನ್ನೆ ಮಧ್ಯಾಹ್ನ ಮಧ್ಯಾಹ್ಮ 2.13ರ ವೇಳೆಗೆ ಮೆಟ್ರೋ ನಿಲ್ದಾಣಕ್ಕೆ ರೈಲು ಬರುತ್ತಿದ್ದಂತೆ ಬಿಹಾರ ಮೂಲದ ಸಿದ್ಧಾರ್ಥ್ ಜೈನ್ ಎಂಬ ವ್ಯಕ್ತಿ ಹಳಿಗೆ ಜಿಗಿದು ಆತ್ಮಹತ್ಯೆಗೆ ಮುಂದಾಗಿದ್ದ. ವೈಟ್ಫೀಲ್ಡ್ ಕಡೆಯಿಂದ ಕೆಂಗೇರಿ ಕಡೆಗೆ ತೆರಳುತ್ತಿದ್ದ ಮೆಟ್ರೊ ರೈಲಿಗೆ ಬಲಿಯಾಗಲು ಆತ ನಿರ್ಧರಿಸಿದ್ದ.
ಇದನ್ನು ಗಮನಿಸಿದ ಸೆಕ್ಯೂರಿಟಿ ಆಫೀಸರ್ ರಶ್ಮಿ ಅವರು ತಕ್ಷಣವೇ ತಮ್ಮ ಬುದ್ಧಿ ಉಪಯೋಗಿಸಿದ್ದರು. ವ್ಯಕ್ತಿ ಹಳಿಗೆ ಜಿಗಿಯುತ್ತಿದ್ದಂತೆ ಕೂಡಲೇ ರಶ್ಮಿ ಅವರು ಅಲ್ಲಿದ್ದ ತುರ್ತು ಟ್ರಿಪ್ ಸಿಸ್ಟಮ್‌ಗೆ (ಇಟಿಎಸ್) ಅಳವಡಿಸಿದ್ದ ಗಾಜನ್ನು ಕೈಯಿಂದಲೇ ಒಡೆದು ಪವರ್ ಆಫ್ ಮಾಡಿದ್ದರು. ಇದರಿಂದ ಮೆಟ್ರೋ ರೈಲಿನ ವಿದ್ಯುತ್ ಸಂಪರ್ಕ ಕ್ಷಣಾರ್ಧದಲ್ಲೇ ಕಡಿತಗೊಂಡಿತು.
ರೈಲಿನ ಕೆಳಗೆ ಸಿಲುಕಿದ್ದ ಆ ವ್ಯಕ್ತಿ ಹೊರಬರಲಾರದೇ ಪರದಾಡಿದ. ಕೊನೆಗೆ ಅಲ್ಲಿದ್ದ ಸಿಬ್ಬಂದಿ ಆತನನ್ನು ಹಳಿಯಿಂದ ಮೇಲಕ್ಕೆ ಕ್ಷೇಮವಾಗಿ ಎತ್ತಿದರು. ಆತನ ಆಯಸ್ಸು ಗಟ್ಟಿಯಾಗಿದ್ದರಿಂದ ಪ್ರಾಣಕ್ಕೆ ಯಾವುದೇ ಅಪಾಯವಾಗಿರಲಿಲ್ಲ. ಈ ಘಟನೆ ನಂತರ ನೇರಳೆ ಮಾರ್ಗದಲ್ಲಿ ರೈಲು ಸಂಚಾರವನ್ನು ಮತ್ತೆ ಆರಂಭಿಸಲಾಯಿತು. ರಶ್ಮಿ ಅವರು ತಮ್ಮ ಜೀವವನ್ನೂ ಲೆಕ್ಕಿಸದೆ ಈ ಸಾಹಸಕ್ಕೆ ಕೈ ಹಾಕಿದ್ದರಿಂದಲೇ ಈ ವ್ಯಕ್ತಿಯ ಜೀವ ಉಳಿಸಲು ಸಾಧ್ಯವಾಯಿತು.

ಆದರೆ ರಶ್ಮಿ ಅವರು ತಮ್ಮ ಕೈಯಿಂದಲೇ ಗಾಜನ್ನು ಒಡೆದಿರುವುದರಿಂದ ಗಂಭೀರ ಗಾಯಗೊಂಡಿದ್ದಾರೆ. ತುಸು ರಕ್ತಸ್ರಾವವೂ ಆಗಿದೆ ಎಂದು ವರದಿಯಾಗಿದೆ. ಆದರೆ ಇವರ ಧೈರ್ಯ ಹಾಗೂ ಸಾಹಸಕ್ಕೆ ಅಲ್ಲಿದ್ದ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಮತ್ತೊಂದೆಡೆ ರಶ್ಮಿ ಅವರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಧೈರ್ಯಂ ಸರ್ವತ್ರ ಸಾಧನಂ ಎಂದು ಬರೆದುಕೊಂಡು ಕೊಂಡಾಡುತ್ತಿದ್ದಾರೆ.
ಹೆಣ್ಣುಮಗಳಾಗಿ ಈಕೆ ತೋರಿರುವ ಧೈರ್ಯ ಹಾಗೂ ಸಮಯಪ್ರಜ್ಞೆ ಎಲ್ಲರಿಗೂ ಮಾದರಿ ಎಂದು ಹೊಗಳಿದ್ದಾರೆ. ಸದ್ಯ ರಶ್ಮಿ ಅವರ ಫೋಟೋ ಹಲವರು ಹಂಚಿಕೊಂಡಿದ್ದಾರೆ. ಇವರನ್ನು Unsung Heroes ಎಂದು ಕೆಲವರು ಕರೆದಿದ್ದಾರೆ.
ಆತ್ಮಹತ್ಯೆಗೆ ಕಾರಣವೇನು?: ನಿನ್ನೆ ಆತ್ನಹತ್ಯೆಗೆ ಯತ್ನಿಸಿದ್ದ ಬಿಹಾರ ಮೂಲದ ಸಿದ್ಧಾರ್ಥ್ ಜೈನ್ ಸದ್ಯ ಬೆಂಗಳೂರಿನ ಒಂದು ಅಪಾರ್ಟ್‌ಮೆಂಟ್‌ನಲ್ಲಿ ಕುಟುಂಬದೊಂದಿಗೆ ವಾಸವಿದ್ದರು. ಶೋರೂಂ ಒಂದರಲ್ಲಿ ಸೇಲ್ಸ್ ಎಕ್ಸೆಕ್ಯೂಟಿವ್ ಆಗಿ ಕೆಲಸ ಕೂಡ ಮಾಡಿಕೊಂಡಿದ್ದರು. ಈ ವೇಳೆ ಇವರು ಮಾಡಿದ್ದ ಸಾಲ ತೀರಿಸಲಾಗದೆ ಪರದಾಡುತ್ತಿದ್ದರು ಎಂದು ಹೇಳಲಾಗಿದೆ.
ಕೊನೆಗೆ ಮನೆ ಬಾಡಿಗೆ ಕಟ್ಟಲೂ ಅವರ ಬಳಿ ಹಣ ಇರಲಿಲ್ಲ. ಜೀವನ ನಡೆಸುವುದು ಕಷ್ಟವಾಗಿ ಕೊನೆಗೆ ಬೇರೆ ದಾರಿ ಕಾಣದೆ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಸಿದ್ಧಾರ್ಥ್ ಪೊಲೀಸರ ಮುಂದೆ ಹೇಳಿದ್ದಾರೆ. ಜೀವ ಬಿಡಲು ಬಂದಿದ್ದ ಈತನಿಗೆ ಮೆಟ್ರೋ ಸಿಬ್ಬಂದಿ ರಶ್ಮಿ ಅವರು ತಮ್ಮ ಜೀವ ಲೆಕ್ಕಿಸದೆ, ಹೊಸ ಜೀವನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.












Click it and Unblock the Notifications