ಇನ್ಮುಂದೆ ಆಂಬುಲೆನ್ಸ್‌ಗಳಿಗಿಲ್ಲ ಟ್ರಾಫಿಕ್ ಕಿರಿಕಿರಿ; ಪೊಲೀಸರಿಂದ ಮಾಸ್ಟರ್‌ಪ್ಲ್ಯಾನ್!
ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಯಲ್ಲಿ ಆಂಬುಲೆನ್ಸ್‌ಗಳು ತುರ್ತಾಗಿ ಸಂಚರಿಸುವುದು ದೊಡ್ಡ ತಲೆನೋವಾಗಿದೆ. ಟ್ರಾಫಿಕ್ ಕಾರಣದಿಂದಲೇ ಆಂಬುಲೆನ್ಸ್‌ಗಳನ್ನು ಸಕಾಲಕ್ಕೆ ಆಸ್ಪತ್ರೆಗಳನ್ನು ತಲುಪಲಾರದೆ, ಜನ ಪ್ರಾಣಾಪಾಯ ಸ್ಥಿತಿಯಲ್ಲೇ ಪರದಾಡುತ್ತಾರೆ. ಸೈರಲ್ ಹಾಕಿ ಬಂದರೂ ಆಂಬುಲೆನ್ಸ್‌ಗಳು ಕಿಲೋಮೀಟರ್‌ಗಟ್ಟಲೆ ನಿಲ್ಲಬೇಕಾದ ಪರಿಸ್ಥಿತಿ ಇದೆ. ಇದಕ್ಕಾಗಿ ಬೆಂಗಳೂರು ಸಂಚಾರ ಪೊಲೀಸರು ಹೊಸ ಉಪಾಯವೊಂದನ್ನು ಮಾಡಿದ್ದಾರೆ.
ಆಂಬ್ಯುಲೆನ್ಸ್ಗಳ ಸುಗಮ ಸಂಚಾರಕ್ಕಾಗಿ ಬೆಂಗಳೂರು ನೂತನ ಪ್ರಯೋಗಕ್ಕೆ ಮುಂದಾಗಿರುವ ಟ್ರಾಫಿಕ್ ಪೊಲೀಸರು ಇದಕ್ಕಾಗಿ ಹೊಸ ಆ್ಯಪ್ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಈ ಆ್ಯಪ್ ಹೆಸರು ಇ-ಪಾತ್ ಎನ್ನಲಾಗಿದೆ. ಆಂಬುಲೆನ್ಸ್ ಚಾಲಕರಿಗಾಗಿ ಈ ಆಪ್ ಸಿದ್ಧಪಡಿಸಲಾಗಿದ್ದು, ರೋಗಿಗಳನ್ನು ಹೊತ್ತು ತರುವಾಗ ಚಾಲಕರು ಯಾವುದೇ ಸಿಗ್ನಲ್‌ಗಳಲ್ಲಿ ನಿಲುಗಡೆ ಇಲ್ಲದೆ ಸಂಚರಿಸಲು ಸಹಾಯವಾಗಲಿದೆ.

ಮೊದಲಾದರೆ ಟ್ರಾಫಿಕ್ ಪೊಲೀಸರು ದೂರದಲ್ಲಿ ಆಂಬುಲೆನ್ಸ್ ಸೈರಲ್ ಕೇಳಿದರೆ ಮಾತ್ರವೇ ಟ್ರಾಫಿಕ್ ಕ್ಲಿಯರ್ ಮಾಡಲು ಮುಂದಾಗುತ್ತಿದ್ದರು. ಆದರೆ, ಈ ಆ್ಯಪ್ ಸಹಾಯದಿಂದ ಆಯಾ ರಸ್ತೆ ಮಾರ್ಗದಲ್ಲಿ ಬರುವ ಆಂಬುಲೆನ್ಸ್ ಮಾಹಿತಿಯು ಜಿಪಿಎಸ್ ಮೂಲಕ ಪೊಲೀಸರಿಗೆ ಮೊದಲೇ ಗೊತ್ತಾಗಲಿದೆ. ಆಂಬ್ಯುಲೆನ್ಸ್ ಸಿಗ್ನಲ್ ಬಳಿ ಬರುತ್ತಿರುವ ಮಾಹಿತಿ GPS ಮತ್ತು ಅಡಾಪ್ಟಿವ್ ತಂತ್ರಜ್ಞಾನದ ಮೂಲಕ ಸಂಚಾರ ಪೊಲೀಸರಿಗೆ ತಿಳಿಯಲಿದ್ದು, ಕೂಡಲೇ ಅವರು ಟ್ರಾಫಿಕ್ ಕಂಟ್ರೋಲ್‌ಗೆ ಮುಂದಾಗಲಿದ್ದಾರೆ. ಆಗ ಆಂಬುಲೆನ್ಸ್ ಸುಗಮವಾಗಿ ಸಂಚರಿಸಬಹುದು ಎಂದು ಹೇಳಲಾಗಿದೆ.
ಈ ಆ್ಯಪ್ ಬಿಡುಗಡೆ ಅಂತಿಮ ಹಂತದಲ್ಲಿದ್ದು, ಖಾಸಗಿ ಆ್ಯಂಬುಲೆನ್ಸ್ ಮಾಲೀಕರು ಹಾಗೂ ಆಂಬುಲೆನ್ಸ್ ಸಂಘಟನೆಗಳ ಜೊತೆ ಟ್ರಾಫಿಕ್ ಪೊಲೀಸರು ಸಭೆಯೂ ನಡೆಸಿದ್ದಾರಂತೆ. ಈ ತಿಂಗಳಾಂತ್ಯಕ್ಕೆ ಆ್ಯಪ್ ಬಳಕೆಗೆ ಲಭ್ಯವಾಗಲಿದ್ದು, ಜನರ ಪ್ರಾಣ ಉಳಿಸುವಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಬೆಂಗಳೂರು ಸಂಚಾರ ಪೊಲೀಸ್ ಜಂಟಿ ಆಯುಕ್ತ ಎಂ.ಎನ್.ಅನುಚೇತ್, ಆಂಬುಲೆನ್ಸ್ ಚಾಲಕರು ತಮ್ಮ ಸ್ಮಾರ್ಟ್ಫೋನ್ನಲ್ಲಿರುವ ಪ್ಲೇಸ್ಟೋರ್‌ನಲ್ಲಿ ಇ-ಪಾತ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಚಾಲಕರು ಮೊದಲಿಗೆ ಆ್ಯಂಬುಲೆನ್ಸ್ ಎಲ್ಲಿಂದ ಎಲ್ಲಿಗೆ ಹೋಗಲಿದೆ ಎಂದು ಮಾಹಿತಿ ಅಪ್ಲೋಡ್ ಮಾಡಬೇಕು. ರೋಗಿಯ ಸ್ಥಿತಿ ಯಾವ ಹಂತದಲ್ಲಿದೆ ಎಂಬುದನ್ನೂ ತಿಳಿಸಬೇಕು. ಒಂದು ವೇಳೆ ತೀರಾ ಎಮರ್ಜೆನ್ಸಿ ಇದ್ರೆ ಅಂತಹ ಆಂಬುಲೆನ್ಸ್‌ಗಳಿಗೆ ಮೊದಲ ಆದ್ಯತೆ ಸಿಗಲಿದೆ ಎಂದಿದ್ದಾರೆ.
ಗಂಭೀರ ಅಪಘಾತ, ಹೃದಯಾಘಾತ ಸೇರಿ ಇನ್ನಿತರ ತುರ್ತು ಪ್ರಕರಣಗಳಿಗೂ ಮೊದಲ ಆದ್ಯತೆ ನೀಡುತ್ತೇವೆ. ಆಂಬುಲೆನ್ಸ್ ಚಾಲಕರು ಅಪ್ಲೋಡ್ ಮಾಡುವ ಮಾಹಿತಿಯು ನೇರವಾಗಿ ನಮ್ಮ ಸಂಚಾರ ನಿರ್ವಹಣಾ ಕೇಂದ್ರದ ಸಿಬ್ಬಂದಿಗೆ ತಲುಪುತ್ತದೆ. ಅವರ ಆ ಮಾಹಿತಿಯನ್ನು ಪರಿಶೀಲಿಸಿ, ಜಿಪಿಎಸ್ ಆಧಾರದಲ್ಲಿ ಸರಿಯಾದ ರಸ್ತೆ ಮಾರ್ಗವನ್ನು ಸೂಚಿಸುತ್ತಾರೆ ಎಂದು ವಿವರಿಸಿದ್ದಾರೆ.
ಆಂಬುಲೆನ್ಸ್ ಸಿಗ್ನಲ್ ಬಳಿಗೆ ಬರುತ್ತಿದ್ದಂತೆ ಪೊಲೀಸರಿಗೂ ಮಾಹಿತಿ ಸಿಗಲಿದೆ. ಬಳಿಕ ಅಲ್ಲಿರುವ ಸಿಬ್ಬಂದಿ ತಕ್ಷಣ ಎಚ್ಚೆತ್ತುಕೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿದ್ದಾರೆ. ಬಳಿಕ ಅದೇ ಮಾರ್ಗದಲ್ಲಿ ಮುಂದೆ ಸಿಗುವ ಸಿಗ್ನಲ್‌ಗಳಿಗೂ ಈ ಮಾಹಿತಿ ರವಾನೆಯಾಗಲಿದೆ. ಎಲ್ಲ ಕಡೆಯೂ ಆಂಬುಲೆನ್ಸ್ ಸರಾಗವಾಗಿ ಸಂಚರಿಸಲು ಟ್ರಾಫಿಕ್ ಕ್ಲಿಯರ್ ಮಾಡಲಾಗುವುದು. ಸಿಗ್ನಲ್ ಇಲ್ಲದ ಕಡೆ ಆಂಬುಲೆನ್ಸ್ ವೇಗಮಿತಿ ಕಡಿಮೆಯಾದರೂ ನಮಗೆ ಅಲರ್ಟ್ ಮೆಸೇಜ್ ಬರಲಿದೆ. ಇದರ ಆಧಾರದಲ್ಲಿ ಸುಗಮ ಆಂಬುಲೆನ್ಸ್‌ಗಳಿಗೆ ದಾರಿ ಮಾಡಿಕೊಡಲಾಗುವುದು ಎಂದಿದ್ದಾರೆ.
ಈ ತಂತ್ರಜ್ಞಾನ ಕಾರ್ಯರೂಪಕ್ಕೆ ಬಂದರೆ ಬೆಂಗಳೂರಿನಲ್ಲಿ ಆಂಬುಲೆನ್ಸ್‌ಗಳ ಸಂಚಾರದ ತಲೆನೋವು ಕಡಿಮೆಯಾಗಲಿದ್ದು, ಸಕಾಲಕ್ಕೆ ರೋಗಿಗಳನ್ನು ಆಸ್ಪತ್ರೆಗಳಿಗೆ ಕರೆದೊಯ್ಯಬಹುದು ಎಂದು ಸಿಲಿಕಾನ್ ಸಿಟಿ ಮಂದಿ ನಿಟ್ಟುಸಿರು ಬಿಡಲಿದ್ದಾರೆ.












Click it and Unblock the Notifications