Kadlekai Parishe 2022: ಬಸವನಗುಡಿಯ ಕಡಲೆಕಾಯಿ ಪರಿಷೆಗೆ ಉತ್ತಮ ಸ್ಪಂದನೆ: ಶೇಂಗಾ ಬೆಲೆ ತುಸು ಏರಿಕೆ
ಬೆಂಗಳೂರು, ನವೆಂಬರ್ 21: ಕಾರ್ತಿಕ ಮಾಸದ ಕೊನೆಯ ವಾರ ಬಸವನಗುಡಿಯಲ್ಲಿ ನಡೆಯುವ ಬೆಂಗಳೂರು ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸುವ ಮೂಲಕ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಭಾನುವಾರ ಉದ್ಘಾಟನೆಗೊಂಡ ಈ ಕಡಲೆಕಾಯಿ ಪರಿಷೆ ಒಂದು ವಾರದ ಕಾಲ ನಡೆಯಲಿದೆ. ಉದ್ಘಾಟನೆಯ ಹಿಂದಿನ ಮೂರು ದಿನ ಹಾಗೂ ನಂತರ ಮೂರು ದಿನ ಬಸವನಗುಡಿಯ ಬುಲ್ ಟಂಪಲ್ ರಸ್ತೆ, ಸುತ್ತಮುತ್ತಲಿನ ಪ್ರದೇಶದಲ್ಲಿ ಜನಜಾತ್ರೆಯೆ ಉಂಟಾಗುತ್ತಿದೆ. ಕೋವಿಡ್ ಹಿನ್ನೆಲೆ ವಿಜೃಂಭಣೆಯಿಂದ ನಡೆಯದ ಕಡಲೆಕಾಯಿ ಪರಿಷೆಗೆ ಕಳೆದ ವರ್ಷವು ಒಂದಷ್ಟು ಕೋವಿಡ್ ನಿಯಮ ಹೇರಲಾಗಿತ್ತು. ಆದರೆ ಈ ವರ್ಷ ಅದ್ಯಾವ ಭೀತಿ ಇಲ್ಲದ ಹಿನ್ನೆಲೆಯಲ್ಲಿ ಜನರು ತಂಡೋಪತಂಡವಾಗಿ ಆಗಮಿಸಿದ್ದರು.
ಶೇರು ಶೇಂಗಾಗೆ 50-70ರೂ.ಗೆ ಬೆಲೆ
ಕಳೆದ ವರ್ಷ ಪರಿಷೆಯಲ್ಲಿ ಒಂದು ಶೇರಿಗೆ ಕಡಲೆಕಾಯಿ ಬೆಲೆ 30ರಿಂದ 50ರೂ. ಇತ್ತು. ಅದೇ ಈ ವರ್ಷ ಹಸಿ ಕಡಲೆಕಾಯಿ ಶೇರಿಗೆ 50 ಹಾಗೂ ಹುರಿದ ಕಡಲೆಕಾಯಿ ಶೇರಿಗೆ 70ರೂ.ಗೆ ಹೆಚ್ಚಾಗಿದೆ. ಹೀಗಿದ್ದರು ಜನರ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದರು. ಮಾಲ್, ಸಿನಿಮಾಗೆ ತೆರಳುವ ಯುವಕ, ಯುವತಿಯರು ಸೇರಿದಂತೆ ಹಿರಿಯ, ಕಿರಿಯರೆಲ್ಲರು ಪರಿಷೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.

ಆಂಧ್ರ ಪ್ರದೇಶ, ತಮಿಳುನಾಡು ಸೇರಿದಂತೆ ನೆರೆ ರಾಜ್ಯ, ಬೆಂಗಳೂರು ಸುತ್ತಮುತ್ತಲಿನ ರಾಮನಗರ, ಕೋಲಾರ, ಚಿಂತಾಮಣಿ, ತುಮಕೂರು ಹಾಗೂ ಚಿತ್ರದುರ್ಗ ಸೇರಿದಂತೆ ಸುಮಾರು ಮೂರು ಸಾವಿರಕ್ಕೂ ಅಧಿಕ ರೈತರು ಪರಿಷೆಗೆ ಆಗಮಿಸಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಅಂಗಡಿಗಳು ರೈತರದ್ದೇ ಆಗಿವೆ ಎಂಬುದು ವಿಶೇಷ.
ಮೊದಲ ದಿನ 1 ಲಕ್ಷಕ್ಕಿಂತ ಹೆಚ್ಚ ಜನರ ಆಗಮನ
ಮೊದಲ ದಿನ ಭಾನುವಾರ ಬುಲ್‌ಟೆಂಪಲ್ ರಸ್ತೆ ಸುತ್ತಮುತ್ತ ಕಾಲಿಡಲಾಗಷ್ಟು ಜನರು ಕಿಕ್ಕಿರಿದು ತುಂಬಿದ್ದರು. ಸುಮಾರು ಒಂದು ಲಕ್ಷಕ್ಕಿಂತಲೂ ಅಧಿಕ ಮಂದಿ ಆಗಮಿಸಿದ್ದರು ಎಂದು ತಿಳಿದು ಬಂದಿದೆ. ಹುರಿದ ಹಾಗೂ ಕಡಲೆ ಕಾಯಿ ಖರೀದಿಸುವಲ್ಲಿ ಸಾರ್ವಜನಿಕರು ನಿರತರಾಗಿದ್ದರು. ಬಗೆ ಬಗೆಯ ತಿಂಡಿ-ತಿನಿಸುಗಳು, ಆಟಿಕೆಗಳು, ಗೃಹಉಪಯೋಗಿ ವಸ್ತುಗಳು, ಅಲಂಕಾರಿಕ ವಸ್ತುಗಳು ಜನರನ್ನು ಸೆಳೆದವು. ಇಡಿ ಬಸವನಗುಡಿಯೇ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿತ್ತು.

ಶೇಂಗಾ ಮೂಟೆ ತಂದಿದ್ದ ರೈತರೆಲ್ಲರು ಮೊದಲು ದೊಡ್ಡಗಣಪತಿ ದೇವಸ್ಥಾನದಲ್ಲಿನ ಗಣೇಶ ಮೂರ್ತಿ ಹಾಗೂ ನಂದಿಗೆ ಅರ್ಪಿಸಿದರು. ವಿಶೇಷ ಪೂಜೆ ಮೂಲಕ ಪರಿಷೆಗೆ ಅದ್ಧೂರಿ ಚಾಲನೆ ದೊರೆಯಿತು. ಅದೇ ರೀತಿ ಸೋಮವಾರ ನಂದಿಯ ತೆಪ್ಪೋತ್ಸವ ಕೆಂಪಾಂಬುದಿ ಕೆರೆಯಲ್ಲಿ ಕ್ಷಣಗಣನೆ ಆರಂಭವಾಗಿದೆ. ಪರಿಷೆಯಲ್ಲಿ ಕೆಲವು ಧಾರ್ಮಿಕ ವಿಧಿ ವಿಧಾನಗಳು ನೆರೆವೇರಿದವು. ಸುವ್ಯವಸ್ಥೆ ಕೈಗೊಂಡಿದ್ದ ಬಿಬಿಎಂಪಿ ಪ್ಲಾಸ್ಟಿಕ್ ಬಳಕೆ ವಿರುದ್ಧ ಜಾಗೃತಿ ಮೂಡಿಸಲು ನಾಮಫಲಕ ಅಳವಡಿಸಿದ್ದು, ವಿಶೇಷವಾಗಿತ್ತು. ಪರಿಷೆಯು ಇನ್ನು ಮೂರು ದಿನ ಹೀಗೆ ಮುಂದುವರಿಯಲಿದೆ.












Click it and Unblock the Notifications