ಸೀರೆ ನೋಡಿ ಮನಸೋತ ಮಹಿಳಾ ಐಎಎಸ್ ಅಧಿಕಾರಿಗೆ ಭಾರೀ ವಂಚನೆ
ಬೆಂಗಳೂರು, ಏಪ್ರಿಲ್ 24: ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ ಜಾಹೀರಾತುಗಳಿಗೆ ಮರುಳಾಗಬೇಡಿ ಎನ್ನುವ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರು ಸಹ ವಂಚನೆಗೊಳಾಗುವವರ ಸಂಖ್ಯೆ ಮಾತ್ರ ಸ್ವಲ್ಪವೂ ಕಡಿಮೆಯಾಗುತ್ತಿಲ್ಲ. ಜನ ಸಾಮಾನ್ಯರು ಮಾತ್ರವಲ್ಲ ಐಎಎಸ್ ಅಧಿಕಾರಿಗಳು ಕೂಡ ಈ ವಂಚನೆಗೊಳಗಾದ ಘಟನೆಯೊಂದು ಬೆಳಕಿಗೆ ಬಂದಿದೆ.
ಯುಟ್ಯೂಬ್ ಚಾನಲ್ವೊಂದರಲ್ಲಿ ಬಂದ ಜಾಹೀರಾತು ನೋಡಿ ಆನ್ಲೈನ್ನಲ್ಲಿ ಸೀರೆ ಬುಕ್ ಮಾಡಿದ್ದ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ವಂಚನೆಗೊಳಗಾಗಿದ್ದಾರೆ. ಸಕಾಲ ಮಿಷನ್ ನಿರ್ದೇಶಕಿ ಪಲ್ಲವಿ ಅಕುರಾತಿ ವಂಚನೆಗೊಳಗಾಗಿರುವ ಅಧಿಕಾರಿ ಎಂದು ತಿಳಿದು ಬಂದಿದೆ. ಸಾಮಾಜಿಕ ಜಾಲತಾಣಗಳದಲ್ಲಿ ಜಾಹೀರಾತು ನೋಡಿ ಸೀರೆ ಖರೀದಿಸಿ ಬಳಿಕ ಯಾವುದೇ ವಸ್ತುಗಳು ಬಾರದ ಹಿನ್ನೆಲೆಯಲ್ಲಿ ಮಹಿಳಾ ಐಎಎಸ್ ಅಧಿಕಾರಿ ಪಲ್ಲವಿ ಅಕುರಾತಿ ಬೆಂಗಳೂರಿನ ಪೂರ್ವ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ.

ಮಹಿಳಾ ಐಎಎಸ್ ಅಧಿಕಾರಿ ಪಲ್ಲವಿ ಅಕುರಾತಿಗೆ ಆದ ವಂಚನೆ ಏನು?
ಸಕಾಲ ಮಿಷನ್ ನಿರ್ದೇಶಕಿ ಪಲ್ಲವಿ ಅಕುರಾತಿ ತಮಿಳುನಾಡಿನ ಮಧುರೈ ಸುಂಗುಡಿ ಕಾಟನ್ ಸೀರೆ ಮಾರಾಟದ ಬಗ್ಗೆ ನಗರದ ಪೂರ್ಣಿಮಾ ಕಲೆಕ್ಷನ್ ವತಿಯಿಂದ ಮಾಡಲಾಗಿದ್ದ ವಿಡಿಯೋವನ್ನು ನೋಡಿದ್ದರು. ಸೀರೆ ಕಲೆಕ್ಷನ್ ನೋಡಿ ಇಷ್ಟಪಟ್ಟ ಪಲ್ಲವಿ ಅವರು ಅದರಲ್ಲೇ ಸೀರೆಯೊಂದನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ವಿಡಿಯೋದಲ್ಲಿ ಹೇಳಿದಂತೆ ತಮ್ಮಿಷ್ಟದ ಸೀರೆಯ ಸ್ಕ್ರೀನ್ ಶಾಟ್ ತೆಗೆದು ಬೆಲೆ ಹಾಗೂ ಇತರ ಮಾಹಿತಿಗಳನ್ನು ವಿಚಾರಿಸಿದ್ದಾರೆ. ಅದರಂತೆ ಸೀರೆಗಾಗಿ ಮಾರ್ಚ್ 10ರಂದು ಗೂಗಲ್ ಪೇ ಮೂಲಕ 850 ರೂಪಾಯಿಯನ್ನು ಪೂರ್ಣಿಮಾ ಕಲೆಕ್ಷನ್‌ಗೆ ಪಾವತಿಸಿದ್ದರು. ಈ ವೇಳೆ ಸೀರೆ ಪಲ್ಲವಿ ಅವರ ಕೈ ತಲುಪುವ ದಿನಾಂಕವನ್ನು ಕೂಡ ನೀಡಲಾಗಿತ್ತು.

ಆದರೆ ಹಲವು ದಿನಗಳು ಕಳೆದರೂ ಮಾರಾಟಗಾರರು ಸೀರೆಯನ್ನು ಪಲ್ಲವಿ ಅವರ ಮನೆಯ ವಿಳಾಸಕ್ಕೆ ಕಳುಹಿಸಲಿರಲಿಲ್ಲ. ಅಲ್ಲದೇ ಪಾವತಿಸಿರುವ ಹಣವನ್ನು ಕೂಡ ವಾಪಸ್ ಕಳುಹಿಸಿಲ್ಲ. ಹೀಗಾಗಿ ಸೀರೆ ಬರುವ ಬಗ್ಗೆ ವಿಚಾರಿಸಲು ಕರೆ ಹಾಗೂ ಮೇಸೆಜ್ ಮಾಡಿದರೂ ವಂಚಕರು ಸ್ಪಂದಿಸದೇ ನಿರ್ಲಕ್ಷಿಸಿದ್ದಾರೆ. ಇದರಿಂದ ಅಧಿಕಾರಿ ಪಲ್ಲವಿ ಅವರಿಗೆ ತಮಗೆ ವಂಚನೆ ಆಗಿರುವುದು ತಿಳಿದು ಬಂದಿದೆ. ಈ ಬಗ್ಗೆ ದೂರಿನಲ್ಲಿ ಸವಿವರವಾಗಿ ತಿಳಿಸಲಾಗಿದೆ.
ಅಲ್ಲದೇ ಈ ವಿಡಿಯೋದಲ್ಲಿ ಬಂದ ಜಾಹೀರಾತಿನಿಂದ ತನಗೆ ಮಾತ್ರವಲ್ಲದೆ, ಹಲವರಿಗೂ ಮೋಸ ಮಾಡಿರುವ ಅನುಮಾನವಿದೆ. ಹೀಗಾಗಿ ಕೂಡಲೇ ಸಂಬಂಧಪಟ್ಟ ವ್ಯಕ್ತಿಗಳನ್ನು ಹಿಡಿದು ವಿಚಾರಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಹಿಳಾ ಐಎಎಸ್ ಅಧಿಕಾರಿ ಪಲ್ಲವಿ ಅಕುರಾತಿ ದೂರಿನಲ್ಲಿ ತಿಳಿಸಿದ್ದಾರೆ.












Click it and Unblock the Notifications