ಮೆಟ್ರೋ ನಿಲ್ದಾಣದ ಬಳಿಯೇ ಕುಸಿದು ಬಿದ್ದ ರಸ್ತೆ, ಎಲ್ಲಿ ಗೊತ್ತಾ?
'ನಮ್ಮ ಮೆಟ್ರೋ' ಈಗ ಬ್ರ್ಯಾಂಡ್ ಆಗಿ ಬೆಳೆದಿದ್ದು, ದೇಶದಲ್ಲೇ ಅತ್ಯುತ್ತಮ ಸೇವೆ ನೀಡುವ ಸಂಸ್ಥೆಗಳಲ್ಲಿ ಒಂದಾಗಿದೆ. ಆದರೂ ಆಗಾಗ ಕೆಲವು ಅನಗತ್ಯ ಕಾರಣಕ್ಕೆ ಬೆಂಗಳೂರಿನ ಹೆಮ್ಮೆ 'ನಮ್ಮ ಮೆಟ್ರೋ' ಸುದ್ದಿಯಲ್ಲಿ ಇರುತ್ತದೆ. ಈಗ ಮೆಟ್ರೋ ಸಂಸ್ಥೆ ತನ್ನದಲ್ಲದ ತಪ್ಪಿಗೂ ಸುದ್ದಿಯಾಗಿದೆ. ಅದರಲ್ಲೂ ಮೆಟ್ರೋ ನಿಲ್ದಾಣದ ಬಳಿಯೇ ಗುಂಡಿ ಬಿದ್ದು, ರಸ್ತೆ ದೊಡ್ಡ ಪ್ರಮಾಣದಲ್ಲಿ ಕುಸಿತವಾಗಿ ಸಂಚಲನ ಸೃಷ್ಟಿಯಾಗಿದೆ.
ಅಂದಹಾಗೆ ಬೆಂಗಳೂರಿನ ನಾಗಸಂದ್ರದ ಸ್ಟೇಷನ್ ಬಳಿ ಪ್ರವೇಶ ದ್ವಾರದ ಸಮೀಪವೇ ರಸ್ತೆ ಕುಸಿತವಾಗಿ ದೊಡ್ಡ ಗುಂಡಿ ಬಿದ್ದಿದೆ. ಕೆಲವು ದಿನಗಳ ಹಿಂದೆ ಈ ರಸ್ತೆಯಲ್ಲಿ ಭಾರಿ ವಾಹನ ಸಂಚಾರ ಮಾಡುವಾಗ, ಈ ರೀತಿಯಾಗಿ ದೊಡ್ಡ ಗುಂಡಿ ಬಿದ್ದಿತ್ತು ಎನ್ನಲಾಗಿದೆ. ಆದರೂ ಗುಂಡಿ ಮುಚ್ಚಬೇಕಾದ ಅಧಿಕಾರಿಗಳು ಗುಂಡಿಯ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರಿಸಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಇದರ ಪರಿಣಾಮ ಇದೀಗ ಈ ರಸ್ತೆಯ ಸಮೀಪ ಓಡಾಡುವ ಜನರಿಗೆ ಮತ್ತು ವಾಹನ ಸವಾರರಿಗೆ ಭಾರಿ ಸಮಸ್ಯೆ ಎದುರಾಗುತ್ತಿದೆ.

ಕಲ್ಲು ಇಟ್ಟು ಸುಮ್ಮನಾದ ಅಧಿಕಾರಿಗಳು!
ಅಲ್ಲ ಮೆಟ್ರೋ ಸ್ಟೇಷನ್ ಒಂದರ ಬಳಿ ದೊಡ್ಡ ಗುಂಡಿ ಬಿದ್ದು, ವಾಹನ ಸವಾರರು ಮತ್ತೆ ಸ್ಥಳೀಯರು ಪರದಾಡುವ ಸಮಯದಲ್ಲಿ ಅದನ್ನ ಆದಷ್ಟು ಬೇಗ ಮುಚ್ಚಿ ಜನರಿಗೆ ಅನುಕೂಲ ಮಾಡಿಕೊಡುವ ಬದಲು, ಇದೀಗ ಮೆಟ್ರೋ ಸ್ಟೇಷನ್ ಬಳಿ ಗುಂಡಿ ಬಿದ್ದಿರುವ ಜಾಗದ ಸುತ್ತಲೂ ಕಲ್ಲು ಇಟ್ಟು ದಾರ ಕಟ್ಟಲಾಗಿದೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಜನರು ಬೇಸರ ಹೊರಹಾಕಿದ್ದಾರೆ. ಅಲ್ಲದೆ ಜಲಮಂಡಳಿ ವಿರುದ್ಧವೂ ಆಕ್ರೋಶ ಮೊಳಗಿದ್ದು ಆ ಬಗ್ಗೆ ಮಾಹಿತಿ ಮುಂದೆ ಇದೆ ಓದಿ.
ಜಲಮಂಡಳಿ ಅಧಿಕಾರಿಗಳ ಎಡವಟ್ಟು?
ಇನ್ನು ಈ ಸಮಸ್ಯೆಯಲ್ಲಿ ಬೆಂಗಳೂರು ಜಲಮಂಡಳಿ ಪಾಲು ಕೂಡ ಇದೆ ಅಂತಿದ್ದಾರೆ ಜನ ಯಾಕಂದ್ರೆ, ನೀರಿನ ಪೈಪ್ ಅಳವಡಿಸಲು ಖುದ್ದು ಜಲಮಂಡಳಿ ಇಲ್ಲಿ ಗುಂಡಿ ತೆಗೆದಿತ್ತು. ಆದರೆ ಕಾಮಗಾರಿ ಮುಗಿಸಿದ ನಂತರ, ಗುಂಡಿಯನ್ನ ಸರಿಯಾಗಿ ಮುಚ್ಚದ ಕಾರಣ ಇದೀಗ ಹೀಗೆ ಸಮಸ್ಯೆ ಆಗಿದೆ ಅಂತಾ ಜನರು ಆರೋಪ ಮಾಡುತ್ತಿದ್ದಾರೆ. ಸುಮಾರು 3 ಅಡಿಗಳಷ್ಟು ಆಳದ ಗುಂಡಿ ಬಿದ್ದಿದೆ ಎನ್ನಲಾಗಿದೆ. ಹೀಗಾಗಿ ಅಧಿಕಾರಿಗಳು ಈಗಲಾದರೂ ಅಲರ್ಟ್ ಆಗಿ ಸಮಸ್ಯೆ ಬಗೆಹರಿಸುತ್ತಾರಾ? ಕಾದು ನೋಡಬೇಕಿದೆ.












Click it and Unblock the Notifications