BREAKING: ಮಣ್ಣಿನಲ್ಲಿ ಜೀವಂತ ಹೂತಿದ್ದ ಗಂಡು ಮಗು ಪತ್ತೆ!, ಬದುಕಿದ ಕಂದಮ್ಮ...
ಬೆಂಗಳೂರು, ಸೆಪ್ಟಂಬರ್ 30: ಮಕ್ಕಳಿಲ್ಲ...ಮಕ್ಕಳಿಲ್ಲ... ಎಂದು ಕೊರಗುವ, ಕಂಡ ಕಂಡ ದೇವರಿಗೆ ಹರಕೆ ಹೊತ್ತು ಮಕ್ಕಳು ಬೇಕೆನ್ನುವವರನ್ನು, ಮಕ್ಕಳಿಲ್ಲ ಬದುಕು ಕಳೆಯುವವರನ್ನು ನಾವು ನೋಡಿದ್ದೇವೆ. ಆದರೆ ಬೆಂಗಳೂರಿನ ಸಮೀಪ ನಿರ್ಜನ ಪ್ರದೇಶದಲ್ಲಿ ಹುಟ್ಟಿದ ಒಂದೇ ದಿನಕ್ಕೆ ಹಸಿಗೂಸನ್ನು (ಮಗು) ಜೀವಂತವಾಗಿ ಮಣ್ಣಲ್ಲಿ ಹೂತಿಟ್ಟು ಪಾಪಿಗಳು ಪರಾರಿಯಾದ ಅಮಾನವೀಯ ಘಟನೆ ನಡೆದಿದೆ.
ಹೌದು, ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಕತ್ರಿಗುಪ್ಪೆ ದಿನ್ನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ನೀಲಗಿರಿಯ ತೋಪಿನಲ್ಲಿ ನಿರ್ಜನ ಪ್ರದೇಶದಲ್ಲಿ ಮಗುವನ್ನು ಜೀವಂತವಾಗಿ ಹೂತು ಹಾಕಲಾಗಿದೆ. ಇಂದು ಸೋಮವಾರ (ಸೆಪ್ಟಂಬರ್ 30) ಆಟೋ ಚಾಲಕರು ಬಹಿರ್ದೆಸೆಗೆ ತೆರಳಿದ್ದ ವೇಳೆ ಮಗು ಅಳುವ ಶಬ್ದ ಕೇಳಿ ವಿಷಯ ಗೊತ್ತಾಗಿದೆ.

ಕೂಡಲೇ ಮಗುವನ್ನು ರಕ್ಷಿಸಿದ ಸ್ಥಳೀಯರು ಮಕ್ಕಳ ರಕ್ಷಣಾ ವೇದಿಕೆಗೆ ಹಾಗೂ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಲಾಗಿದೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ಮಗು ಜೀವಂತವಾಗಿ ಸಿಕ್ಕಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮಗುವಿಗೆ ಈ ಗತಿ ತಂದಿಟ್ಟವರಿಗೆ ಶಿಕ್ಷೆ ಆಗಲಿ
ಹುಟ್ಟಿದ ಒಂದೇ ದಿನದ ಕಂದಮ್ಮನಿಗೆ ಈ ಗತಿ ತಂದಿಟ್ಟ ಪಾಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಲಾಗುತ್ತಿದೆ. ಮಗು ಬೇಕು ಎಂದುಕೊಂಡ ಅದೇಷ್ಟೋ ದಂಪತಿಗಳಿಗೆ ಮಕ್ಕಳಿಲ್ಲದ ಕೊರಗಿನಲ್ಲಿ ಜೀವನ ಕಳೆಯುತ್ತಾರೆ. ಆದರೆ ಜೀವಂತವಾಗಿ ಮಣ್ಣಲ್ಲಿ ಮಗು ಹೂತ ಪಾಪಿಗಳಿಗೆ ದೇವರು ಕರುಣಿಸಿದರೂ ಇಂಥ ಹೇಯ ಕೃತ್ಯ ಮಾಡಿದ್ದಾರೆ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.
ಮಕ್ಕಳ ರಕ್ಷಣಾ ವೇದಿಕೆ ಹೇಳುವುದೇನು?
ಸದ್ಯ ಪ್ರಕರಣವು ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಸ್ಥಳೀಯರು ದೂರು ದಾಖಲಿಸಿದ್ದಾರೆ. ಮಗುವನ್ನು ಮಣ್ಣಲ್ಲಿ ಹೂತು ಹಾಕಿದ್ದ ಪರಿಣಾಮ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದೆ, ಚಿಕ್ಕಪುಟ್ಟ ಗಾಯಗಳಾಗಿದ್ದು, ಮಕ್ಕಳ ಆಸ್ಪತ್ರೆಗೆ ಸೇರಿಸಲಾಗುವುದು ಎಂದು ಮಕ್ಕಳ ರಕ್ಷಣಾ ವೇದಿಕೆ ಮುಖ್ಯಸ್ಥೆ ಆಶಾ ಎಂಬವವರು ತಿಳಿಸಿದ್ದಾರೆ.
ಬೆಳಗ್ಗೆ 7 ಗಂಟೆಗೆ ಆಟೋ ಚಾಲಕರು ನೀಲಗಿರಿ ತೋಪಿನಲ್ಲಿ ಬಹಿರ್ದೆಸೆಗೆ ಹೋಗಾಗ ಘಟನೆ ಬೆಳಕಿಗೆ ಬಂದಿದೆ. ಪೊಲೀಸರಿಗೆ ದೂರು ನೀಡಲಿದ್ದೇವೆ. ಇಂತಹ ಘಟನೆಗೆ ಕಾರಣವಾದವರನ್ನು ಹುಡುಕಿಸಿ ತಕ್ಕ ಶಿಕ್ಷೆ ಕೊಡಿಸುವ ಕೆಲಸವಾಗುತ್ತದೆ. ಇದೊಂದು ನಡೆಯಬಾರದ ಅಮಾನವೀಯ ಘಟನೆಯಾಗಿದ್ದು, ಸಮಾಜವೇ ತಲೆ ತಗ್ಗಿಸುವ ಪ್ರಕರಣ ಇದಾಗಿದೆ ಎಂದು ಆಶಾ ಅವರು ಕಳವಳ ವ್ಯಕ್ತಪಡಿಸಿದ್ದಾರೆ.












Click it and Unblock the Notifications