ಸುಪ್ರೀಂಕೋರ್ಟ್ ಘಟನೆಗೆ ಪ್ರಧಾನಿ ವಿಳಂಬ ಪ್ರತಿಕ್ರಿಯೆ: ರಾಮಲಿಂಗಾ ರೆಡ್ಡಿ ಕಿಡಿ
ಬೆಂಗಳೂರು, ಅಕ್ಟೋಬರ್ 8: ವಿದೇಶಿ ನಾಯಕರ ಜನ್ಮದಿನಕ್ಕೆ ಮತ್ತು ಇತರೇ ವಿಚಾರಗಳಿಗೆ ಕ್ಷಣಮಾತ್ರದಲ್ಲಿ ಟ್ವೀಟ್ ಮಾಡುವ ಪ್ರಧಾನಿ ನರೇಂದ್ರ ಮೋದಿಯವರಿಗೆ, ನ್ಯಾಯಾಂಗದ ಮೇಲಿನ ಈ ಪ್ರಹಾರವನ್ನು ಖಂಡಿಸಲು ಇಡೀ ದಿನವೇ ಬೇಕಾಯಿತೇ? ಎಂದು ಕರ್ನಾಟಕ ರಾಜ್ಯ ಮುಜರಾಯಿ ಮತ್ತು ಸಾರಿಗೆ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ದೂರಿದರು.
ಸುಪ್ರೀಂ ಕೋರ್ಟ್ ಹಾಲ್‌ನಲ್ಲಿಯೇ ಮುಖ್ಯ ನ್ಯಾಯಮುರ್ತಿ ಬಿ.ಆರ್. ಗವಾಯಿ ಅವರತ್ತ ಹಿರಿಯ ವಕೀಲರೊಬ್ಬರು ಶೂ ಎಸೆದ ಅಹಿಕತರ ಘಟನೆಯೊಂದು ನಡೆದಿತ್ತು. ಈ ಘಟನೆಗೆ ಇಡೀ ದೇಶವೇ ಖಂಡನೆ ವ್ಯಕ್ತಪಡಿಸಿತ್ತು. ಕೆಲವರು ಪರ ವಿರೋಧ ಚರ್ಚೆ ಸಹ ಮಾಡಿದ್ದರು. ಇದೇ ವಿಚಾರ ಖಂಡಿಸಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದರು. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ತಡವಾಗಿ ಪ್ರತಿಕ್ರಿಯಿಸಿದರು ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿರುವ ಸಾರಿಗೆ ಸಚಿವರು, ಸಂವಿಧಾನದ ಹೃದಯದಂತಿರುವ ನ್ಯಾಯಾಂಗದ ಮುಖ್ಯಸ್ಥರ ಮೇಲೆ ಹಲ್ಲೆಯಾದಾಗ, ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಆಕ್ರೋಶದ ಕಟ್ಟೆಯೊಡೆಯಲು ತೆಗೆದುಕೊಂಡ ಸಮಯ ಬರೋಬ್ಬರಿ 9 ಗಂಟೆಗಳು! ಎಂದು ವ್ಯಂಗ್ಯವಾಡಿದ್ದಾರೆ.
"ಪ್ರತಿಯೊಬ್ಬ ಭಾರತೀಯನೂ ಕೆರಳಿದ್ದಾನೆ" ಎಂಬುದು ಪ್ರಧಾನಿಯವರ ಮಾತು. ಆದರೆ, ಆ 'ಪ್ರತಿಯೊಬ್ಬರಲ್ಲಿ' ದೇಶದ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಗೃಹಸಚಿವರು, ದೇಶದ ಆಡಳಿತ ನಡೆಸುವ ಕೇಂದ್ರ ಸಚಿವರು, ಮತ್ತು ಅವರದ್ದೇ ಆದ ಬಿಜೆಪಿ ಪಕ್ಷದ ಕೋಟ್ಯಂತರ ಕಾರ್ಯಕರ್ತರು ಸೇರಿಲ್ಲವೇ? ಅವರೆಲ್ಲರ ಮೌನ, ಯಾರಿಗೆ ನೀಡುತ್ತಿರುವ ಸಮ್ಮತಿ? ಎಂದು ಪ್ರಶ್ನೆ ಮಾಡಿದ್ದಾರೆ.
ಒಂದೆಡೆ ಪ್ರಧಾನಿಗಳು ತಡವಾಗಿ ಕೆರಳಿದರೆ, ಇನ್ನೊಂದೆಡೆ ಅವರದ್ದೇ ವಿಚಾರಧಾರೆಯ ಬೆಂಬಲಿಗರು ಈ ಹೇಯ ಕೃತ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ. ಈ ಸಂಭ್ರಮಾಚರಣೆಯ ಬಗ್ಗೆ ಪ್ರಧಾನಿಯವರು ಪ್ರತಿನಿಧಿಸುವ ಪಕ್ಷದ ನಾಯಕರು ತುಟಿ ಬಿಚ್ಚದಿರುವುದು, ಈ ಕೃತ್ಯಕ್ಕೆ ನೀಡುತ್ತಿರುವ ಪರೋಕ್ಷ ಪ್ರೋತ್ಸಾಹವಲ್ಲವೇ?
ಇದು ಕೇವಲ ವ್ಯಕ್ತಿಯೊಬ್ಬರ ಮೇಲಿನ ದಾಳಿಯಲ್ಲ. ಇದು ಪ್ರಜಾಪ್ರಭುತ್ವದ ಅಡಿಪಾಯವಾದ ನ್ಯಾಯಾಂಗದ ಸ್ವಾತಂತ್ರ್ಯದ ಮೇಲಿನ ವ್ಯವಸ್ಥಿತ ದಾಳಿ. "ಮತ ಕಳ್ಳತನ'ದಂತಹ ಆರೋಪಗಳಿಗೆ ಬೀದಿಗಿಳಿದು ಹೋರಾಡುವವರು, ಸಂವಿಧಾನದ ಘನತೆಯನ್ನೇ ಪ್ರಶ್ನಿಸುವಾಗ "ಕುಂಭಕರ್ಣ ನಿದ್ರೆ'ಗೆ ಜಾರಿರುವುದರ ಹಿಂದಿನ ಮರ್ಮವೇನು? ನ್ಯಾಯಾಲಯದ ಪಾವಿತ್ರ್ಯತೆಗಿಂತ ರಾಜಕೀಯ ಲಾಭವೇ ಬಿಜೆಪಿಗೆ ಮುಖ್ಯವಾಯಿತೇ? ಎಂದು ಕೆರಳಿದ್ದಾರೆ.
ಪ್ರಧಾನಿಯವರೇ, ನಿಮ್ಮ ನಿಜವಾದ ಆಕ್ರೋಶ ಇರಬೇಕಾಗಿದ್ದು ಈ ದಾಳಿಯ ಮೇಲಲ್ಲ. ಬದಲಾಗಿ, ಇಂತಹ ದಾಳಿಗಳನ್ನು ಮಾಡಲು ಪ್ರೇರೇಪಿಸುವ, ಸಂಭ್ರಮಿಸುವ ಮತ್ತು ಪೋಷಿಸುವ ನಿಮ್ಮದೇ ವಿಚಾರಧಾರೆಯ ವಿರುದ್ಧ. ಇಲ್ಲವಾದರೆ, ನಿಮ್ಮ 9 ಗಂಟೆಗಳ ತಡವಾದ ಖಂಡನೆ, ಕೇವಲ ರಾಜಕೀಯ ನಾಟಕವಾಗಿ ಉಳಿಯುತ್ತದೆ ಎಂದು ಅವರು ಪ್ರಧಾನಿ ವಿರುದ್ಧ ಕಿಡಿ ಕಾರಿದ್ದಾರೆ.











Click it and Unblock the Notifications