ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೋಡೆ ಕೊರೆದು ಬಚ್ಚಿಟ್ಟಿದ್ದ ಶವ: ಐದು ವರ್ಷಗಳ ಬಳಿಕ ತಾಯಿ-ಮಗ ಸೆರೆ

|
Google Oneindia Kannada News

ಬೆಂಗಳೂರು, ಅ.7: ಐದು ವರ್ಷಗಳ ಹಿಂದೆ ರಾಜಧಾನಿಯಲ್ಲಿ ಬೆಚ್ಚಿ ಬೀಳಿಸಿದ್ದ ವೃದ್ದೆ ಶಾಂತಕುಮಾರಿ ಕೊಲೆ ಪ್ರಕರಣ ಕೊನೆಗೂ ಬೇಧಿಸಿರುವ ಕೆಂಗೇರಿ ಪೊಲೀಸರು ತಾಯಿ-ಮಗನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣ ಬೇಧಿಸುವ ಮುನ್ನ ಆರೋಪಿಗಳ ಬಂಧನಕ್ಕೆ ಪೊಲೀಸರು ವಿವಿಧ ತಂಡ ರಚಿಸಿ ತನಿಖೆ ನಡೆಸಿದರೂ ಪ್ರಕರಣದ ಮೂರನೇ ಆರೋಪಿ ಹೊರತುಪಡಿಸಿದರೆ ಮುಖ್ಯ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದರು. ತಾರ್ಕಿಕ ಅಂತ್ಯ ಕೊಡದೆ ದೂಳು ಹಿಡಿದಿದ್ದ ಪ್ರಕರಣವನ್ನ ಮತ್ತೆ ಸವಾಲಾಗಿ ಸ್ವೀಕರಿಸಿದ ಕೆಂಗೇರಿ‌ ಠಾಣೆಯ ಇನ್‌ಸ್ಪೆಕ್ಟರ್ ವಸಂತ್ ನೇತೃತ್ವದ ತಂಡ ತಾಯಿ ಕೊಲೆಗೈದ ಆರೋಪದಡಿ ಶಶಿಕಲಾ (46) ಮಗ ಸಂಜಯ್ (26) ಎಂಬುವರನ್ನು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಬಂಧಿಸಿ ನಗರಕ್ಕೆ‌ ಕರೆತಂದಿದೆ.

ಐದು ವರ್ಷಗಳ ಹಿಂದೆ ನಡೆದಿದ್ದ ವೃದ್ದೆಯ ಹತ್ಯೆ

ಕೆಂಗೇರಿ ಸ್ಯಾಟಲೈಟ್ ಬಡಾವಣೆಯ ಮನೆಯೊಂದರಲ್ಲಿ ಹತ್ಯೆಯಾದ 69 ವರ್ಷದ ಶಾಂತಕುಮಾರಿ ಜೊತೆಗೆ ಮಗಳು ಶಶಿಕಲಾ ಹಾಗೂ‌ ಮೊಮ್ಮಗ ಸಂಜಯ್ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಶಿಸ್ತು ಹಾಗೂ ಮಡಿವಂತಿಕೆಯನ್ನು ಶಾಂತಕುಮಾರಿ ಬೆಳೆಸಿಕೊಂಡಿದ್ದರು. ಶಶಿಕಲಾ ಗೃಹಿಣಿಯಾಗಿದ್ದು‌ ಈಕೆಯ ಗಂಡ ಹಲವು ವರ್ಷಗಳ ಹಿಂದೆ ಮೃತರಾಗಿದ್ದರು. ಪುತ್ರ ಸಂಜಯ್ ಖಾಸಗಿ ಕಾಲೇಜಿನಲ್ಲಿ ಏರೊನಾಟಿಕಲ್ ಇಂಜಿನಿಯರ್ ಮೂರನೇ ಸೆಮಿಸ್ಟರ್ ವಿದ್ಯಾರ್ಥಿಯಾಗಿದ್ದ. ಪ್ರತಿಭಾವಂತನಾಗಿದ್ದ ಈತ ಎಸ್ಸೆಸ್ಸೆಲಿ ಹಾಗೂ ಪಿಯುಸಿಯಲ್ಲಿ ಶೇ.90ಕ್ಕೂ ಹೆಚ್ಚು ಅಂಕ ಪಡೆದಿದ್ದ. ಓದುವ ವಿಷಯದಲ್ಲಿ ಮುಂದಿದ್ದ ಸಂಜಯ್ ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ಮಡಿ-ಮೈಲಿಗೆ ಸಂಪ್ರದಾಯ ಬೆಳೆಸಿಕೊಂಡಿದ್ದ ವೃದ್ದೆ ಶಾಂತಕುಮಾರಿ 2016 ಆಗಸ್ಟ್ ನಲ್ಲಿ ಕಾಲೇಜು ಮುಗಿಸಿ ಸಂಜಯ್ ಮನೆಗೆ ಬಂದು ಗೋಬಿಮಂಚೂರಿ ತಂದುಕೊಟ್ಟಿದ್ದ. ಇದನ್ನು ನಿರಾಕರಿಸಿ ಬೈದು ಮೊಮ್ಮಗನ ಮೇಲೆ ಬಿಸಾಕಿದ್ದರು. ಇದರಿಂದ ಅಸಮಾಧಾನಗೊಂಡ ಸಂಜಯ್ ಅಡುಗೆಮನೆಯಲ್ಲಿದ್ದ ಲಟ್ಟಣಿಗೆಯಿಂದ ತಲೆಗೆ ಹೊಡೆದಿದ್ದ. ತೀವ್ರ ರಕ್ತಸ್ರಾವವಾಗಿ ಮನೆಯಲ್ಲಿ ಶಾಂತಕುಮಾರಿ ಮೃತಪಟ್ಟಿದ್ದಳು.

Bengaluru : 75 year old Shanthakumari murder mystery: Police arrested Daughter and Grandson after 5 years

ಶವವನ್ನ ಗೋಡೆಯಲ್ಲಿ ಹೂತು ಹಾಕಿದ್ದ ತಾಯಿ-ಮಗ

ತನ್ನ ತಾಯಿಯನ್ನ ಮಗ ಸಂಜಯ್ ಕೊಲೆಗೈದ ವಿಚಾರ ಅರಿತುಕೊಂಡ ಶಶಿಕಲಾ ಪೊಲೀಸರಿಗೆ ಮಾಹಿತಿ ನೀಡಲು ಮುಂದಾಗಿದ್ದಳು. ಪೊಲೀಸರಿಗೆ ತಿಳಿಸಿದರೆ ನಾನು ಜೈಲಿಗೆ ಹೋಗುವೆ‌.. ನಿನ್ನ ಮಗನ ಭವಿಷ್ಯವನ್ನ ನೀನೇ ಹಾಳು ಮಾಡುತ್ತೀಯಾ ಎಂದು ಪೊಲೀಸರಿಗೆ ಹೇಳದಂತೆ ಸಂಜಯ್ ಗೋಗರಿದಿದ್ದ. ‌ಇದಕ್ಕೆ ಶಶಿಕಲಾ ಒಪ್ಪಿಕೊಂಡಿದ್ದಳು. ಮನೆಯಿಂದ ಶವ ಹೊರತೆಗೆಯುವುದು ಅಸಾಧ್ಯವೆಂದು ನಿರ್ಧರಿಸಿ ಸ್ನೇಹಿತ ಕುಂಬಳಗೋಡಿನ ನಿವಾಸಿ ನಂದೀಶ್‌ಗೆ ವಿಷಯ ತಿಳಿಸಿ ಮನೆಗೆ ಸಂಜಯ್ ಕರೆಯಿಸಿಕೊಂಡಿದ್ದ. ಮೂವರು ಒಟ್ಟುಗೂಡಿ ಮನೆಯ ಕಬೋರ್ಡ್‌ನಲ್ಲಿ ಶವ ಬಚ್ಚಿಟ್ಟಿದ್ದರು. ವಾಸನೆ ಬರದಿರಲು ಕೆಮಿಕಲ್ಸ್ ಹಾಕಿದ್ದರು. ಬಳಿಕ ಮನೆಯೊಳಗೆ ಗೋಡೆ ಕೊರೆದು ಶವವಿಟ್ಟು ಸಿಮೆಂಟ್ ನಿಂದ ಪ್ಲಾಸ್ಟರಿಂಗ್ ಮಾಡಿ ಬಣ್ಣ ಬಳಿದಿದ್ದರು. ಕೆಲ ತಿಂಗಳ ಬಳಿಕ‌ ಊರಿಗೆ ಹೋಗಿಬರುವುದಾಗಿ ಹೇಳಿ ಮನೆ ಮಾಲೀಕರಿಗೆ ತಿಳಿಸಿ ಪರಾರಿಯಾಗಿದ್ದರು.

ಗೋಡೆ ಕೊರೆದಾಗ ವೃದ್ದೆಯ ಕಳೇಬರ ಪತ್ತೆ..!

ಆರು ತಿಂಗಳಾದರೂ ಊರಿಗೆ ಹೋಗಿದ್ದ ಅಮ್ಮ-ಮಗ ಮನೆಗೆ ಬಾರದೆ ಅನುಮಾನಗೊಂಡ ಮನೆ ಮಾಲೀಕರು ಮನೆ ರಿಪೇರಿ ಮಾಡಿಸಲು 2017 ಮೇ 7 ರಂದು ಮನೆಯೊಳಗೆ ಪ್ರವೇಶಿಸಿದ್ದಾರೆ. ಈ ವೇಳೆ ಹೂತುಹಾಕಿದ್ದ ಗೋಡೆ ಬಳಿ ರಕ್ತಸಿಕ್ತವಾಗಿದ್ದ ಬಿದ್ದಿದ್ದ ಸೀರೆಯನ್ನು ಗಮನಿಸಿದ್ದಾರೆ. ಮನೆಯಲ್ಲಿ ವಾಸವಾಗಿದ್ದ ವೃದ್ದೆಯೂ ಕಾಣದಿದ್ದಾಗ ಸಂಶಯಗೊಂಡು ಕೂಡಲೇ ಆಗಿನ ಇನ್ಸ್‌ಪೆಕ್ಟರ್ ಗಿರಿರಾಜ್ ಅವರ ಗಮನಕ್ಕೆ ತಂದಿದ್ದರು. ಸ್ಥಳಕ್ಕೆ ದೌಡಾಯಿಸಿ ಮನೆಯಲ್ಲಿ ಶೋಧಿಸಿದಾಗ ಸಂಜಯ್ ಬಿಟ್ಟುಹೋಗಿದ್ದ ಮೊಬೈಲ್ ಪತ್ತೆಯಾಗಿತ್ತು. ಕರೆ ವಿವರ ಪರಿಶೀಲಿಸಿದಾಗ ನಂದೀಶ್ ಮೊಬೈಲ್ ನಂಬರ್ ತಳಕುಹಾಕಿಕೊಂಡಿತ್ತು‌. ಈತನ ಜಾಡು ಹಿಡಿದ ಹೊರಟ ಪೊಲೀಸ್ ತಂಡ ನಂದೀಶ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ವೃದ್ದೆಯನ್ನ ಕೊಲೆ ಮಾಡಿ ಶವವನ್ನ ಗೋಡೆಯಲ್ಲಿ ಅವಿತಿಟ್ಟಿರುವ ಸಂಗತಿ ಬಯಲಾಗಿತ್ತು‌. ಆರೋಪಿ ಹೇಳಿಕೆ ಆಧರಿಸಿ ಗೋಡೆ ಕೊರೆದು ಪರಿಶೀಲಿಸಿದಾಗ ವೃದ್ದೆಯ ಕಳೇಬರ ಪತ್ತೆಯಾಗಿತ್ತು.

ಏರೊನಾಟಿಕಲ್ ಇಂಜಿನಿಯರ್ ಕೊಲ್ಲಾಪುರದಲ್ಲಿ ಹೊಟೇಲ್ ಸಪ್ಲೈಯರ್

ವೃದ್ಧೆಯ ಹತ್ಯೆ ನಂತರ ಬಂಧನ ಭೀತಿಯಿಂದ ತಾಯಿ-ಮಗ ಮಾಲೀಕರ ಬಳಿ‌ ಸಂಬಂಧಿಕರಿಗೆ ಹುಷಾರಿಲ್ಲ ಎಂದು ಮನೆ ತೊರೆದಿದ್ದ ಆರೋಪಿಗಳು‌ ಹುಟ್ಟೂರಾದ ಶಿವಮೊಗ್ಗದ ಸಾಗರಕ್ಕೆ ತೆರಳಿದ್ದರು. ನಂತರ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ತಲೆಮರೆಸಿಕೊಂಡಿದ್ದರು. ಸ್ಥಳೀಯ ಹೊಟೇಲ್ ವೊಂದರಲ್ಲಿ ಸಂಜಯ್ ಸಪ್ಲೈಯರ್ ಕೆಲಸ‌ ಹಾಗೂ ತಾಯಿ ಕ್ಲೀನಿಂಗ್ ಕೆಲಸ ಮಾಡಿಕೊಂಡಿದ್ದರು.. ಇತ್ತ ಕೊಲೆ‌ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸಿದರೂ ಪ್ರಯೋಜನವಾಗಿರಲಿಲ್ಲ.. ಕಾಲಕ್ರಮೇಣ ಕೊಲೆ‌ ಪ್ರಕರಣದ ಕಡತ ದೂಳು ಸೇರಿತ್ತು. ಇತ್ತೀಚೆಗೆ ಇತ್ಯರ್ಥವಾಗದ ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸಿದ್ದ ನಗರ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಆರೋಪಿಗಳನ್ನು ಪತ್ತೆ ಹಚ್ಚುವಂತೆ ಕೆಂಗೇರಿ ಪೊಲೀಸರಿಗೆ ತಾಕೀತು ಮಾಡಿದ್ದರು. ಸವಾಲಾಗಿ ಸ್ವೀಕರಿಸಿದ ಕೆಂಗೇರಿ ಪೊಲೀಸರು ತಾಂತ್ರಿಕ ಆಯಾಮದಲ್ಲಿ ತನಿಖೆ ನಡೆಸಿದಾಗ ಸಿಕ್ಕ ಸುಳಿವಿನಿಂದ ಕೊಲ್ಲಾಪುರದಲ್ಲಿ ಅಡಗಿದ್ದ ತಾಯಿ-ಮಗನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

English summary
The discovery of the decomposed body of an elderly woman, which was found stuffed in a closet on May 7 at her home in Kengeri,. The police arrested 75-year-old Shanthakumari was killed by her daughter, Shashikala and grandson Sanjay after 5 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X