ಬೆಂಗಳೂರಿನ 17 ಕಿ.ಮೀ ರಸ್ತೆ ಅಭಿವೃದ್ಧಿಗೆ 450 ಕೋಟಿ ರೂ. ವೆಚ್ಚ: ಡಿಸಿಎಂ ಡಿ.ಕೆ ಶಿವಕುಮಾರ್ ಅಪ್ಡೇಟ್ಸ್
ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಪ್ರಮುಖ ಯೋಜನೆ ಜಾರಿ ಮಾಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಬೆಂಗಳೂರಿನಲ್ಲಿ ಅತೀ ಹೆಚ್ಚು ಟ್ರಾಫಿಕ್ ಜಾಮ್ ಆಗುವ ಪ್ರದೇಶಗಳನ್ನು ಎರಡು ಹಂತದಲ್ಲಿ ಅಭಿವೃದ್ಧಿ ಮಾಡುವುದಕ್ಕೆ ಯೋಜನೆ ರೂಪಿಸಲಾಗಿದೆ. ಬೆಂಗಳೂರಿನ ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಕೃಷ್ಣರಾಜಪುರ ಮೆಟ್ರೋ ನಿಲ್ದಾಣದ ನಡುವಿನ 17 ಕಿ.ಮೀ. ಹೊರ ವರ್ತುಲ ರಸ್ತೆಯ (ORR) ಪುನರಾಭಿವೃದ್ಧಿ ಪ್ರಸ್ತಾವನೆಗೆ ಕರ್ನಾಟಕ ಸರ್ಕಾರ ಅನುಮೋದನೆ ನೀಡಿದೆ.
ಈ ಯೋಜನೆಯ ಅಂದಾಜು ವೆಚ್ಚವು 450 ಕೋಟಿ ರೂಪಾಯಿ ಆಗಿದೆ. ಇದನ್ನು ಎರಡು ಪ್ಯಾಕೇಜ್‌ಗಳಲ್ಲಿ ಅಭಿವೃದ್ಧಿಪಡಿಸುವುದಕ್ಕೆ ನಿರ್ಧರಿಸಲಾಗಿದೆ. ರಾಜ್ಯ ಸರ್ಕಾರವು ವೆಚ್ಚದ ಶೇ. 50% ಹಣವನ್ನು ಭರಿಸಲಿದ್ದು, ಇನ್ನುಳಿದ ಹಣವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪಾಲಿಕೆಗಳಾದ ಬೆಂಗಳೂರು ಪೂರ್ವ ಮತ್ತು ದಕ್ಷಿಣ ನಗರ ಪಾಲಿಕೆಗಳು ಹಂಚಿಕೊಳ್ಳಲಿವೆ ಎಂದು ಹೇಳಲಾಗಿದೆ.

ಇತ್ತೀಚೆಗೆ ಹೊರಡಿಸಲಾದ ಸರ್ಕಾರಿ ಆದೇಶದ ಪ್ರಕಾರ, ಟೆಕ್ ಕಾರಿಡಾರ್ ಯೋಜನೆಯ ಪ್ಯಾಕೇಜ್ 1ರಲ್ಲಿ 5.44 ಕಿ.ಮೀ. ಸಿಲ್ಕ್ ಬೋರ್ಡ್ - ಇಬ್ಲೂರ್ ಜಂಕ್ಷನ್ ಮಾರ್ಗವನ್ನು 143 ಕೋಟಿ ರೂಪಾಯಿ ವೆಚ್ಚದಲ್ಲಿ ಹಾಗೂ ಪ್ಯಾಕೇಜ್ 2ರಲ್ಲಿ 1.57 ಕಿ.ಮೀ. ಇಬ್ಲೂರ್ ಜಂಕ್ಷನ್ - ಕೆ.ಆರ್.ಪುರ ವಿಭಾಗವನ್ನು 307 ಕೋಟಿ ರೂಪಾಯಿ ಮೊತ್ತದ ವೆಚ್ಚದಲ್ಲಿ ವಿಭಜಿಸಲಾಗಿದೆ. ಸಿಲ್ಕ್ ಬೋರ್ಡ್ - ಕೆ.ಆರ್. ಪುರ ಮಾರ್ಗವು ಬೆಂಗಳೂರಿನ ಅತ್ಯಂತ ಜನದಟ್ಟಣೆಯ ಕಾರಿಡಾರ್‌ಗಳಲ್ಲಿ ಒಂದಾಗಿದೆ. ಅಲ್ಲದೇ ಈ ಪ್ರದೇಶವು ಬೆಂಗಳೂರಿನ ಪ್ರಮುಖ ಐಟಿ ಹಬ್‌ಗಳು ಮತ್ತು ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕವನ್ನು ಸಹ ಕಲ್ಪಿಸುತ್ತದೆ.
ಬೆಂಗಳೂರು ಹೊರ ವರ್ತುಲ ರಸ್ತೆಗಳ ಅಭಿವೃದ್ಧಿಯೊಂದಿಗೆ ಬಸ್ ಆದ್ಯತೆಯ ಲೇನ್ ರಚನೆಯು ಯೋಜನೆ ವ್ಯಾಪ್ತಿಯ ಭಾಗವಾಗಿರುತ್ತದೆ. ಈ ಹಿಂದೆ ಬಸ್ ಆದ್ಯತಾ ಪಥದಲ್ಲಿ ಅನುಸರಿಸಿದ್ದ ಮಾರ್ಗಗಳನ್ನು ಈಗ ಅನುಸರಿಸಲಾಗುವುದಿಲ್ಲ. ಬದಲಿಗೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಡಿಜಿಟಲ್ ಲೈನ್, ಬೊಲ್ಲಾರ್ಡ್‌ಗಳು ಮತ್ತು ನಿರ್ದಿಷ್ಟ ರಸ್ತೆ ಗುರುತುಗಳನ್ನು ನಿಗದಿ ಮಾಡುವುದಕ್ಕೆ ನಿರ್ಧರಿಸಲಾಗಿದೆ.
ಸಾರ್ವಜನಿಕರ ಅವಶ್ಯಕತೆಗೆ ಅನುಗುಣವಾಗಿ ಅಭಿವೃದ್ಧಿ
ಇನ್ನು ಬೆಂಗಳೂರಿನ ಹೊರ ವರ್ತುಲ ಪ್ರದೇಶದಲ್ಲಿ ಸಾರ್ವಜನಿಕರ ಅನುಕೂಲಕ್ಕೆ ಅನುಗುಣವಾಗಿ ಕೆಲವೊಂದು ಬದಲಾವಣೆಗಳನ್ನು ಮಾಡುವುದಕ್ಕೆ ನಿರ್ಧರಿಸಲಾಗಿದೆ. ಈ ಮಾರ್ಗಗಳಲ್ಲಿ ಪಾದಚಾರಿ ಮಾರ್ಗಗಳ ಪುನರ್ ನಿರ್ಮಾಣ, ಸೈಕಲ್ ಪಥಗಳ ಅಭಿವೃದ್ಧಿ, ಜಂಕ್ಷನ್‌ಗಳಲ್ಲಿ ವೈಟ್-ಟಾಪಿಂಗ್, ತಗ್ಗು ಪ್ರದೇಶಗಳಲ್ಲಿ ಪ್ರವಾಹವನ್ನು ತಗ್ಗಿಸುವ ವ್ಯವಸ್ಥೆ ಮತ್ತು ಸುಧಾರಿತ ಸಂಚಾರ-ನಿರ್ವಹಣಾ ತಂತ್ರಜ್ಞಾನಗಳ ಅಳವಡಿಕೆ ಹಾಗೂ ಸೌಂದರ್ಯೀಕರಣ ಸೇರಿದಂತೆ ಹಲವು ಬದಲಾವಣೆಗಳು ಆಗಲಿವೆ.
ದಶಪಥದ ರಸ್ತೆ
ಈ ಯೋಜನೆಯ ಭಾಗವಾಗಿ ದಶಪಥದ ರಸ್ತೆ (ಒಟ್ಟು 10 ಪಥ) ಅಭಿವೃದ್ಧಿ ಆಗಲಿದೆ. ಮೂರು ಪಥದ ಪ್ರಮುಖ ರಸ್ತೆಗಗಳು ಹಾಗೂ ಇದರೊಂದಿಗೆ ಎರಡೂ ಬದಿಗಳಲ್ಲಿ ಸರ್ವಿಸ್ ರಸ್ತೆಗಳನ್ನು ನಿರ್ಮಾಣ ಮಾಡುವುದಕ್ಕೆ ಉದ್ದೇಶಿಸಲಾಗಿದೆ. ಬೆಂಗಳೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದ್ದ ಹಾಗೂ ಯಶಸ್ವಿಯೂ ಆಗಿದ್ದ ಬಸ್ ಆದ್ಯತಾ ಪಥವನ್ನು ಪುನರ್ ಸ್ಥಾಪಿಸಲು ಸಹ ಉದ್ದೇಶಿಸಲಾಗಿದೆ. ಈ ಅಭಿವೃದ್ಧಿ ಕಾಮಗಾರಿಗಳಿಂದ ಈ ಭಾಗದಲ್ಲಿ ಟ್ರಾಫಿಕ್ ಜಾಮ್ ಕಂಟ್ರೋಲ್ ಆಗಲಿದೆ ಎಂದು ನಿರೀಕ್ಷಿಸಲಾಗಿದೆ.












Click it and Unblock the Notifications