2nd PUC Supplementary Exam 2023: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿ ಹೀಗಿದೆ ನೋಡಿ, ಇಲ್ಲಿದೆ ವಿವರ
ಬೆಂಗಳೂರು, ಮೇ, 02: ಇತ್ತೀಚೆಗಷ್ಟೇ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟ ಆಗಿತ್ತು. ನಂತರ ಈ ಪರೀಕ್ಷೆಯಲ್ಲಿ ಅನುತ್ತೀರ್ಣ ಹಾಗೂ ಕಡಿಮೆ ಅಂಕ ಗಳಿಸಿದವರು ಸೇರಿ ವಿವಿಧ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಗೆ ನೋಂದಾಯಿಸಿಕೊಳ್ಳುವುದಕ್ಕೆ ಅವಕಾಶವನ್ನು ನೀಡಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಮಂಗಳವಾರ (ಮೇ 02) ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟಿಸಲಾಗಿದೆ. ಹಾಗಾದರೆ ಸಂಪೂರ್ಣ ವಿವರವನ್ನು ಇಲ್ಲಿ ಗಮನಿಸಿ.
ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಇದೇ ಮೇ 22, 2023 ರಿಂದ ಆರಂಭಗೊಳ್ಳಲಿದ್ದು, ಜೂನ್ 2, 2023ರಂದು ಮುಕ್ತಾಯ ಆಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ಇನ್ನು ಪರೀಕ್ಷೆಯ ವೇಳಾಪಟ್ಟಿಯನ್ನು ಮಂಡಳಿಯ ಜಾಲತಾಣವಾದ https://kseab.karnataka.gov.in ನಲ್ಲಿ ಪ್ರಕಟಿಸಲಾಗಿದೆ.

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿ ವಿವರ:
| ಕ್ರಮ ಸಂಖ್ಯೆ | ದಿನಾಂಕ | ವಾರ | ವಿಷಯ |
| 1 | ಮೇ 22, 2023 | ಸೋಮವಾರ | ಕನ್ನಡ, ಅರೇಬಿಕ್ |
| 2 | ಮೇ 23, 2023 | ಮಂಗಳವಾರ | ಐಚ್ಛಿಕ ಕನ್ನಡ, ರಾಸಾಯನಶಾಸ್ತ್ರ, ಮೂಲ ಗಣಿತ |
| 3 | ಮೇ 24, 2023 | ಬುಧವಾರ | ಇಂಗ್ಲೀಷ್ |
| 4 | ಮೇ 25, 2023 | ಗುರುವಾರ | ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ |
| 5 | ಮೇ 26, 2023 | ಶುಕ್ರವಾರ | ಇತಿಹಾಸ, ಸಂಖ್ಯಾಶಾಸ್ತ್ರ |
| 6 | ಮೇ 27, 2023 | ಶನಿವಾರ | ಹಿಂದಿ |
| 7 | ಮೇ 29, 2023 | ಸೋಮವಾರ | ಭೂಗೋಳಶಾಸ್ತ್ರ, ಮನಃಶಾಸ್ತ್ರ, ಭೌತಶಾಸ್ತ್ರ |
| 8 | ಮೇ 30, 2023 | ಮಂಗಳವಾರ | ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಶಿಕ್ಷಣ ಶಾಸ್ತ್ರ, ಗೃಹ ವಿಜ್ಞಾನ |
| 9 | ಮೇ 31, 2023 | ಬುಧವಾರ | ರಾಜ್ಯಶಾಸ್ತ್ರ, ಗಣಿತ ಶಾಸ್ತ್ರ |
| 10 | ಜೂನ್ 01, 2023 | ಗುರುವಾರ | ತರ್ಕಶಾಸ್ತ್ರ, ಹಿಂದೂಸ್ತಾನಿ ಸಂಗೀತ, ವ್ಯವಹಾರ ಅಧ್ಯಯನ |
| 11 | ಜೂನ್ 02, 2023 | ಶುಕ್ರವಾರ | ಅರ್ಥಶಾಸ್ತ್ರ, ಜೀವಶಾಸ್ತ್ರ |
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ
ಇನ್ನು ಇತ್ತೀಚೆಗಷ್ಟೇ 2022-23ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿತ್ತು. ಈ ಬಾರಿಯೂ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಮೊದಲ ಅಗ್ರ ಸ್ಥಾನ ಪಡೆದಿದ್ದು, ಎರಡನೇ ಮತ್ತು ಮೂರನೇ ಸ್ಥಾನವನ್ನು ಉಡುಪಿ ಮತ್ತು ಕೊಡಗು ಪಡೆದುಕೊಂಡಿವೆ.
ಈ ಬಾರಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವಾಣಿಜ್ಯ ವಿಭಾಗದಲ್ಲಿ ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ಅನನ್ಯ ಕೆಎ, ವಿಜ್ಞಾನ ವಿಭಾಗದಲ್ಲಿ ಕೋಲಾರದ ಶ್ರೀನಿವಾಸಪುರದಲ್ಲಿರುವ ಜ್ಞಾನಗಂಗೋತ್ರಿ ಕಾಲೇಜಿನ ಕೌಶಿಕ್ ಎಸ್ ಮತ್ತುಬೆಂಗಳೂರಿನ ಆರ್‌ವಿ ಪಿಯು ಕಾಲೇಜಿನ ಸುರಭಿ ಎಸ್ ಹಾಗೂ ಕಲಾ ವಿಭಾಗದಲ್ಲಿ ಜಯನಗರದ ಎನ್‌ಎಂಕೆಆರ್‌ವಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ತಬಸುಮ್ ಶೇಕ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಈ ಬಾರಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ, ಕಲಾ ವಿಭಾಗದಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಪಡೆದಿರುವ ವಿದ್ಯಾರ್ಥಿಯೇ ಮುಖ್ಯ ಆಕರ್ಷಣೆ ಆಗಿದ್ದಾನೆ. ಆತನ ಸಾಧನೆಗೆ, ಕಷ್ಟವನ್ನು ಮೀರಿದ ಆತನ ಪರಿಶ್ರಮಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿದ್ಯೆಗೆ ಬಡತನ, ಸಿರಿತನದ ಬೇಧಭಾವ ಇಲ್ಲ ಎನ್ನುವುದನ್ನು ಹುಣಸಗಿ ತಾಲೂಕಿನ ಮನ್ನಾಲಾಲ್ ತಾಂಡದ ರಾಹುಲ್ ರಾಥೋಡ್ ನಿರೂಪಿಸಿದ್ದಾನೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮನ್ನಾಲಾಲ್ ತಾಂಡದ ಮೋತಿಲಾಲ್ - ಸವಿತಾ ರಾಥೋಡ್ ದಂಪತಿಯ ಮಗ, ಪರಿಶಿಷ್ಟ ಜಾತಿಯ ಬಂಜಾರ ಸಮುದಾಯದ ರಾಹುಲ್ ರಾಥೋಡ್ ಸಾಧನೆಯನ್ನು ಇಂದು ರಾಜ್ಯದಲ್ಲಿ ಎಲ್ಲರೂ ಕೊಂಡಾಡುತ್ತಿದ್ದಾರೆ.
ರಾಹುಲ್ ರಾಥೋಡ್, ವಿಜಯಪುರದ ತಾಳಿಕೋಟೆ ಪಿಯುಸಿ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ನಲ್ಲಿದ್ದು ಓದುತ್ತಿದ್ದ. ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕನ್ನಡದಲ್ಲಿ 100ಕ್ಕೆ 97 ಅಂಕ ಪಡೆದಿದ್ದು, ಎರಡನೇ ಭಾಷೆಯಾಗಿ ಆಯ್ಕೆ ಮಾಡಿಕೊಂಡಿದ್ದ ಸಂಸ್ಕೃತದಲ್ಲಿ 100ಕ್ಕೆ 98 ಅಂಕ ಪಡೆದಿದ್ದಾನೆ. ಒಟ್ಟು 600ಕ್ಕೆ 592 ಅಂಕಗಳನ್ನು ಪಡೆದು ಕಲಾ ವಿಭಾಗದಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಪಡೆದಿದ್ದಾನೆ.
ಪಿಯುಸಿ ಫಲಿತಾಂಶ ಬರುತ್ತಿದ್ದಂತೆ ರ್ಯಾಂಕ್ ಪಡೆದ ವಿದ್ಯಾರ್ಥಿಗಳು, ಅವರ ಪೋಷಕರು ಸಿಹಿ ತಿನಿಸಿ ಸಂಭ್ರಮಿಸುತ್ತಿದ್ದರೆ, ರಾಹುಲ್ ರಾಥೋಡ್ ಮಾತ್ರ ಅಂದಿನ ತುತ್ತಿನ ಚೀಲ ತುಂಬಿಸಿಕೊಳ್ಳಲು ತಂದೆ-ತಾಯಿಯೊಡನೆ ರಸ್ತೆ ಕಾಮಾಗಾರಿ ಕೆಲಸದಲ್ಲಿ ತೊಡಗಿದ್ದ. ಫಲಿತಾಂಶ ಬರುವ ಹೊತ್ತಿಗೆ ರಾಹುಲ್ ರಾಥೋಡ್ ಮಹಾರಾಷ್ಟ್ರದ ರತ್ನಾಗಿರಿಯಲ್ಲಿ ಕೆಲಸ ಮಾಡುತ್ತಿದ್ದ, ರಾಹುಲ್ ರಾಥೋಡ್ ರಾಜ್ಯಕ್ಕೆ ಕಲಾ ವಿಭಾಗಕ್ಕೆ ಎರಡನೇ ಸ್ಥಾನ ಪಡೆದಿರುವ ವಿಚಾರ ತಿಳಿಯುತ್ತಿದ್ದಂತೆ ಆ ಬಡ ಕುಟುಂಬದಲ್ಲಿ ಹೊಸ ಆಶಾಕಿರಣ ಮೂಡಿದಂತಾಗಿದೆ.
ರ್ಯಾಂಕ್ ಬಂದ ಸುದ್ದಿ ಬರುತ್ತಿದ್ದಂತೆಯೇ ಜೊತೆಗಿದ್ದರವರು ಕೆಲಸಬಿಟ್ಟು ತಮ್ಮ ತಾತ್ಕಾಲಿಕ ಟೆಂಟ್ ಮುಂದೆ ಸೇರಿ ರಾಹುಲ್ ರಾಥೋಡ್‌ಗೆ ಸಿಹಿ ತಿನಿಸಿ ಸಂಭ್ರಮಿಸಿದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕಡು ಬಡತನದಲ್ಲಿ ಇಂತಹ ಸಾಧನೆ ಮಾಡಿರುವ ರಾಹುಲ್ ರಾಥೋಡ್‌ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.












Click it and Unblock the Notifications