Bengaluru 2nd Airport: ಈ ಭಾಗದಲ್ಲೇ ಬೆಂಗಳೂರು 2ನೇ ವಿಮಾನ ನಿಲ್ದಾಣ! ಗುರಿ ಸಾಧಿಸುವ ತನಕ ಬಿಡಲ್ಲ: ಟಿಬಿ ಜಯಚಂದ್ರ ಅಪ್ಡೇಟ್
ತುಮಕೂರು, ಮಾರ್ಚ್ 11: ರಾಜಧಾನಿ ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ರಾಜ್ಯ ಸರ್ಕಾರ ವೇಗ ನೀಡಿದೆ. ಏರ್‌ಪೋರ್ಟ್ ನಿರ್ಮಾಣವಾಗುವ ಜಾಗದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದ್ದು, ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸ್ಥಳಗಳನ್ನ ಆಯ್ಕೆ ಫೈನಲ್ ಮಾಡಿದ್ದು, ಕೇಂದ್ರ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಸಿದೆ.
ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಒಟ್ಟು ಮೂರು ಸ್ಥಳಗಳನ್ನು ಏರ್‌ಪೋರ್ಟ್ ನಿರ್ಮಾಣಕ್ಕೆ ಶಾರ್ಟ್ ಲಿಸ್ಟ್ ಮಾಡಿದ್ದು, ಇದನ್ನು ನೋಡಿದರೆ ತಮಿಳುನಾಡಿನ ಹೊಸೂರು ಏರ್‌ಪೋರ್ಟ್‌ಗೆ ಸೆಡ್ಡು ಹೊಡೆಯಲು ರಾಜ್ಯ ಸರ್ಕಾರ ಮುಂದಾಗಿರುವುದು ಸ್ಪಷ್ಟವಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ನೋಡಿದರೆ ಬೆಂಗಳೂರು ದಕ್ಷಿಣದಲ್ಲಿಯೇ ಹೊಸ ವಿಮಾನ ನಿಲ್ದಾಣ ಆಗುವ ಸಾಧ್ಯತೆ ದಟ್ಟವಾಗಿದೆ. ಆದರೆ, ಕಾಂಗ್ರೆಸ್ ಪಾಳಯದಲ್ಲಿಯೇ ಎರಡನೇ ವಿಮಾನ ನಿಲ್ದಾಣ ನಿರ್ಮಾಣದ ಕುರಿತು ತೀವ್ರ ಪೈಪೋಟಿ ಏರ್ಪಟಿದ್ದು, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ತುಮಕೂರು ಭಾಗದ ನಾಯಕ ನಡುವೆ ತೀವ್ರ ಜಟಾಪಟಿ ಏರ್ಪಟ್ಟಿದೆ ಎನ್ನಲಾಗಿದೆ.

ಈ ಕುರಿತು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ, ಶಾಸಕ ಟಿ ಬಿ ಜಯಚಂದ್ರ ಅವರು ಮಾತನಾಡಿ, ಶಿರಾ ತಾಲೂಕಿನ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಶಕ್ತಿ ಮೀರಿ ಅನುದಾನ ತರುತ್ತಿದ್ದೇನೆ. ಶಿರಾ ಭಾಗಕ್ಕೆ ವಿಮಾನ ನಿಲ್ದಾಣ ತರಬೇಕೆಂಬುದು ನನ್ನ ಬಯಕೆ. ನಾನು ಗುರಿ ಇಟ್ಟರೆ ಸಾಧಿಸುವ ತನಕ ವಿರಮಿಸುವ ಮಾತೇ ಇಲ್ಲ ಎಂದು ಹೇಳಿದರು. ಶಿರಾ - ಅಮರಾಪುರ ರಸ್ತೆ ಆಧುನೀಕರಣಕ್ಕೆ 31 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ವಾಹನ ಸವಾರರು ಆದಷ್ಟು ಜಾಗರೂಕತೆಯಿಂದ ವಾಹನ ಚಲಾಯಿಸಿ ಕಾಮಗಾರಿಗೆ ಸಹಕಾರ ನೀಡಬೇಕು. ರಸ್ತೆ ಕಾಮಗಾರಿಯಲ್ಲಿ ಗುತ್ತಿಗೆದಾರರು ಗುಣಮಟ್ಟ ಕಾಯ್ದುಕೊಳ್ಳಬೇಕು. ಗುಣಮಟ್ಟದಲ್ಲಿ ಯಾವುದೇ ರೀತಿಯಲ್ಲೂಕಳಪೆ ಕಾಮಗಾರಿ ಕಂಡುಬಂದರೆ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಇನ್ನೂ 2 ನೇ ವಿಮಾನ ನಿಲ್ದಾಣ ನಿರ್ಮಾಣದ ಕುರಿತು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಮಾತನಾಡಿ, ಬೆಂಗಳೂರು ಸಮೀಪ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೆ ನೆಲಮಂಗಲ-ಕುಣಿಗಲ್ ರಸ್ತೆ ಮತ್ತು ಕನಕಪುರ ರಸ್ತೆಯಲ್ಲಿ ಎರಡು ಸ್ಥಳಗಳನ್ನು ಗುರುತಿಸಿ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಕಳುಹಿಸಿದ್ದೇವೆ. ಕುಣಿಗಲ್ ರಸ್ತೆ ಮತ್ತು ಕನಕಪುರ ರಸ್ತೆ ಎರಡೂ ಸ್ಥಳಗಳು ಬೆಂಗಳೂರು ಕೇಂದ್ರ ಸ್ಥಾನದಿಂದ 50 ಕಿ.ಮೀ.ದೂರದಲ್ಲಿವೆ. ನೆಲಮಂಗಲ-ಹಾಸನ ಹೆದ್ದಾರಿ ಜಂಕ್ಷನ್‌ನಿಂದ 10 ಕಿ.ಮೀ. ದೂರದಲ್ಲಿ ಒಂದು ಸ್ಥಳ, ಕನಕಪುರ ರಸ್ತೆ-ನೈಸ್ ರಸ್ತೆ ಜಂಕ್ಷನ್‌ನಿಂದ 10 ಕಿ.ಮೀ. ದೂರದಲ್ಲಿ ಇನ್ನೊಂದು ಸ್ಥಳ ಗುರುತಿಸಲಾಗಿದೆ ಎಂದು ಹೇಳಿದರು.
ಈ ಎರಡೂ ರಸ್ತೆಗಳು ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳ ಸಮೀಪ ಇವೆ ಇಲ್ಲವೇ ಅವಕ್ಕೆ ಹೊಂದಿಕೊಂಡಿವೆ. ಅಲ್ಲದೆ, ಈಗಾಗಲೇ ಇರುವ ಮೆಟ್ರೊ ಜಾಲದ ಕೊನೆಯ ನಿಲ್ದಾಣಗಳಗೆ ಕೆಲವೇ ಕಿ.ಮೀ. ಅಂತರದಲ್ಲಿವೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ, ಎರಡು ಸ್ಥಳಗಳನ್ನು ಗುರುತಿಸಿದ್ದೇವೆ. ಈ ಸಂಬಂಧ ಪ್ರಾಧಿಕಾರಕ್ಕೆ ಪ್ರಸ್ತಾವ ಕಳುಹಿಸಿದ್ದೇವೆ. ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ನಂತರ ಒಪ್ಪಿಗೆ ನೀಡಲಿದ್ದಾರೆ. ಅವರು ಒಪ್ಪಿಗೆ ನೀಡಿದರಷ್ಟೇ ಸಾಲದು. ಆನಂತರ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲಿದ್ದೇವೆ. ಆ ವರದಿಯನ್ನು ಆಧರಿಸಿ ಸ್ಥಳವನ್ನು ಅಂತಿಮಗೊಳಿಸುತ್ತೇವೆ ಎಂದು ಎಂ ಬಿ ಪಾಟೀಲ್ ಅವರು ಹೇಳಿದರು.












Click it and Unblock the Notifications