ಗೃಹಲಕ್ಷ್ಮಿ ಯೋಜನೆ: ಅರ್ಜಿ ಸಲ್ಲಿಸುವುದು ಹೇಗೆ? ಬೇಕಾದ ದಾಖಲೆಗಳೇನು? ಕೊನೆ ದಿನಾಂಕದ ಮಾಹಿತಿ
ಬೆಂಗಳೂರು, ಜೂನ್ 2: ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನೀಡಿದ್ದ ಎಲ್ಲಾ ಐದು ಭರವಸೆಗಳನ್ನು ಈ ಆರ್ಥಿಕ ವರ್ಷದಲ್ಲಿ ಈಡೇರಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅದರಲ್ಲೂ ಮನೆಯೊಡತಿಗೆ ಪ್ರತಿ ತಿಂಗಳು 2000 ರುಪಾಯಿ ಹಣ ನೀಡುವ 'ಗೃಹಲಕ್ಷ್ಮಿ' ಯೋಜನೆ ಕೂಡ ಜಾರಿ ಮಾಡಲು ಸರ್ಕಾರ ನಿರ್ಧರಿಸಿದೆ.
ಗೃಹಲಕ್ಷ್ಮಿ ಯೋಜನೆಯಡಿ ಮನೆಯೊಡತಿಗೆ ಪ್ರತಿ ತಿಂಗಳು ಹಣ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಖಚಿತಪಡಿಸಿದ್ದಾರೆ. ಜೂನ್ 15 ರಿಂದ ಜುಲೈ 15ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದು ಹೇಳಲಾಗಿದೆ. ಮನೆಯಲ್ಲಿ ನಾಲ್ಕೈದು ಮಹಿಳೆಯರು ಇದ್ದರೆ, ಅವರಲ್ಲಿ ಒಬ್ಬರಿಗೆ ಮಾತ್ರ ಹಣ ಸಿಗಲಿದೆ.

ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ಹೊಂದಿರುವವರು ಈ ಯೋಜನೆಯ ಲಾಭ ಪಡೆಯಲು ಅರ್ಹವಾಗಿರುತ್ತಾರೆ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಮನೆ ಯಜಮಾನಿ ಕಡ್ಡಾಯವಾಗಿ ಆಧಾರ್ ಕಾರ್ಡ್, ಬ್ಯಾಂಕ್ ಅಕೌಂಡ್ ಪಾಸ್‌ಬುಕ್ ಜೆರಾಕ್ಸ್, ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಜೆರಾಕ್ಸ್ ಅನ್ನು ಅರ್ಜಿ ಸಲ್ಲಿಸುವಾಗ ನೀಡಬೇಕಾಗುತ್ತದೆ.
ಆಗಸ್ಟ್ ತಿಂಗಳಿನಿಂದ ಹಣ ಜಮಾ
ಆಗಸ್ಟ್ ತಿಂಗಳಿನಿಂದ ಯೋಜನೆ ಜಾರಿ ಮಾಡುವುದಾಗಿ ಸಿದ್ದರಾಮಯ್ಯ ಖಚಿತಪಡಿಸಿದ್ದಾರೆ. ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಕೂಡ ಅರ್ಜಿ ಸಲ್ಲಿಸಲು ಅವಕಾಶ ನೀಡಬಹುದಾಗಿದೆ. ಜುಲೈ 15ರಿಂದ ಆಗಸ್ಟ್ 15ರವರೆಗೆ ಅರ್ಜಿಗಳನ್ನು ಪರಿಶೀಲನೆ ಮಾಡಿ, ಆಗಸ್ಟ್ 15ರಂದು ಸ್ವಾತಂತ್ಯ್ರ ದಿನಾಚರಣೆ ದಿನ ಕುಟುಂಬದ ಯಜಮಾನಿ ಖಾತೆಗೆ 2000 ರುಪಾಯಿ ಹಣವನ್ನು ಜಮಾ ಮಾಡಲಾಗುವುದು.
ಪಿಂಚಣಿ ಫಲಾನುಭವಿಗಳಿಗೂ ಕೂಡ ಈ ಯೋಜನೆ ಅನ್ವಯಿಸಲಾಗುತ್ತದೆ. ಎಷ್ಟು ಕುಟುಂಬಗಳಿವೆ, ಎಷ್ಟು ಜನ ಇದ್ದಾರೆ ಎಂದು ನಮ್ಮ ಬಳಿ ಮಾಹಿತಿ ಇದೆ. ಮನೆ ಯಜಮಾನಿ ಯಾರಿದ್ದಾರೆ ಅವರಿಗೆ ಕೊಡ್ತೀವಿ. ಅವರು ಅತ್ತೆ-ಸೊಸೆ ಎನ್ನುವ ಪ್ರಶ್ನೆ ಬರುವುದಿಲ್ಲ. ಯಜಮಾನಿ ಯಾರು ಎನ್ನುವುದನ್ನು ಮನೆಯವರು ತೀರ್ಮಾನ ಮಾಡಬೇಕು ಎಂದು ಅವರು ಹೇಳಿದರು.
ಜೂನ್ ತಿಂಗಳಿನಲ್ಲೇ ನಾವು ಹಣ ಹಾಕಬೇಕು ಎಂದು ತೀರ್ಮಾನ ಮಾಡಿದ್ದೆವು ಆದರೆ ತಾಂತ್ರಿಕ ಸಮಸ್ಯೆಗಳು ಇರುವ ಕಾರಣ, ಅರ್ಜಿಗಳನ್ನು ಪಡೆಯಲು, ಅವುಗಳನ್ನು ಪರಿಶೀಲನೆ ಮಾಡಲು ಸಮಯ ಬೇಕಾಗುವುದರಿಂದ ಆಗಸ್ಟ್ ತಿಂಗಳಿನಲ್ಲಿ ಮನೆ ಯಜಮಾನಿ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು ಖಚಿತಪಡಿಸಿದ್ದಾರೆ.












Click it and Unblock the Notifications