ತಾಯಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಇವನೆಂಥಾ ಮಗ
ಬೆಂಗಳೂರು, ಡಿಸೆಂಬರ್ 10: ಇತ್ತೀಚೆಗಷ್ಟೇ ಮಗ ತಾಯಿಗೆ ಹೊಡೆದಿರುವ ಹೃದಯ ಹಿಂಡುವ ವಿಡಿಯೋವೊಂದು ವೈರಲ್ ಆಗಿತ್ತು, ಜನರು ಛೀ, ತೂ ಎಂದು ಛೀಮಾರಿ ಹಾಕಿದ್ದರು. ಆ ಘಟನೆ ಮಾಸುವ ಮುನ್ನವೇ ಮಗನೊಬ್ಬ ತಾಯಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಬೆಂಗಳೂರಲ್ಲಿ ನಡೆದಿದೆ.
ಮದ್ಯ ಸೇವಿಸಲು ಹಣ ಕೊಡಲಿಲ್ಲ ಎಂದು ಮಗನೇ ತಾಯಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಬೆಂಗಳೂರಿನ ಸದಾಶಿವನಗರದಲ್ಲಿ ನಡೆದಿದೆ. ಅಶ್ವತ್ಥನಗರ ನಿವಾಸಿ ಉತ್ತಮ್ ಕುಮಾರ್ ವಿರುದ್ಧ ತಾಯಿ ದೂರು ದಾಖಲಿಸಿದ್ದಾರೆ. ಕೇಂದ್ರ ಡಿಸಿಪಿ ವಿಭಾಗದ ಪೊಲೀಸರು, ಆರೋಪಿ ಬಂಧನಕ್ಕೆ ಮುಂದಾಗುತ್ತಿದ್ದಂತೆ ಆತ ತಲೆಮರೆಸಿಕೊಂಡಿದ್ದಾನೆ.
ಡಿ.6ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ, ಅಂದು ಮದ್ಯಸೇವನೆಗಾಗಿ ತಾಯಿ ಬಳಿ ಹಣ ಕೇಳಿದ್ದ, ತಾಯಿ ಹಣ ಕೊಡಲು ನಿರಾಕರಿಸಿದ್ದರು. ಇದರಿಂದ ಕುಪಿತಗೊಂಡ ಆತ, ಮನೆಯ ಹೊರಗೆ ನಿಲ್ಲಿಸಿದ್ದ ಬೈಕ್‌ನಿಂದ ಪೆಟ್ರೋಲ್ ತೆಗೆದುಕೊಂಡು ಬಂದು ತಾಯಿಯ ಮೇಲೆ ಎರಚಿ ಬಳಿಕ ಲೈಟರ್‌ನಿಂದ ಬೆಂಕಿ ಕೊಟ್ಟಿದ್ದಾನೆ.

ಇದರಿಂದ ತಾಯಿ ಮುಖ, ಕೈ ಮತ್ತು ದೇಹದ ವಿವಿಧ ಭಾಗಗಳಿಗೆ ಸುಟ್ಟ ಗಾಯಗಳಾಗಿದ್ದು, ಆಕೆ ಕಿರುಚುವುದು ಕೇಳಿ ಅಕ್ಕಪಕ್ಕದ ಮನೆಯವರೆಲ್ಲರೂ ಓಡಿಬಂದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸರು ಉತ್ತಮ್ ಕುಮಾರ್ ಹುಡುಕಾಟದಲ್ಲಿದ್ದಾರೆ.












Click it and Unblock the Notifications