ಲಾಕ್ ಡೌನ್; ಶೇ 20ರಷ್ಟು ವೇತನ ಕಡಿತಗೊಳಿಸಿದ ಏರ್ ಏಷ್ಯಾ
ಬೆಂಗಳೂರು, ಏಪ್ರಿಲ್ 20 : ಲಾಕ್ ಡೌನ್‌ನಿಂದಾಗಿ ವಿಮಾನ ಸಂಚಾರ ಸಂಪೂರ್ಣವಾಗಿ ಬಂದ್ ಆಗಿದೆ. ಇದರಿಂದಾಗಿ ವಿಮಾನಯಾನ ಸಂಸ್ಥೆಗಳಿಗೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ.
ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿರುವ ಏರ್ ಏಷ್ಯಾ ಇಂಡಿಯಾ ಏಪ್ರಿಲ್‌ನಲ್ಲಿ ಉದ್ಯೋಗಿಗಳ ವೇತನದಲ್ಲಿ ಶೇ 20ರಷ್ಟು ಕಡಿತ ಮಾಡಿದೆ. ನಷ್ಟದಿಂದ ಪಾರಾಗಲು ಉದ್ಯೋಗಿಗಳ ವೇತನಕ್ಕೆ ಕತ್ತರಿ ಹಾಕಲಾಗಿದೆ.
50 ಸಾವಿರ ಮತ್ತು ಅದಕ್ಕಿಂತ ಕಡಿಮೆ ವೇತನ ಇರುವ ಉದ್ಯೋಗಿಗಳಿಗೆ ವೇತನದಲ್ಲಿ ಯಾವುದೇ ಕಡಿತ ಆಗುವುದಿಲ್ಲ. 50 ಸಾವಿರಕ್ಕಿಂತ ಅಧಿಕ ವೇತನ ಪಡೆಯುವವರಿಗೆ ಏಪ್ರಿಲ್ ತಿಂಗಳ ವೇತನದಲ್ಲಿ ಶೇ 20ರಷ್ಟು ಕಡಿತವಾಗಿದೆ.

ಇಂಡಿಗೋ, ಸ್ಪೈಸ್ ಜೆಟ್, ವಿಸ್ತಾರಾ ಈಗಾಗಲೇ ವೇತನ ಕಡಿತ ಮಾಡಿವೆ. ಏರ್ ಏಷ್ಯಾ ಸಹ ನಷ್ಟದಿಂದ ಪಾರಾಗಲು ಈಗ ವೇತನ ಕಡಿತದ ಮೊರೆ ಹೋಗಿದೆ. ಉದ್ಯೋಗಿಗಳಿಗೂ ಈ ಕುರಿತು ಮಾಹಿತಿ ನೀಡಲಾಗಿದೆ.
ಏರ್ ಏಷ್ಯಾದ ಹಿರಿಯ ಅಧಿಕಾರಿಗಳ ವೇತನದಲ್ಲಿ ಶೇ 20ರಷ್ಟು ಕಡಿತವಾಗಿದೆ. ಕಾರ್ಯಕಾರಿ ಹಂತದಲ್ಲಿನ ಅಧಿಕಾರಿಗಳ ವೇತನ ಶೇ 17, 13 ಮತ್ತು ಶೇ 7ರಷ್ಟು ಕಡಿತವಾಗಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
50 ಸಾವಿರ ಮತ್ತು ಅದಕ್ಕಿಂತ ಕಡಿಮೆ ವೇತನ ಹೊಂದಿರುವ ಉದ್ಯೋಗಿಗಳ ವೇತನದಲ್ಲಿ ಯಾವುದೇ ಕಡಿತ ಮಾಡಿಲ್ಲ. ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಏರ್ ಏಷ್ಯಾ ನಿರಾಕರಿಸಿದೆ.
ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಏರ್ ಏಷ್ಯಾ ಕಡಿಮೆ ದರಕ್ಕೆ ವಿಮಾನ ಸೇವೆ ಕಲ್ಪಿಸುವುದಕ್ಕೆ ಪ್ರಸಿದ್ಧಿ ಪಡೆದಿದೆ. ಜೂನ್ 12, 2014ರಲ್ಲಿ ಮೊದಲು ಏರ್ ಏಷ್ಯಾ ಸಂಚಾರ ಆರಂಭಿಸಿತು.












Click it and Unblock the Notifications