Bengaluru Traffic: ಶೀಘ್ರದಲ್ಲೇ ಕೊನೆಗೊಳ್ಳಲಿದೆ ಬೆಂಗಳೂರು ಟ್ರಾಫಿಕ್ ಸಮಸ್ಯೆ!
ಬೆಂಗಳೂರು, ಜುಲೈ. 29: ಸಾಮಾನ್ಯವಾಗಿ ರಸ್ತೆಗಳಲ್ಲಿ ವಾಹನಗಳ ಉದ್ದನೆಯ ಸರತಿ ಸಾಲುಗಳು ಕಂಡುಬರುತ್ತಿದೆ ಎಂದರೆ ನಾವು ಸಿಲಿಕಾನ್ ಸಿಟಿಗೆ ಎಂಟ್ರಿ ಕೊಡುತ್ತಿದ್ದೇವೆ ಎಂದೆ ಅರ್ಥ. ಟ್ರಾಫಿಕ್ ಜಾಮ್ ಎಂದರೆ ಬೆಂಗಳೂರು ಎಂಬಂತೆ ಆಗಿದೆ. ಆದರೆ, ಶೀಘ್ರದಲ್ಲೇ ರಾಜಧಾನಿಯ ಟ್ರಾಫಿಕ್ ಜಾಮ್‌ಗೆ ಕಡಿವಾಣ ಬೀಳಲಿದೆ.
ಹೌದು... ಬೆಂಗಳೂರು ನಗರದಲ್ಲಿ ಶೀಘ್ರದಲ್ಲೇ ಟ್ರಾಫಿಕ್ ಜಾಮ್ ಕಡಿಮೆ ಆಗಲಿದೆ. ಏಕೆಂದರೆ ಕರ್ನಾಟಕ ಸರ್ಕಾರವು ಬೆಂಗಳೂರಿನ 17 ಸ್ಥಳಗಳಲ್ಲಿ 100 ಕಿಲೋಮೀಟರ್ ಸಿಗ್ನಲ್ ಮುಕ್ತ ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಪ್ರಕಟಿಸಿದೆ. ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆಯ ಯೋಜನೆಗೆ ಬರೋಬ್ಬರಿ 12,000 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ.

ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು, 100 ಕಿಲೋಮೀಟರ್ ಉದ್ದದ ರಸ್ತೆಗಳನ್ನು ಸಿಗ್ನಲ್ ಮುಕ್ತ ಕಾರಿಡಾರ್‌ಗಳಾಗಿ ಪರಿವರ್ತಿಸಲು ನಗರದ ಪ್ರಮುಖ ರಸ್ತೆಗಳಲ್ಲಿ 17 ಎಲಿವೇಟೆಡ್ ಕಾರಿಡಾರ್‌ಗಳನ್ನು ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಘೋಷಿಸಿದ್ದಾರೆ. ಇದರಲ್ಲಿ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ನಿವಾರಿಸಲು ಉದ್ದೇಶಿಸಿರುವ ಸುರಂಗ ರಸ್ತೆಯ ಹೊರತಾಗಿದೆ.
ಯೋಜನೆ ಕುರಿತು ವಿವರ ನೀಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನಗರದ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಕುರಿತು ಎಲ್ಲಾ ರಾಜಕೀಯ ಪಕ್ಷಗಳ ಶಾಸಕರೊಂದಿಗೆ ಚರ್ಚಿಸಲಾಗಿದೆ. ರಾಜ್ಯ ಸರ್ಕಾರವು ಸುಮಾರು 17 ಸ್ಥಳಗಳನ್ನು ಗುರುತಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಕರ್ನಾಟಕ ಸರ್ಕಾರವು ಬೆಂಗಳೂರಿನ 17 ಸ್ಥಳಗಳಲ್ಲಿ 100 ಕಿಲೋಮೀಟರ್ ಸಿಗ್ನಲ್ ಮುಕ್ತ ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸುವುದಾಗಿ ಹೇಳಿದೆ. ಮಹತ್ವಾಕಾಂಕ್ಷೆಯ ಯೋಜನೆಗೆ 12,000 ಕೋಟಿ ರೂಪಾಯಿ ವೆಚ್ಚವಾಗಲಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP), ಸಂಚಾರ ವಿಶ್ಲೇಷಣೆ ಮತ್ತು ಮುಂದಿನ ಕೆಲವು ವರ್ಷಗಳ ಯೋಜಿತ ಬೆಳವಣಿಗೆಯ ಮಾದರಿಗಳನ್ನು ಆಧರಿಸಿ ಈ ಸ್ಥಳಗಳನ್ನು ಆಯ್ಕೆ ಮಾಡಿದೆ.

ಸಿಗ್ನಲ್-ಮುಕ್ತ ಕಾರಿಡಾರ್‌ಗಳು ಎಲ್ಲೇಲ್ಲಿ?
ನಗರಕ್ಕೆ ಯೋಜಿಸಲಾದ ಪ್ರಮುಖ ಸಿಗ್ನಲ್-ಮುಕ್ತ ಕಾರಿಡಾರ್‌ಗಳು 23 ಕಿಲೋಮೀಟರ್ ವ್ಯಾಪ್ತಿಯನ್ನು ಒಳಗೊಂಡಿವೆ. ಕೆ.ಆರ್ ಪುರದಿಂದ ಯಶವಂತಪುರ-ಗೊರಗುಂಟೆಪಾಳ್ಯ, ಆನೆಪಾಳ್ಯದಿಂದ ಸಿಲ್ಕ್ ಬೋರ್ಡ್‌ವರೆಗೆ 5.5 ಕಿಲೋಮೀಟರ್, ಹೊಸೂರು ರಸ್ತೆ ಕಾರಿಡಾರ್ ಮತ್ತು ಮಾರೇನಹಳ್ಳಿಯಿಂದ ಕನಕಪುರ ರಸ್ತೆ-ತಲಘಟ್ಟಪುರ ನೈಸ್ ರಸ್ತೆವರೆಗೆ 10 ಕಿಲೋಮೀಟರ್ ಎಲಿವೇಟೆಡ್ ಕಾರಿಡಾರ್. ಹೆಚ್ಚುವರಿಯಾಗಿ, ಮಿನರ್ವದಿಂದ ಕಬ್ಬನ್ ಪಾರ್ಕ್‌ವರೆಗೆ 2.7 ಕಿಲೋಮೀಟರ್ ರಸ್ತೆಯನ್ನು ಪ್ರಸ್ತಾಪಿಸಲಾಗಿದೆ.
ರಾಜ್ಯ ಸಚಿವ ಸಂಪುಟದಲ್ಲಿ ಯೋಜನೆ ಪ್ರಸ್ತಾಪವಾಗಿರುವುದರಿಂದ ಯೋಜನೆಯ ಗಡುವು ಇನ್ನೂ ನಿಗದಿಯಾಗಿಲ್ಲ. ಬಿಬಿಎಂಪಿ ಶೀಘ್ರದಲ್ಲೇ ಇತರೆ ವಿವರಗಳನ್ನು ಹಂಚಿಕೊಳ್ಳಲಿದೆ. ಹೆಚ್ಚಿನ ಸಂಚಾರ ದಟ್ಟಣೆ ಇರುವ ಸ್ಥಳಗಳನ್ನು ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಯೋಜನೆಗಾಗಿ ಟ್ರಾಫಿಕ್ ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.












Click it and Unblock the Notifications