₹ 144,00,00,000 ಅಭಿಮಾನ್ ಸ್ಟುಡಿಯೋ ಮಾರಾಟಕ್ಕೆ ಬ್ರೇಕ್: ವೀರಕಪುತ್ರ ಶ್ರೀನಿವಾಸ್ ಹೇಳಿದ್ದೇನು
Vishnuvardhan: ನಟ ವಿಷ್ಣುವರ್ಧನ್ ಅವರ ಸಮಾಧಿ ವಿಚಾರವೂ ಹಲವು ವರ್ಷಗಳಿಂದ ಗೊಂದಲಕ್ಕೆ ಕಾರಣವಾಗಿತ್ತು. ಕನ್ನಡಿಗರನ್ನು ರಂಜಿಸಿದ್ದ ನಟ ವಿಷ್ಣುವರ್ಧನ್ ಅವರ ಸಮಾಧಿ ವಿಚಾರದಲ್ಲಿ ಎದುರಾದ ಗೊಂದಲವು ಅವರ ಅಭಿಮಾನಿಗಳಲ್ಲಿ ನಿರಾಸೆ ಹಾಗೂ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ನಟ ವಿಷ್ಣುವರ್ಧನ್ ಅವರ ಸಮಾಧಿ ವಿಚಾರ ಹಾಗೂ ಅಭಿಮಾನ್ ಸ್ಟುಡಿಯೋಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಇದೇ ಸಂದರ್ಭದಲ್ಲಿ ವೀರಕಪುತ್ರ ಶ್ರೀನಿವಾಸ್ ಅವರು ಮಹತ್ವದ ಮಾಹಿತಿಯೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಬಾಲಕೃಷ್ಣ ಅವರ ಮೊಮ್ಮಗ ಕಾರ್ತೀಕ ಅಭಿಮಾನ್ ಸ್ಟುಡಿಯೋದ ಒಂದು ಎಕರೆಯನ್ನು 14 ಕೋಟಿ 37 ಲಕ್ಷಕ್ಕೆ ಮಾರಾಟ ಮಾಡಲು ಅಗ್ರಿಮೆಂಟ್ ಮಾಡಿಕೊಂಡಿದ್ದರು. ಅಂದರೆ ಬರೋಬ್ಬರಿ ಹತ್ತು ಎಕರೆಗೆ 144 ಕೋಟಿ ರೂಪಾಯಿ. ಸರ್ಕಾರ ಕೊನೆಗೂ ಎಚ್ಚೆತ್ತುಕೊಂಡು ಡಾ.ವಿಷ್ಣುವರ್ಧನ್ ಅವರ ಸಮಾಧಿಯನ್ನು ನೆಲಸಮಗೊಳಿಸಿದ್ದ ಅಭಿಮಾನ್ ಸ್ಟುಡಿಯೋದ ಮಾಲೀಕರಿಗೆ ಸರ್ಕಾರ ಕಾನೂನಿನ ಮಹತ್ವವನ್ನು ತಿಳಿಸಿದೆ. ಅಭಿಮಾನ್ ಸ್ಟುಡಿಯೋವನ್ನು ಮುಟ್ಟುಗೋಲು ಹಾಕಿಕೊಂಡು ಆ ಜಾಗವನ್ನು ಪುನಃ ಸರ್ಕಾರದ ವಶಕ್ಕೇ ಪಡೆಯುವ ನಿರ್ಧಾರವನ್ನು ಮಾಡಿದೆ. ಅದಕ್ಕಾಗಿ ಅದು ಪಟ್ಟಿಮಾಡಿರುವ ಕಾರಣಗಳನ್ನು ಎಲ್ಲಾ ಕನ್ನಡಿಗರು ಓದಿಕೊಳ್ಳಲು ವಿನಂತಿಸುವೆ ಎಂದು ಅವರು ಸುದೀರ್ಘ ಬರಹವೊಂದನ್ನು ಹಂಚಿಕೊಂಡಿದ್ದಾರೆ.

ಮೊದಲಿನಿಂದಲೂ ನಾನು ಆ ಜಾಗದ ವಿರುದ್ಧ, ಅಲ್ಲಿನ ಹಣಕಾಸಿನ ಅವ್ಯವಹಾರದ ವಿರುದ್ಧ ದೊಡ್ಡಮಟ್ಟದಲ್ಲಿ ಧ್ವನಿ ಎತ್ತುತ್ತಲೇ ಇದ್ದೆ. ಆದರೆ ಕೆಲವರು ಅಷ್ಟು ದೊಡ್ಡ ಹಗರಣವನ್ನು ಬಿಟ್ಟು, ಅಭಿಮಾನಿಗಳ ಪುಣ್ಯಭೂಮಿಯಂತಹ ಒಂದು ಸಣ್ಣ ಆಸೆಯ ವಿರುದ್ಧ ನಿಂತುಬಿಟ್ಟರು. ಇಟ್ಸ್ ಓಕೆ... ಈಗಲಾದರೂ ನಮ್ಮ ಕೂಗಿಗೆ ನ್ಯಾಯ ಸಿಕ್ಕಿದೆ. ಇದು ನಿಜಕ್ಕೂ ಅಭಿನಂದನೀಯ ಕೆಲಸ. ಅಸಂಖ್ಯಾತ ಅಭಿಮಾನಿಗಳ ಹದಿನೈದು ವರ್ಷಗಳ ನೋವು, ಕಣ್ಣೀರು ಮತ್ತು ಅಸಹಾಯಕತೆಗೆ ನ್ಯಾಯ ಸಿಕ್ಕಿದೆ. ಆದರೆ ಈ ಆದೇಶದಲ್ಲಿ ಅಭಿಮಾನ್ ಸ್ಟುಡಿಯೋದ ಜಾಗವನ್ನು ಅರಣ್ಯಭೂಮಿ ಎಂದು ಘೋಷಣೆ ಮಾಡಿರುವುದು ಚೂರು ಗೊಂದಲವನ್ನು ಸೃಷ್ಟಿಸಿದೆ ಎಂದೂ ಅವರು ಹೇಳಿದ್ದಾರೆ.
ಮುಂದುವರಿದು ಅರಣ್ಯಭೂಮಿಯ ನೆಪ ಹೇಳಿ ಅಲ್ಲಿ ಯಜಮಾನ್ರ ಪುಣ್ಯಭೂಮಿ, ಬಾಲಣ್ಣನ ಸಮಾಧಿ ಆಗದಂತೆ ತಡೆದುಬಿಟ್ಟರೆ ಎಂದು ಪ್ರಶ್ನೆ ಮಾಡಿದ್ದಾರೆ. ಅದು ಆಗದಿರಲೆಂದು ಒತ್ತಾಯಿಸೋಣ. ಅರಣ್ಯ ಭೂಮಿಯ ಆಶಯಕ್ಕೆ ಅಡ್ಡಿಯಾಗದಂತಹ ಮರ ಗಿಡಗಳಿಂದಲೇ ಕೂಡಿರುವ ಸರಳ ಪುಣ್ಯಭೂಮಿ ನಿರ್ಮಾಣಕ್ಕೆ ಸರ್ಕಾರ ಮನಸು ಮಾಡಬೇಕು. ಇಲ್ಲವಾದರೆ 'ವಿಷ್ಣುವರ್ಧನ್ ಅವರ ಸಮಾಧಿಯನ್ನು ನೆಲಸಮ ಮಾಡಿದ ಕಾರ್ತೀಕನ ಕನಸುಗಳೂ ನೆಲಸಮ' ಆದವೆಂದು ಸಮಾಧಾನಪಡುವುದಕ್ಕಷ್ಟೇ ಈ ತೀರ್ಮಾನ ಉಪಯೋಗಕ್ಕೆ ಬರುತ್ತದೆ. ಹಾಗಾದರೆ ನಮಗೆ ಅಂತಿಮವಾಗಿ ದಕ್ಕಿದ್ದೇನು? ನಾವು ಬಯಸಿದ್ದು ಪುಣ್ಯಭೂಮಿಯೇ ಹೊರತು ಅಭಿಮಾನ್ ಸ್ಟುಡಿಯೋ ಅಲ್ಲ. ಅಭಿಮಾನ್ ಸ್ಟುಡಿಯೋದ ಮಾಲೀಕರು ಸರ್ಕಾರ, ಕೋರ್ಟು, ಕಚೇರಿ, ಅಭಿಮಾನಿಗಳು, ಕುಟುಂಬ ಎಲ್ಲರಿಗೂ ಚಳ್ಳೆಹಣ್ಣು ತಿನ್ನಿಸ್ತಾ ಹೋಗುವುದನ್ನು ಕಂಡಾಗ ಅದರ ಹಿಂದಿನ ಮರ್ಮ ನಾಡಿನ ಜನತೆಗೆ ತಿಳಿಯಬೇಕು.
ಅದಕ್ಕಾಗಿ ನ್ಯಾಯಾಂಗ ತನಿಖೆಗೆ ಆದೇಶಿಸಬೇಕೆಂದು ನಾವು ಒತ್ತಾಯಿಸಿದ್ದೆವು. ಈ ಸಂಬಂಧ ಅಧಿವೇಶನ ಶುರುವಾದ ಮಾರನೇ ದಿನ ನನಗೆ ಸಿಎಂ ಕಚೇರಿಯಿಂದ ಅವರ ಕಾರ್ಯದರ್ಶಿಗಳಾದ ಪ್ರಭಾಕರ್ ಅವರಿಂದ ಕರೆ ಬಂದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳ ಸಭೆ ಕರೆದಿರುವುದಾಗಿ ತಿಳಿಸಿದ್ದರು. ಮತ್ತು ಒಂದಷ್ಟು ಮಾಹಿತಿಯನ್ನೂ ಕೇಳಿದ್ದರು. ನಾನು ಅವರಿಗೆ ಬೇಕಿದ್ದ ಒಂದಷ್ಟು ಮಾಹಿತಿ ಮತ್ತು ಅಭಿಮಾನಿಗಳ ವಾದವನ್ನು ತಿಳಿಸಿದ್ದೆ. "ಆ ಜಾಗದ ಸತ್ಯಾಸತ್ಯತೆ ನಮಗೆ ತಿಳಿಯಬೇಕು ಅದಕ್ಕಾಗಿ ನ್ಯಾಯಾಂಗ ತನಿಖೆ ಮಾಡಿ ಮತ್ತು ಆಗಿರುವ ತಪ್ಪುಗಳನ್ನು ಸರಿಪಡಿಸಿ ಪುಣ‌್ಯಭೂಮಿಯನ್ನು ಉಳಿಸಿಕೊಡಿ" ಎಂದು ಆ ಸಂದರ್ಭದಲ್ಲಿ ವಿನಂತಿ ಮಾಡಿದ್ದೆ. ಆ ನಿಟ್ಟಿನಲ್ಲಿ ಸರ್ಕಾರ ಮೊದಲ ಹೆಜ್ಜೆ ಇಟ್ಟಿದೆ. ಇದು ತಾರ್ಕಿಕ ಅಂತ್ಯಕಾಣುವವರೆಗೂ ಈ ಹೋರಾಟವನ್ನು ಮುಂದುವರಿಸಬೇಕಿದೆ. ಶತಾಯ ಗತಾಯ ಈ ಜಾಗ ಮತ್ತೆ ಸರ್ಕಾರದ ಅಧೀನಕ್ಕೇ ಬರುವಂತೆ ನೋಡಿಕೊಳ್ಳಬೇಕಿದೆ ಮತ್ತು ಡಾ.ವಿಷ್ಣುವರ್ಧನ್ ಮತ್ತು ಹಿರಿಯ ನಟ ಬಾಲಕೃಷ್ಣ ಅವರ ಸಮಾಧಿಗಳನ್ನು ಮತ್ತೆ ಮರು ನಿರ್ಮಾಣಗೊಳಿಸಬೇಕಿದೆ ಎಂದು ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.












Click it and Unblock the Notifications