ಬೆಂಗಳೂರು: ಮೊಬೈಲ್‌ಗಾಗಿ ಉಡದಾರದಿಂದ ನೇಣು ಬಿಗಿದುಕೊಂಡು 13 ವರ್ಷದ ಬಾಲಕ ಆತ್ಮಹತ್ಯೆ
ಬೆಂಗಳೂರು, ಜನವರಿ, 29: ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳು ಮೊಬೈಲ್ ಫೋನ್‌ಗಳತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇನ್ನು ಪೋಷಕರು ಮನೆಗಳಲ್ಲಿ ಫೋನ್ ಕೊಡಿಸದಿದ್ದರೆ ಕೆಲ ಮಕ್ಕಳು ಎಂತಹ ಮಟ್ಟಕ್ಕಾದರೂ ಇಳಿದುಬಿಡುತ್ತಾರೆ ಎನ್ನುವುದಕ್ಕೆ ಬೆಂಗಳೂರಿನಲ್ಲಿ ನಡೆದ ಈ ಘಟನೆಯೇ ಸಾಕ್ಷಿ.
ಮೊಬೈಲ್ ಚಟಕ್ಕೆ ಬಿದ್ದು 13 ವರ್ಷದ ಬಾಲಕನೋರ್ವ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಗೊಲ್ಲರಹಟ್ಟಿಯ ರತ್ನನಗರದಲ್ಲಿ ನಡೆದಿದೆ.

ಧ್ರುವ (13) ಆತ್ಮಹತ್ಯೆಗೆ ಶರಣಾದ ಬಾಲಕ. ಈ ಬಾಲಕ 9 ವರ್ಷದ ತಂಗಿಯ ಮುಂದೆಯೇ ಉಡದಾರದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವೇಳೆ ಅಣ್ಣ ಏನು ಮಾಡುತ್ತಿದ್ದಾನೆ ಎಂಬ ಅರಿವಿಲ್ಲದೆ, ತಂಗಿ ಸುಮ್ಮನೆ ನೋಡುತ್ತಿದ್ದಳು ಎಂದು ತಿಳಿದುಬಂದಿದೆ.
ಧ್ರುವ ಮನೆಯವರ ಮಾತು ಕೇಳದೆ ಅತೀಯಾಗಿ ಮೊಬೈಲ್ ಬಳಕೆ ಮಾಡುತ್ತಿದ್ದ ಎಂದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮಂಗಳವಾರ ಪೋಷಕರು ಕೆಲಸಕ್ಕೆ ತೆರಳಿದ್ದರು. ಶಾಲೆ ಮುಗಿಸಿ ಬಂದ ಅಣ್ಣ-ತಂಗಿ ಮಾತ್ರ ಮನೆಯಲ್ಲಿ ಇದ್ದರು. ಆಗ ಬಾಲಕ ಪ್ಯಾಂಟ್ ತೆಗೆದು ಸೊಂಟದ ಉಡದಾರವನ್ನಯ ಫ್ಯಾನ್‌ಗೆ ಕಟ್ಟಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಸಂಜೆ 7 ಗಂಟೆ ಸುಮಾರಿಗೆ ಬಾಲಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆಗ ಉಡದಾರ ಕುತ್ತಿಗೆಗೆ ಬಿಗಿದು, ತುಂಡಾಗಿ ಬಾಲಕ ಕೆಳಗೆ ಬಿದ್ದಿದ್ದಾನೆ. ಬಾಲಕ ಕೆಳಗೆ ಬಿದ್ದ ವೇಳೆ ಕೆಲಸ ಮುಗಿಸಿ ತಾಯಿ ಬಂದಿದ್ದಾರೆ. ಘಟನೆ ನೋಡಿ ಆತಂಕಗೊಂಡ ತಾಯಿ ಅಕ್ಕಪಕ್ಕದವರ ಸಹಾಯ ಪಡೆದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಬಾಲಕನನ್ನು ಪರೀಕ್ಷಿಸಿದ ವೈದ್ಯರು ಆತ ಸಾವನ್ನಪ್ಪಿರುವುದಾಗಿ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಚಿಕ್ಕ ಮಕ್ಕಳು ಅತ್ತ ತಕ್ಷಣ ಅವರ ಕೈಗೆ ಮೊಬೈಲ್ ಕೊಟ್ಟು ಸುಮ್ಮನೆ ಮಾಡುವುದು ಇತ್ತೀಚಿನ ಪೀಳಿಗೆಯ ಅಭ್ಯಾಸ ಆಗಿಬಿಟ್ಟಿದೆ. ಆದ್ದರೆ ಅದರಿಂದ ಏನೆಲ್ಲ ಅನಾಹುತಗಳಾಗುತ್ತವೆ ಅನ್ನೋದನ್ನು ಪೋಷಕರು ಗಮನ ಹರಿಸದೆ ಮೊದಲು ತಮ್ಮ ಮಕ್ಕಳನ್ನು ಸುಮ್ಮನೆ ಮಾಡಲು ಮೊಬೈಲ್ ಅನ್ನು ಕೊಟ್ಟುಬಿಡುತ್ತಾರೆ. ಆದರೆ ಅವರು ಅದರಲ್ಲಿ ಏನು ವೂಕ್ಷಣೆ ಮಾಡುತ್ತಾರೆ ಎಂದು ಗಮನಿಸುವುದಿಲ್ಲ. ಅಪ್ಪಿತಪ್ಪಿಯೂ ಪೋಷಕರು ತಮ್ಮ ಮಕ್ಕಳು ಅತ್ತರೂ ಪರವಾಗಿಲ್ಲ ಅವರ ಕೈಗೆ ಮೊಬೈಲ್ ಫೋನ್ ಕೊಡುವ ಅಭ್ಯಾಸವನ್ನು ಮಾಡಬೇಡಿ.
ಅದರಲ್ಲೂ ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿಬಿಟ್ಟಿವೆ.
ಆತ್ಮಹತ್ಯೆ ತಡೆ ಸಹಾಯವಾಣಿ. ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ತೆರೆಯಲಾಗಿದೆ. ಸಹಾಯವಾಣಿ ಸಂಖ್ಯೆ ಇಂತಿದೆ 080 - 25497777.












Click it and Unblock the Notifications