Bengaluru PG: ನಷ್ಟಕ್ಕೆ ಸಿಲುಕಿದ ಬೆಂಗಳೂರು ಪಿಜಿಗಳು, ಈ ಏರಿಯಾದಲ್ಲೇ 100 ಪಿಜಿ ಬಂದ್!
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೇಯಿಂಗ್ ಗೆಸ್ಟ್ (ಪಿಜಿ) ಒಂದು ದೊಡ್ಡ ಉದ್ಯಮವಾಗಿಬಿಟ್ಟಿದೆ. ಗಲ್ಲಿ ಗಲ್ಲಿಗಳಲ್ಲಿ ನಾಯಿಕೊಡೆಗಳಂತೆ ಪಿಜಿಗಳು ತಲೆ ಎತ್ತಿವೆ. ಆರಂಭದಲ್ಲಿ ಪಿಜಿ ಕಟ್ಟಡ ಮಾಲೀಕರು ಕೈತುಂಬಾ ಹಣ ಸಂಪಾದಿಸಿ ಶ್ರೀಮಂತರಾಗಿ ಮೆರೆಯುತ್ತಿದ್ದರು. ದಿನಗಳು ಕಳೆದಂತೆ ಪಿಜಿ ಉದ್ಯಮದ ಮೇಲೆ ನಷ್ಟದ ಕರಿನೆರಳು ಬಿದ್ದಿದೆ. ಎಲ್ಲವೂ ಚೆನ್ನಾಗಿಯೇ ಇತ್ತು ಎಂದುಕೊಂಡಿದ್ದ ಪಿಜಿ ಮಾಲೀಕರು ಈಗ ನಷ್ಟದ ಕೂಪಕ್ಕೆ ಸಿಲುಕಿದ್ದಾರೆ. ಈ ಎರಡು ಕಾರಣಗಳಿಂದಾಗಿ ಪಿಜಿಗಳು ನಷ್ಟದಲ್ಲಿ ನಡೆಯುತ್ತಿವೆ ಎಂದು ವರದಿಯಾಗಿದೆ.
ಹೌದು ಕಳೆದ ಆಗಸ್ಟ್‌ನಲ್ಲಿ ಬೆಂಗಳೂರಿನ ಪೇಯಿಂಗ್ ಗೆಸ್ಟ್ ಹೌಸ್‌ನಲ್ಲಿ ಕೊಲೆ ಪ್ರಕರಣವೊಂದು ನಡೆದಿತ್ತು. ಅಲ್ಲಿವರೆಗೆ ಪಿಜಿಗಳಿಗೆ ಮೂಗುದಾರವೇ ಇರಲಿಲ್ಲ. ಈ ಕೊಲೆ ಪ್ರಕರಣ ನಡೆದ ಬಳಿಕ ಬಿಬಿಎಂಪಿ ಮತ್ತು ಬೆಂಗಳೂರು ಪೊಲೀಸರು ಪಿಜಿಗಳ ಮೇಲೆ ನಿಗಾ ಇಟ್ಟಿದ್ದಾರೆ. ಕೋವಿಡ್ ಬಳಿಕ ಪೊಲೀಸರು ಹಾಗೂ ಬಿಬಿಎಂಪಿ ಕ್ರಮಗಳಿಂದ ಬೆಂಗಳೂರಿನ ಪಿಜಿಗಳಲ್ಲಿ ಶೇ 25ರಷ್ಟು ನಷ್ಟ ಎದುರಾಗಿದೆ ಎಂದು ತಿಳಿದುಬಂದಿದೆ.

ಪಿಜಿಗಳಲ್ಲಿ ಈಗ ಹೇರಲಾಗುತ್ತಿರುವ ಹೊಸ ನಿಯಮಗಳು, ಟೆಕ್ ಉದ್ಯೋಗ ಕಡಿತ ಮತ್ತು ನೀರು ಮತ್ತು ವಿದ್ಯುತ್ ಬಿಲ್‌ಗಳ ದರ ಏರಿಕೆ ಸೇರಿದಂತೆ ಬೆಂಗಳೂರಿನ ಪೇಯಿಂಗ್ ಗೆಸ್ಟ್‌ಗಳು ಮೊದಲಿಗಿಂತಲೂ ನಷ್ಟ ಅನುಭವಿಸುತ್ತಿವೆ. ಕೋವಿಡ್ ಸಾಂಕ್ರಾಮಿಕ ರೋಗದ ಸಮಯದಲ್ಲಿ ನೆಲಕಚ್ಚಿದ್ದ ಪಿಜಿ ಉದ್ಯಮ ಈಗಷ್ಟೇ ಚೇತರಿಸಿಕೊಂಡಿದ್ದವು. ಆದರೆ ಇತ್ತೀಚಿನ ಬೆಳವಣಿಗಳಿಂದಾಗಿ ನಷ್ಟದ ಹೊಡೆತಕ್ಕೆ ಸಿಲುಕಿವೆ ಎಂದು ಹೇಳಲಾಗುತ್ತಿದೆ.
ಕಳೆದ ವರ್ಷದಲ್ಲಿ ಬೆಂಗಳೂರು ನಗರದಲ್ಲಿ ಅನೇಕ ಪಿಜಿಗಳು ಬಂದ್ ಆಗಿವೆ. ಇನ್ನೂ ಹಲವು ತೆರೆಯಲು ಕಷ್ಟಪಡುತ್ತಿವೆ ಎಂದು ಉದ್ಯಮದಲ್ಲಿರುವವರು ಹೇಳಿದ್ದಾರೆ. ನಗರದ ಪ್ರತಿ ಏರಿಯಾದಲ್ಲೂ ಕನಿಷ್ಠ ಎರಡು ಪಿಜಿಗಳಾದರೂ ಬಂದ್ ಆಗಿವೆ. ಅಲ್ಲದೆ ಮೊದಲಿನಂತೆ ಪಿಜಿಗಳಿಗೆ ಡಿಮ್ಯಾಂಡ್ ಕೂಡ ಕಡಿಮೆಯಾಗಿದ್ದು, ಪಿಜಿ ಮಾಲೀಕರ ಆದಾಯ ಮೊದಲಿಗಿಂತ ಶೇ 25ರಷ್ಟು ಕಳೆದುಕೊಳ್ಳುತ್ತಿದ್ದಾರೆ. ಐಟಿ ಉದ್ಯೋಗಿಗಳೇ ಹೆಚ್ಚಾಗಿರುವ ಮಾರತ್‌ಹಳ್ಳಿ ಮತ್ತು ಸರ್ಜಾಪುರದಂತಹ ಸ್ಥಳಗಳಲ್ಲೇ ಪಿಜಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮುಚ್ಚಲ್ಪಡುತ್ತಿವೆ ಎಂದು ವರದಿಯಾಗಿದೆ.

ಮಹದೇವಪುರದಲ್ಲಿ 100 ಪಿಜಿ ಬಂದ್
ಇದರ ಜೊತೆಗೆ ನಿಯಮಗಳನ್ನ ಉಲ್ಲಂಘಿಸಿದ್ದಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೂಡ ಪಿಜಿ ಮಾಲೀಕರ ಮೇಲೆ ಗದಾಪ್ರಹಾರ ನಡೆಸುತ್ತಿದ್ದಾರೆ. 40 ಅಡಿಗಿಂತಲೂ ಕಡಿಮೆ ಅಗಲವಿರುವ ವಸತಿ ಪ್ರದೇಶಗಳಲ್ಲಿ ಪಿಜಿಗಳನ್ನು ನಡೆಸಬಾರದು ಎಂಬ ನಿಯಮವೂ ಸೇರಿದಂತೆ ಸುರಕ್ಷತೆ ಮತ್ತು ಸ್ವಚ್ಛತೆಯ ಮೇಲೆ ಕೇಂದ್ರೀಕರಿಸಿದ ಹೆಚ್ಚಿನ ರೂಲ್ಸ್‌ಗಳಿಂದಾಗಿ ಮಹದೇವಪುರದಲ್ಲಿ ಸುಮಾರು 100 ಪಿಜಿಗಳು ಮುಚ್ಚಿವೆ.
ನಗರದಲ್ಲಿ ನೀರು ಮತ್ತು ವಿದ್ಯುತ್ ದರ ಏರಿಕೆಯಿಂದಾಗಿ ಗ್ರಾಹಕರ ಕೊರತೆ ಎದುರಾಗುತ್ತಿದೆ. ಹಾಗಾಗಿ ಕೈಗೆಟುಕುವ ಬೆಲೆಯಲ್ಲಿ ವ್ಯವಹಾರ ನಡೆಸುವುದು ಕಷ್ಟ ಎಂದು ಬೆಂಗಳೂರು ಪಿಜಿ ಮಾಲೀಕರ ಸಂಘ ಹೇಳಿಕೊಂಡಿದೆ. ಗ್ರಾಹಕರಲ್ಲಿ ಅನೇಕರು ವಿದ್ಯಾರ್ಥಿಗಳು, ಹೆಚ್ಚಿನ ಬಾಡಿಗೆಯಿಂದ ಅವರ ಮೇಲೆ ಹೊರೆ ಹಾಕಲು ನಾವು ಬಯಸುವುದಿಲ್ಲ. ಆದರೆ ಈಗ ಹೆಚ್ಚುತ್ತಿರುವ ವೆಚ್ಚಗಳು ಮತ್ತು ಬಿಬಿಎಂಪಿ ರೂಲ್ಸ್ ಪಾಲಿಸಬೇಕಾದರೆ ಜೇಬು ಸುಡುತ್ತದೆ ಎಂದಿದ್ದಾರೆ. ಹಾಗಾಗಿ ನಷ್ಟದಲ್ಲೇ ವ್ಯವಹಾರ ನಡೆಯುತ್ತಿದೆ ಎಂದು ಮಾಲೀಕರು ಕಳವಳ ವ್ಯಕ್ತಪಡಿಸಿದ್ದಾರೆ.












Click it and Unblock the Notifications