ಬೆಂಗಳೂರು ಅಭಿವೃದ್ಧಿಗೆ 1 ಲಕ್ಷದ 15 ಸಾವಿರ ಕೋಟಿ ರೂ: ಸಿದ್ದರಾಮಯ್ಯ ಹೇಳಿದ್ದೇನು ?
ಬೆಂಗಳೂರು ವೇಗವಾಗಿ ಅಭವೃದ್ಧಿಯಾಗುತ್ತಿದ್ದು ಬೆಂಗಳೂರಿನ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ದೊಡ್ಡ ಮಟ್ಟದ ಅನುದಾನವನ್ನು ನಿರೀಕ್ಷೆ ಮಾಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಬೆಂಗಳೂರು ನಗರ ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ಈಗಾಗಲೇ ಕೇಳಿರುವ ಅನುದಾನವನ್ನು ಕೇಂದ್ರ ಸರ್ಕಾರ / 16ನೇ ಹಣಕಾಸು ಆಯೋಗವು ನೀಡದಿದ್ದರೆ ಬೆಂಗಳೂರು ಅಭಿವೃದ್ಧಿಗೆ 1 ಲಕ್ಷದ 15 ಸಾವಿರ ಕೋಟಿ ರೂಪಾಯಿಗಳನ್ನು ಒದಗಿಸಬೇಕು ಎಂದು 16ನೇ ಹಣಕಾಸು ಆಯೋಗಕ್ಕೆ ಮನವಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕದಲ್ಲಿ ಏಳು ಜಿಲ್ಲೆಗಳನ್ನು ಒಳಗೊಂಡಿದೆ. 5 ಜಿಲ್ಲೆಗಳ ವಾರ್ಷಿಕ ವರಮಾನವು ರಾಜಸ್ಥಾನ, ಬಿಹಾರ, ಉತ್ತರ ಪ್ರದೇಶ, ಒರಿಸ್ಸಾ ಹಾಗೂ ಪಶ್ಚಿಮ ಬಂಗಾಳದ ಸರಿಸಮಾನವಿದೆ. ಕರ್ನಾಟಕದ ಮಲೆನಾಡು ಪ್ರದೇಶಗಳಲ್ಲಿ ಪ್ರವಾಹ ಹಾಗೂ ಭೂ ಕುಸಿತದಂತಹ ಸಮಸ್ಯೆಗಳು ತಲೆದೋರುತ್ತವೆ. ಅದ್ದರಿಂದ ವಿಶೇಷ ಅನುದಾನ ಒದಗಿಸಬೇಕು ಎಂದು ಕೋರಿದ್ದೇವೆ ಎಂದು ಅವರು ಹೇಳಿದ್ದಾರೆ.

ಮುಂದುವರಿದು ಕೇಂದ್ರ ಸರ್ಕಾರದ ವಿವೇಚನಾ ಅನುದಾನವು 0.3% ಗಿಂತ ಹೆಚ್ಚಾಗಬಾರದು ಎಂದು ಮನವಿ ಸಲ್ಲಿಸಲಾಗಿದೆ. ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಮೂರು ಮಾನದಂಡಗಳ ಪ್ರಕಾರ ನಡೆದುಕೊಂಡಿರುವುದು ಕರ್ನಾಟಕ ರಾಜ್ಯ, ಹಾಗಾಗಿ ಆರ್ಥಿಕವಾಗಿ ರಾಜ್ಯ ಸದೃಢವಾಗಿದೆ ಎಂದು ಆಯೋಗದ ಗಮನಕ್ಕೆ ತರಲಾಗಿದೆ. ಹೆಚ್ಚುವರಿ ಮನವಿಯಲ್ಲಿಯೂ ಹೇಳಲಾಗಿದೆ. ಇದೊಂದು ಸಾಂವಿಧಾನಿಕ ಸಂಸ್ಥೆಯಾಗಿರುವುದರಿಂದ ಎಲ್ಲಾ ರಾಜ್ಯಗಳಿಗೂ ನ್ಯಾಯ ಒದಗಿಸುವ ಕೆಲಸವಾಗಬೇಕು. ಕರ್ನಾಟಕಕ್ಕೆ ಅನ್ಯಾಯವಾಗಬಾರದು ಎಂದು ಕೋರಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಲ್ಲದೇ ಕರ್ನಾಟಕದಷ್ಟೇ ಕೇರಳ, ತಮಿಳುನಾಡಿಗೂ ನಷ್ಟವಾಗಿದ್ದರೂ, ಅವರಿಗೆ ರಾಜಸ್ವ ಕೊರತೆ ಅನುದಾನವನ್ನು ನೀಡಲಾಗಿದೆ. ನಮಗೇಕೆ ಕೊಟ್ಟಿಲ್ಲ ಎಂದು ಪ್ರಶ್ನಿಸಲಾಗಿದೆ. ಜನಸಂಖ್ಯೆ ಆಧಾರದ ಮೇಲೆ ಅನುದಾನ ಹಂಚಿಕೆ ಮಾಡಬಾರದು ಎಂದು ನಾವು ಹೇಳುವುದಿಲ್ಲ. ಆದರೆ ತೆರಿಗೆ ಹಂಚಿಕೆ ವೈಜ್ಞಾನಿಕವಾಗಿ ಮಾಡಬೇಕು ಎಂದು ಕೋರಲಾಗಿದೆ. ಈ ಬಗ್ಗೆ ಇತರೆ ರಾಜ್ಯಗಳು ಧ್ವನಿ ಎತ್ತಿವೆ. ಸಭೆಯು ಒಂದೂ ಕಾಲ ಗಂಟೆಗಳ ಕಾಲ ಸೌಹಾರ್ದಯುತವಾಗಿ ನಡೆದಿದೆ. ಆಯೋಗದ ಅಧ್ಯಕ್ಷರು ನಮ್ಮ ಸಲಹೆಗಳನ್ನು ಸ್ವೀಕರಿಸಿದ್ದಾರೆ. ನಮ್ಮ ಕೋರಿಕೆಗಳನ್ನು ಈಡೇರಿಸುತ್ತಾರೆ ಎನ್ನುವ ಭರವಸೆಯನ್ನು ನಾವು ಹೊಂದಿದ್ದೇವೆ ಎಂದು ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹಾಗೂ 16ನೇ ಹಣಕಾಸು ಆಯೋಗಕ್ಕೆ ಕರ್ನಾಟಕ ಸರ್ಕಾರವು ಹಲವು ಬೇಡಿಕೆಗಳನ್ನು ಸಲ್ಲಿಸಿದೆ. ರಾಜ್ಯ ಸರ್ಕಾರವು ಕೇಂದ್ರಕ್ಕೆ ತೆರಿಗೆಯನ್ನು ಹೆಚ್ಚು ಪಾವತಿ ಮಾಡುತ್ತಿದೆ. ಆದರೆ ಕರ್ನಾಟಕಕ್ಕೆ ತೆರಿಗೆ ನೀತಿಯಲ್ಲಿ ಅನ್ಯಾಯವಾಗುತ್ತಿದೆ ಎನ್ನುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುನರುಚ್ಚರಿಸಿದ್ದಾರೆ.












Click it and Unblock the Notifications