ಬೆಳಗಾವಿ: ಪತ್ನಿಯ ಶೀಲ ಶಂಕಿಸಿ ಶೆಡ್‌ನಲ್ಲಿ ಕೂಡಿಟ್ಟ ಪೊಲೀಸ್ ಪೇದೆ
ಬೆಳಗಾವಿ, ಆಗಸ್ಟ್ 31: ಜನರಿಗೆ ನ್ಯಾಯ ಕೊಡಿಸಬೇಕಿದ್ದ, ಮಹಿಳೆಯರ ರಕ್ಷಣೆ ಮಾಡಬೇಕಿದ್ದ, ಮಹಿಳೆಯರ ರಕ್ಷಣೆ ಸದಾ ಸಿದ್ಧರಿರಬೇಕಿದ್ದ ಪೊಲೀಸ್ ಸಿಬ್ಬಂದಿಯೇ ಹೆಂಡತಿಯ ಶೀಲ ಶಂಕಿಸಿ ಶೆಡ್‌ನಲ್ಲಿ ಕೂಡಿಟ್ಟು ಮಾರಣಾಂತಿಕ ಹಲ್ಲೆ ಮಾಡಿದ್ದಲ್ಲದೇ ಮನಸೋ ಇಚ್ಛೆ ಮೈಮೇಲೆ ಬರೆ ಏಳೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ವಿಜಯಪುರ ಜಿಲ್ಲೆಯ ತಿಕೋಟಾದಲ್ಲಿ ಪೊಲೀಸ್ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ವ್ಯಕ್ತಿಯೊಬ್ಬ ತನ್ನ ಪತ್ನಿಯ ಶೀಲ ಶಂಕಿಸಿ ಕಳೆದ ಎರಡು ತಿಂಗಳಿನಿಂದ ಶೆಡ್‌ನಲ್ಲಿ ಕೂಡಿಟ್ಟಿದ್ದಾನೆ. ಅಲ್ಲದೇ ಮನಬಂದಂತೆ ಹಲ್ಲೆ ಮಾಡಿ ಬರೆ ಹಾಕಿದ್ದಾನೆ ಎಂದು ಪತ್ನಿ ಪ್ರತಿಮಾ ಯಲ್ಲಪ್ಪ ಅಸಗೆ ಆರೋಪಿಸಿದ್ದಾರೆ.

ರಾಯಬಾಗ ತಾಲೂಕಿನ ನಿಡಗುಂಡಿ ಗ್ರಾಮದ ಪ್ರತೀಮಾಗೆ ಅಥಣಿ ತಾಲೂಕಿನ ಕುನ್ನಾಳ ಗ್ರಾಮದ ಯಲ್ಲಪ್ಪ ಅಗಸೆಗೆ ಕಳೆದ 10 ವರ್ಷಗಳ ಹಿಂದೆಯೇ ಮದುವೆ ಮಾಡಿಕೊಡಲಾಗಿತ್ತು. ಸದ್ಯ ಯಲ್ಲಪ್ಪ ವಿಜಯಪುರ ತಾಲೂಕಿನ ತಿಕೋಟಾದಲ್ಲಿ ಪೊಲೀಸ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾನೆ. ಇವರಿಗೆ ಮೂವರು ಮಕ್ಕಳಿದ್ದಾರೆ.
ಪ್ರತೀಮಾ ಜೊತೆ 10 ವರ್ಷಗಳ ತುಂಬು ಸಂಸಾರ ನಡೆಸಿದ್ದ ಯಲ್ಲಪ್ಪ ಇತ್ತೀಚಿಗೆ ಪತ್ನಿಯ ಶೀಲ ಶಂಕಿಸಿ, ಶೆಡ್‌ನಲ್ಲಿ ಕೂಡಿ ಹಾಕಿದ್ದಾನೆ. ಅಲ್ಲದೇ ಮನಬಂದಂತೆ ಹಲ್ಲೆ ಮಾಡಿ ಮುಖ, ಕುತ್ತಿಗೆ, ಕೈ ಕಾಲು ಸುಟ್ಟು ಹೋಗುವಂತೆ ಬರೆ ಹಾಕಿದ್ದಾನೆ. ನನ್ನ ಪತಿ ಮಾತ್ರ ನನ್ನ ಮೇಲೆ ಹಲ್ಲೆ ಮಾಡಿಲ್ಲ. ಬದಲಾಗಿ ಅವನ ಅಕ್ಕ, ತಂಗಿಯರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನುವುದು ಪ್ರತೀಮಾ ಆರೋಪವಾಗಿದೆ.
ನನ್ನ ತವರು ಮನೆಯವರು ನನ್ನನ್ನು ನೋಡಲು ಬಂದಾಗ ಅವರಿಗೂ ಸಹ ನನ್ನ ಪತಿ ಬೆದರಿಕೆ ಹಾಕಿದ್ದಾರೆ. ಅಲ್ಲದೇ ನಿಮ್ಮ ಮಗಳು ಬೇರೆಯವರೊಂದಿಗೆ ಓಡಿ ಹೋಗಿದ್ದಾಳೆ ಎಂದು ದೂರು ಕೊಟ್ಟು ನಿಮ್ಮ ಮೇಲೆಯೇ ಕೇಸ್ ದಾಖಲಿಸುತ್ತೇನೆ ಎಂದು ನನ್ನ ಪೋಷಕರನ್ನು ಹೆದರಿಸಿದ್ದಾರೆ. ಶೆಡ್‌ನಲ್ಲಿ ಯಾರೂ ಇಲ್ಲದ ವೇಳೆ ತಪ್ಪಿಸಿಕೊಂಡು ಬಂದು ಬೆಳಗಾವಿಯ ಮಹಿಳಾ ಸಂಘದ ಸಹಾಯದಿಂದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನಾಳೆ ಬೆಳಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಅವರನ್ನು ಭೇಟಿಯಾಗಿ ನನ್ನ ಪತಿಯ ಮೇಲೆ ದೂರು ಕೊಡುವುದಾಗಿ ಪ್ರತೀಮಾ ತಿಳಿಸಿದ್ದಾರೆ.












Click it and Unblock the Notifications