ವಾಟಾಳ್ ಜೊತೆ ಪ್ರತಿಭಟನೆಗೆ ಮರಾಠಿ ಎಮ್ಮೆಗಳ ಹಿಂದೇಟು?

ಬೆಳಗಾವಿ, ನ 6: ಕನ್ನಡಕ್ಕಾಗಿ ಕೈಎತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತೆ ಎಂದಿದ್ದಾರೆ ದಾರ್ಶನಿಕರು. ಕನ್ನಡ ನಾಡುನುಡಿಗೆ ಧಕ್ಕೆ, ಚ್ಯುತಿ ಬಂದಾಗ ಹೋರಾಟದ ಮಂಚೂಣಿಯಲ್ಲಿ ಇರುವವರು ನಮ್ಮ ವಾಟಾಳ್ ನಾಗರಾಜ್.

ವಾಟಾಳ್ ಮಾಡದ ಪ್ರತಿಭಟನೆಯಿಲ್ಲ, ವಾಟಾಳ್ ಪ್ರತಿಭಟನೆಗೆ ಪೊರಕೆ, ಈರುಳ್ಳಿ, ಡೀಸೆಲ್, ತಮಟೆ, ಕೋಣ, ಕರು, ಹಾಲು, ಅದು ಇದು ಸಾಥ್ ನೀಡಿದ್ದು ನಮಗೆಲ್ಲರಿಗೂ ಗೊತ್ತಿರುವ ವಿಚಾರ. ಪ್ರತಿಭಟನೆಯನ್ನು ವೈವಿಧ್ಯಮಯವಾಗಿ ಮಾಡಿ ತೋರಿಸುವವರು ವಾಟಾಳ್.

ವಾಟಾಳರ ಪ್ರತಿಭಟನೆಗೆ ಹೆಚ್ಚುಕಮ್ಮಿ ಬೆಂಗಳೂರು ಮೈಸೂರು ಬ್ಯಾಂಕ್ ಸರ್ಕಲೇ ಪರ್ಮನೆಂಟ್ ಅಡ್ಡ. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ವಾಟಾಳ್ ಪ್ರತಿಭಟನೆಗೆಂದೇ ದಿನದ ಕೆಲವು ಗಂಟೆಯಲ್ಲಿ 2-3 ಕಾನ್ಸ್ ಸ್ಟೇಬಲ್ ಗಳನ್ನು ನಿಯೋಜಿಸಲಾಗುತ್ತೆ. (ವಾಟಾಳ್ ಸಂಗಡಿಗ ಗೋಪಿ ಇಡೀ ಕುಟುಂಬ ನೇಣಿಗೆ)

ಪ್ರತಿಭಟನೆಯ ಸಮಯದಲ್ಲಿ ಕೆಜಿ ರಸ್ತೆ, ಮೆಜಿಸ್ಟಿಕ್ ಆಸುಪಾಸಿನಲ್ಲಿ ಸ್ವಲ್ಪ ಹೊತ್ತು ಟ್ರಾಫಿಕ್ ಜಾಮ್ ಆಗುತ್ತೆ ಅನ್ನೋದು ಬಿಟ್ಟರೆ, ಪೊಲೀಸರಿಗಾಗಲಿ ಅಥವಾ ಜನಸಾಮಾನ್ಯರಿಗಾಗಲಿ ಹೆಚ್ಚಿನ ಅಡಚಣೆ ಉಂಟಾಗುವುದಿಲ್ಲ.

ಆದರೆ, ಈ ಬಾರಿ ಬೆಂಗಳೂರು ಬಿಟ್ಟು ವಾಟಾಳ್ ಸಾಹೇಬ್ರು ತಮ್ಮ ಪ್ರತಿಭಟನೆಯನ್ನು ಕುಂದನಗರಿ ಬೆಳಗಾವಿಯಲ್ಲಿ ಬುಧವಾರ (ನ 5) ನಡೆಸಿದ್ದು ವಿಶೇಷವಾಗಿತ್ತು.

ಸುಮಾರು 400 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಸುವರ್ಣಸೌಧ ಭೂತ ಬಂಗಲೆಯಂತಾಗಿದೆ. ಇಲ್ಲಿಗೆ ಯಾರೂ ಸಚಿವರೂ ಬರುವುದಿಲ್ಲ, ಅಧಿಕಾರಿಗಳೂ ಬರುವುದಿಲ್ಲ. ನಾವೇ ಇಲ್ಲಿ ಸಭೆ ನಡೆಸುತ್ತೇವೆಂದು ಎರಡು ಎಮ್ಮೆಗಳೊಂದಿಗೆ ಸುವರ್ಣಸೌಧದ ಮುಂದೆ ವಾಟಾಳ್ ಪ್ರತಿಭಟನೆ ನಡೆಸುತ್ತಿದ್ದರು.

ಅಲ್ಲಿ ಬೆರಳಣಿಕೆಯಷ್ಟು ಜನ ಮಾತ್ರ ಸೇರಿದ್ದರು. ಪ್ರತಿಭಟನೆಗಾಗಿ ಎರಡು ಎಮ್ಮೆಗಳನ್ನು ಸಿಂಗರಿಸಿ ಕರೆತರಲಾಗಿತ್ತು. ಪ್ರತಿಭಟನೆಯ ನಂತರ ಎಮ್ಮೆಗಳನ್ನು ಹಿಡಿದುಕೊಂಡು ವಾಟಾಳ್ ಸುವರ್ಣ ಸೌಧಕ್ಕೆ ಹೋಗಬೇಕಾಗಿತ್ತು.

ಅದರೆ, ಅದ್ಯಾಕೋ ಏನೋ ಎಮ್ಮೆಗಳು ಮಾತ್ರ ಜಪ್ಪಯ್ಯ ಅಂದ್ರೂ ವಾಟಾಳ್ ಹತ್ತಿರ ಹೋಗಲು ಒಲ್ಲೆ ಅನ್ನುತ್ತಿತ್ತು. ಎಮ್ಮೆಗಳನ್ನು ಕರೆತಂದವರು ಏನೇ ಪ್ರಯತ್ನ ಪಟ್ಟರೂ ವಾಟಾಳ್ ಬಳಿ ಹೋಗಲು ಎಮ್ಮೆಗಳು ಮನಸ್ಸೇ ಮಾಡುತ್ತಿರಲಿಲ್ಲ.

ಸುಮಾರು ಹದಿನೈದು ನಿಮಿಷ ಎಮ್ಮೆಯ ಮಾಲೀಕ ಹರಸಾಹಸ ಪಟ್ಟು ಹೇಗೋ ವಾಟಾಳ್ ಬಳಿ ಎಮ್ಮೆಗಳನ್ನು ಕರೆದುಕೊಂಡು ಬಂದು ಧನ್ಯತೆಯ ನಗುವನ್ನು ಬೀರಿದ. ಎಮ್ಮೆಗಳಿಗೆ ಕಟ್ಟಿದ ಹಗ್ಗ ಕೈಗೆ ಸಿಕ್ಕಿದ ಕೂಡಲೇ ವಾಟಾಳ್ ಸರಕಾರಕ್ಕೆ ಧಿಕ್ಕಾರ ಕೂಗುತ್ತಾ ಸುವರ್ಣ ಸೌಧಕ್ಕೆ ಮುನ್ನುಗ್ಗಿದರು, ಸ್ವಲ್ಪ ದೂರ ಹೋಗುವಷ್ಟರಲ್ಲೇ ಬನ್ನಿ ಸಾರ್, ವ್ಯಾನ್ ಹತ್ತಿ ಎಂದು ನಗುಮುಖದಿಂದ ಪೊಲೀಸರು ವಾಟಾಳ್ ಅವರನ್ನು ಬಂಧಿಸಲು ಅಲ್ಲಿ ಹಾಜರಿದ್ದರು.

ಎಂದಿನಂತೆ ಪೊಲೀಸ್ ವ್ಯಾನ್ ಹತ್ತುವ ಮುನ್ನ ವಾಟಾಳ್, ಬೆಳಗಾವಿಯ ಸುವರ್ಣಸೌಧದಲ್ಲಿ ವರ್ಷದ ಮೂರೂ ಅಧಿವೇಶನ ನಡೆಯಬೇಕು. ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ಕಟ್ಟಡ ಸದುಪಯೋಗವಾಗಬೇಕು.

ರಾಜ್ಯ ವಿಭಜನೆಯ ಬಗ್ಗೆ ಮಾತನಾಡುವ ಉಮೇಶ್ ಕತ್ತಿ ಜೊತೆ ಮಾತನಾಡುವುದು ಒಂದೇ ಹುಚ್ಚಾಸ್ಪತ್ರೆಯಲ್ಲಿ ಇರುವವರ ಜೊತೆ ಮಾತನಾಡುವುದೂ ಒಂದೇ ಎಂದು ಡೈಲಾಗ್ ಉದುರಿಸಿ ವ್ಯಾನ್ ಹತ್ತಿ ಪ್ರತಿಭಟನೆಗೆ ಮಂಗಳ ಹಾಡಿದರು.

ಪೊಲೀಸ್ ಬಂಧನ, ಬಿಡುಗಡೆಯ ನಂತರ ವ್ಯಾನ್ ನಿಂದ ಇಳಿದ ಬಂದ ವಾಟಾಳ್ ನಾಗರಾಜ್ ಅವರಿಗೆ ಕಾಡಿದ ಪ್ರಶ್ನೆಯೆಂದರೆ ಎಮ್ಮೆಗಳು ಯಾಕೆ ನನ್ನ ಬಳಿ ಬರಲೊಪ್ಪಲಿಲ್ಲ ಎನ್ನುವುದು. ಕೊನೆಗೆ ಗೊತ್ತಾಗಿದ್ದು, ಆ ಎಮ್ಮೆ ಮಾಲೀಕ ಮರಾಠಿಯವನು, ಹಾಗಾಗಿ ಅದು ಮರಾಠಿ ಎಮ್ಮೆ ಎಂದು. ಆದರೆ ಮಾಲೀಕ ಮತ್ತು ಎಮ್ಮೆ ಇರುವುದು ನಮ್ಮ ರಾಜ್ಯದ ಮಣ್ಣಿನಲ್ಲಿ ಅನ್ನೋದು ಕೂಡಾ ಅಷ್ಟೇ ಸತ್ಯವಾಗಿತ್ತು.

ಇತ್ತೀಚಿನ ದಿನಗಳಲ್ಲಿ ವಾಟಾಳ್ ನಾಗರಾಜ್ ಅವರ ಪ್ರತಿಭಟನೆ ಅನ್ನೋದು 'ತಮಾಷೆಯ ಘಟನೆ' ಯಂತಾಗಿದೆ ಅಂದರೆ ಅದಕ್ಕೆ ವಾಟಾಳ್ ನಾಗರಾಜ್ ಬೇಸರಿಕೊಳ್ಳಬಾರದು ಅನ್ನೋದು ನಮ್ಮ ವಿನಂತಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+